ತೆಲುಗಿನ ‘ಕಣ್ಣಪ್ಪ’ ಟೀಸರ್ ಬಿಡುಗಡೆ, ‘ಬೇಡರ ಕಣ್ಣಪ್ಪ’ನ ಕತೆಯನ್ನೇ ತಿರುಚಿದರೆ?
ಕನ್ನಡಿಗರಿಗೆ ‘ಬೇಡರ ಕಣ್ಣಪ್ಪ’ ಸಿನಿಮಾ ಬಹಳ ವಿಶೇಷವಾದುದು, ಬೇಡರ ಕಣ್ಣಪ್ಪನ ಕತೆಯೂಂದಿಗೆ ಧಾರ್ಮಿಕ ಭಾವನೆ ಬೆಸೆದುಕೊಂಡಿದೆ. ಆದರೆ ಈಗ ತೆಲುಗಿನಲ್ಲಿ ಬಿಡುಗಡೆ ಆಗಿರುವ ‘ಕಣ್ಣಪ್ಪ’ ಸಿನಿಮಾ ಯಾವ ಕೋನದಿಂದಲೂ ‘ಬೇಡರ ಕಣ್ಣಪ್ಪ’ನ ಭಕ್ತಿಯ ಕತೆ ಹೇಳುತ್ತಿರುವಂತಿಲ್ಲ.
‘ಬೇಡರ ಕಣ್ಣಪ್ಪ’ನ (Bedara Kannappa) ಕತೆ ಕನ್ನಡಿಗರ ಪಾಲಿಗೆ ಯಾವುದೇ ಧಾರ್ಮಿಕ ಗ್ರಂಥಕ್ಕಿಂತಲೂ ಕಡಿಮೆಯಿಲ್ಲ. ಮೇರುನಟ ರಾಜ್ಕುಮಾರ್ ಅವರನ್ನು ಕನ್ನಡಕ್ಕೆ ಕೊಟ್ಟ ಸಿನಿಮಾ ‘ಬೇಡರ ಕಣ್ಣಪ್ಪ’ ಎಂಬ ಪ್ರೀತಿ ಒಂದು ಕಡೆಯಾದರೆ, ಶಿವಭಕ್ತಿಯ ಮಹಿಮೆ ಸಾರುವ, ಬಡವ-ಬಲ್ಲಿದನೂ ಶಿವನನ್ನು ಒಲಿಸಿಕೊಳ್ಳಬಹುದೆಂದು ಸಾರುವ ಧಾರ್ಮಿಕ ಸಮಾನತೆಯ ಕತೆ ಇನ್ನೊಂದು ಕಡೆ. ಈಗ ಅದೇ ಬೇಡರ ಕಣ್ಣಪ್ಪನ ಕತೆಯನ್ನು ತೆಲುಗಿನ (Tollywood) ‘ಕಣ್ಣಪ್ಪ’ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ಆದರೆ ನಾವು ನಂಬಿರುವ, ಕೇಳುತ್ತಾ ಬಂದಿರುವ, ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವ ಕಣ್ಣಪ್ಪನಿಗೂ ತೆಲುಗಿನವರು ‘ಕಣ್ಣಪ್ಪ’ ಸಿನಿಮಾ ಮೂಲಕ ತೋರಿಸಲು ಹೊರಟಿರುವ ಕಣ್ಣಪ್ಪನಿಗೂ ಆಕಾಶ-ಭೂಮಿಯ ಅಂತರವಿದೆ.
‘ಕಣ್ಣಪ್ಪ’ ಸಿನಿಮಾದ ಟೀಸರ್ ಪ್ರಾರಂಭವಾಗುವುದೇ ಬೇಡರ ಕಣ್ಣಪ್ಪ (ನಟ ಮಂಚು ವಿಷ್ಣು), ಕುದುರೆ ಮೇಲೆ ನೂರರ ಸಂಖ್ಯೆಯಲ್ಲಿ ಬರುವ ದುರುಳರ ಕೊಲ್ಲುವ ಮೂಲಕ. ಈ ದುರುಳರು ‘ಗೇಮ್ ಆಫ್ ಥ್ರೋನ್ಸ್’ನ ಡೆತ್ರಾರ್ಕಿಗಳನ್ನು ಯಥಾವತ್ತು ಹೋಲುತ್ತಾರೆ, ಇದೇ ತೋರಿಸುತ್ತದೆ ನಿರ್ದೇಶಕರಿಗೆ ಕ್ರಿಯಾಶೀಲತೆಯ ಕೊರತೆ ಎಷ್ಟಿದೆ ಎಂಬುದನ್ನು. ಇನ್ನು ಟೀಸರ್ ಮುಂದುವರೆದಂತೆ ಕಣ್ಣಪ್ಪ, ನಂದಮೂರಿ ಬಾಲಕೃಷ್ಣ ಮೈಮೇಲೆ ಬಂದಂತೆ ವಿಚಿತ್ರ ವಿನ್ಯಾಸದ ಕತ್ತಿಗಳನ್ನು ಹಿಡಿದು ಕೊಲ್ಲುತ್ತಲೇ ಸಾಗುತ್ತಾನೆ ನಾಯಕ ಮತ್ತು ಇತರೆ ಪಾತ್ರಗಳು. ಟೀಸರ್ನ ಮಧ್ಯೆ, ತುಸು ಮಾಸಿದ ‘ಬಿಕಿನಿ’ಯನ್ನು ಹೋಲುವ ಉಡುಪು ಧರಿಸಿ ಸುಂದರಿಯೊಬ್ಬಾಕೆ ಕೊಳದಿಂದ ಎದ್ದು ಬರುವ ದೃಶ್ಯವೂ ಇದೆ!
