ಗಳಿಕೆಯಲ್ಲಿ ಇತಿಹಾಸ; ಮೊದಲ ದಿನವೇ ಗರಿಷ್ಠ ಕಲೆಕ್ಷನ್ ಮಾಡಿದ ‘ಎಲ್2: ಎಂಪುರಾನ್’
L2 Empuraan Box Office Collection Day 1: ಮೋಹನ್ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಎಲ್2: ಎಂಪುರಾನ್’ ಚಿತ್ರವು ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಚಿತ್ರವು ಮಲಯಾಳಂ ಚಿತ್ರಗಳ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆಯನ್ನು ಮಾಡಿದೆ. ಕನ್ನಡ ವರ್ಷನ್ನಲ್ಲಿ ಚಿತ್ರಕ್ಕೆ 50 ಲಕ್ಷ ರೂಪಾಯಿ ಗಳಿಕೆಯಾಗಿದೆ.

ಮೋಹನ್ಲಾಲ್ (Mohanlal) ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಎಲ್ 2: ಎಂಪುರಾನ್’ ಚಿತ್ರ ಮಲಯಾಳಂ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿದೆ. ಈ ಚಿತ್ರ ಮೊದಲ ದಿನ ಹಿಂದೆ ಯಾವ ಸಿನಿಮಾಗಳೂ ಮಾಡಿರದಷ್ಟು ಗಳಿಕೆ ಮಾಡಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈದ್ ಪ್ರಯುಕ್ತ ರಜೆಗಳು ಇರುವುದರಿಂದ ಅದು ಚಿತ್ರಕ್ಕೆ ಸಹಕಾರಿ ಆಗುವ ಸೂಚನೆ ಇದೆ. ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಿತು? ಕನ್ನಡ ವರ್ಷನ್ನಿಂದ ಚಿತ್ರಕ್ಕೆ ಸಿಕ್ಕ ಹಣ ಎಷ್ಟು? ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿದೆ ಮಾಹಿತಿ.
‘ಲುಸಿಫರ್’ ಚಿತ್ರ 2019ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈ ಚಿತ್ರಕ್ಕೆ ಪೃಥ್ವಿರಾಜ್ ನಿರ್ದೇಶನ ಇತ್ತು. ಮೋಹನ್ಲಾಲ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಅತಿಥಿ ಪಾತ್ರ ಮಾಡಿದ್ದರು. ಅದೇ ರೀತಿ ಈ ಚಿತ್ರಕ್ಕೆ ಸೀಕ್ವೆಲ್ ಬಂದಿದೆ. ಇದನ್ನು ಪೃಥ್ವಿರಾಜ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 27ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.
‘ಎಲ್ 2: ಎಂಪುರಾನ್’ ಚಿತ್ರ ಮೊದಲ ದಿನ ಬರೋಬ್ಬರಿ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಲಯಾಳಂ ಚಿತ್ರವೊಂದು ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿದ್ದು ಇದೇ ಮೊದಲು ಎಂಬುದು ವಿಶೇಷ. ಈ ಮೊದಲು ಪೃಥ್ವಿರಾಜ್ ನಟನೆಯ ‘ಗೋಟ್ ಲೈಫ್’ ಚಿತ್ರದ ಮೊದಲ ದಿನ 8.95 ಕೋಟಿ ರೂಪಾಯಿ ಗಳಿಸಿತ್ತು. ‘ಲುಸಿಫರ್’ ಚಿತ್ರ 6.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮಲಯಾಳಂ ಸಿನಿಮಾಗಳಲ್ಲಿ ಮೊದಲ ದಿನ ಇಷ್ಟು ದೊಡ್ಡ ಓಪನಿಂಗ್ ಸಿಕ್ಕಿರುವುದರಿಂದ ಸಿನಿಮಾದ ಒಟ್ಟಾರೆ ಗಳಿಕೆಯಲ್ಲಿ ದಾಖಲೆ ನಿರ್ಮಾಣ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಮುಸ್ಲಿಮರ ಬಳಿ ಮೋಹನ್ಲಾಲ್ ಕ್ಷಮೆ ಕೇಳಬೇಕು’; ಮಾಡಿದ ತಪ್ಪೇನು?
‘ಎಲ್ 2: ಎಂಪುರಾನ್’ ಚಿತ್ರ ಮಲಯಾಳಂ ಮಾತ್ರವಲ್ಲದೆ, ಹಿಂದಿ, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ ವರ್ಷನ್ನಿಂದ ಈ ಚಿತ್ರಕ್ಕೆ ಕೇವಲ 50 ಲಕ್ಷ ರೂಪಾಯಿ ಹರಿದು ಬಂದಿದೆ. ಹಿಂದಿ ಭಾಷೆಯಲ್ಲೂ ಚಿತ್ರಕ್ಕೆ ದೊಡ್ಡ ಗಳಿಕೆ ಆಗಿಲ್ಲ. ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 8+ ರೇಟಿಂಗ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Fri, 28 March 25