‘ನನ್ನಂತೆ ಯಾರಿರಲಿಲ್ಲ, ಮುಂದೆ ಯಾರೂ ಬರಲ್ಲ’; ಇಳಯರಾಜ ಹೇಳಿಕೆ ಕೇಳಿ ಬಂತು ನೆಗೆಟಿವ್ ಕಮೆಂಟ್
ಇಳಯರಾಜ ಅವರಿಗೆ ಈಗ 81 ವರ್ಷ ವಯಸ್ಸು. ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನೀಡಿದ ‘ನನ್ನಂತೆ ಮೊದಲು ಯಾರೂ ಇರಲಿಲ್ಲ, ಮುಂದೆ ಯಾರೂ ಬರಲ್ಲ’ ಎಂಬ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಅತಿ ಆತ್ಮವಿಶ್ವಾಸ ಎಂದು ಟೀಕಿಸಿದರೆ, ಇನ್ನು ಕೆಲವರು ಅವರ ಸಾಧನೆಗಳನ್ನು ಗಮನಿಸಿ ಅವರ ಹೇಳಿಕೆಯನ್ನು ಸಮರ್ಥಿಸುತ್ತಿದ್ದಾರೆ.

ಸಂಗೀತ ಸಂಯೋಜಕ ಇಳಯರಾಜ (Ilaiyaraaja) ಅವರಿಗೆ ಈಗ 81 ವರ್ಷ. ಇನ್ನು ಕೆಲವೇ ದಿನಗಳಲ್ಲಿ (ಜೂನ್ 3) ಅವರಿಗೆ 82 ವರ್ಷ ತುಂಬಲಿದೆ. ಅವರು ಅನೇಕ ಹಾಡುಗಳಿಗೆ ಜೀವ ತುಂಬಿದ್ದಾರೆ. ಅವರ ಬಗ್ಗೆ ಅವರಿಗೇ ಹೆಮ್ಮೆ ಇದೆ. ಈಗ ಅವರು ನೀಡಿರುವ ಒಂದು ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ‘ನನ್ನಂತೆ ಈ ಮೊದಲು ಯಾರೂ ಇರಲಿಲ್ಲ, ಮುಂದೆ ಯಾರೂ ಬರೋದಿಲ್ಲ’ ಎಂದು ಹೇಳಿದ್ದಾರೆ. ಅನೇಕರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ಇಳಯರಾಜ ಅವರಿಗೆ ಧಿಮಾಕು ಎಂದಿದ್ದಾರೆ.
ಇಳಯರಾಜ ಅವರು ಇತ್ತೀಚೆಗೆ ರಾಜೇಂದ್ರ ಪ್ರಸಾದ್ ಅವರ ‘ಶಷ್ಟಿಪೂರ್ತಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು. ಈ ಸಿನಿಮಾ ಇಂದು (ಮೇ 30) ರಿಲೀಸ್ ಆಗಿದೆ. ಈ ಸಿನಿಮಾದ ಎಲ್ಲ ಹಾಡುಗಳು ಮೆಚ್ಚುಗೆ ಪಡೆದವು. ಈ ಸಿನಿಮಾದ ಸಂದರ್ಶನದಲ್ಲಿ ಅವರು ತಮ್ಮನ್ನು ತಾವು ಹೊಗಳಿದ್ದಾರೆ. ‘ನನ್ನಂತೆ ಯಾರೂ ಬರೋದಿಲ್ಲ’ ಎಂದಿದ್ದಾರೆ.
‘ನನ್ನ ಬಗ್ಗೆ ನಾನೇ ಮಾತನಾಡಬೇಕು. ಏಕೆಂದರೆ ನನ್ನಂತೆ ಈ ಮೊದಲು ಯಾರೂ ಇರಲಿಲ್ಲ. ಮುಂದೆ ಯಾರೂ ಬರಲ್ಲ. ಸಂಗೀತ ಲೋಕದಲ್ಲಿ ಅನೇಜ ದಿಗ್ಗಜರು ಇದ್ದಾರೆ. ಆದರೆ, ನಾನು ತಲುಪಿದ ಹಂತಕ್ಕೆ ಯಾರೂ ಬಂದಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಎಲ್ಲರೂ ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಆಗಿರುತ್ತಾರೆ. ಗುರುಗಳಿಂದ ಕಲಿತು ಈ ಹಂತಕ್ಕೆ ಬರುತ್ತಾರೆ. ಆದರೆ, ಇಳಯರಾಜ ಅವರು ಹಾಗಲ್ಲ. ಅವರಿಗೆ ನೈಸರ್ಗಿಕವಾಗಿಯೇ ಸಂಗೀತ ಬಂತು. ಅವರು ಸಾವಿರಕ್ಕೂ ಅಧಿಕ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿ ಅವರು ಈ ರೀತಿ ಹೇಳಿಕೆ ಕೊಡೋದು ದೊಡ್ಡದಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; ಕ್ಷಮೆಯ ಜೊತೆ 5 ಕೋಟಿ ರೂಪಾಯಿಗೆ ಡಿಮ್ಯಾಂಡ್
ಇಳಯರಾಜ ಅವರ ಈ ಹೇಳಿಕೆಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿದೆ. ಕೆಲವರು ಇಳಯರಾಜ ಅವರನ್ನು ‘ಓವರ್ಕಾನ್ಫಿಡೆಂಟ್ನಿಂದ ಹೇಳಿದ್ದು’ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನೂ ಕೆಲವರು ಇಳಯರಾಜ ಅವರು ನೀಡಿದ ಹೇಳಿಕೆ ಸರಿ ಇದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