ಈಗ ಬಿಡುಗಡೆ ಆಗಿರುವ ಟೀಸರ್ ನೋಡಿದರೆ ಯಾವ ಕೋನದಿಂದಲೂ ಇದು ‘ಬೇಡರ ಕಣ್ಣಪ್ಪ’ನ ಕತೆ ಹೊಂದಿರುವ ಸಿನಿಮಾ ಅನಿಸುತ್ತಿಲ್ಲ ಬದಲಿಗೆ, ನಂದಮೂರಿ ಬಾಲಕೃಷ್ಣರ ಯಾವುದೋ ‘ರಾಯಲ ಸೀಮ ರಿವೇಂಜ್’ ಸಿನಿಮಾವನ್ನು ತುಸು ಹೆಚ್ಚು ಬಜೆಟ್ ಹಾಕಿ, ಒಳ್ಳೆಯ ಲೊಕೇಶನ್ಗಳಲ್ಲಿ ಶೂಟ್ ಮಾಡಿದ ಸಿನಿಮಾ ಅನಿಸುತ್ತದೆ. ಆದರೆ ಆ ‘ರಾಯಲಸೀಮ ರಿವೇಂಜ್’ ಕತೆ ಘತಕಾಲದಲ್ಲಿ ನಡೆಯುತ್ತಿದೆ ಎನಿಸುತ್ತದೆ.
ಪೌರಾಣಿಕ ಸಿನಿಮಾದಲ್ಲಿಯೂ ಸಹ ನಿರ್ದೇಶಕರು, ತೆಲುಗು ಚಿತ್ರರಂಗದ ‘ಲೈಫ್ ಲೈನ್’ ಆಗಿರುವ ನಾಯಕನ ‘ಕೊಲ್ಲುಬಾಕ’ ತನವನ್ನೇ ಮೆರೆಸಲು ಯತ್ನಿಸಿದಂತಿದೆ. ಬೇಡರ ಕಣ್ಣಪ್ಪನ ಭಕ್ತಿ ತೋರುವ ಬದಲಿಗೆ ನಟ ಮಂಚು ವಿಷ್ಣುವನ್ನು ಮಾಸ್ ಹೀರೋ ಆಗಿ ತೋರಿಸುವ ಉಮೇದಿನಿಂದಲೇ ದೃಶ್ಯಗಳನ್ನು ನಿರ್ದೇಶಕ ಹೆಣೆದಿರುವುದು ಟೀಸರ್ ನೋಡಿದರೆ ತಿಳಿದುಬರುತ್ತಿದೆ. ಟೀಸರ್ನ ಕೊನೆಯಲ್ಲಿ ಶಿವನ ಕಣ್ಣುಗಳನ್ನು ತೋರಿಸಲಾಗಿದೆ. ಶಿವನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಪ್ರಭಾಸ್ ಕಣ್ಣುಗಳ ದರ್ಶನವನ್ನೂ ಮಾಡಿಸಲಾಗಿದೆ. ಪ್ರಭಾಸ್ ಪಾತ್ರ ಯಾವುದೆಂಬ ಬಗ್ಗೆ ಖಾತ್ರಿಯಿಲ್ಲ. ಪ್ರಭಾಸ್ಗಾಗಿ ಹೊಸ ಪಾತ್ರ ಸೃಷ್ಟಿಸಿರುವ ಸಾಧ್ಯತೆ ಹೆಚ್ಚಿದೆ.
ಅಂದಹಾಗೆ ‘ಕಣ್ಣಪ್ಪ’ ಸಿನಿಮಾದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸಿದ್ದಾರೆ. ಸಿನಿಮಾಕ್ಕೆ ಅವರ ತಂದೆ ಮೋಹನ್ ಬಾಬು ಬಂಡವಾಳ ಹೂಡಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಸಹ. ಪ್ರಭಾಸ್, ಅಕ್ಷಯ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸಿದ್ದಾರೆ. ಟೀಸರ್ನಲ್ಲಿ ಸಿನಿಮಾವನ್ನು ಚಿತ್ರೀಕರಿಸಿರುವ ಲೊಕೇಶನ್ ಹಾಗೂ ಕ್ಯಾಮೆರಾ ಕೆಲಸ ಮಾತ್ರ ತುಸು ಗಮನ ಸೆಳೆಯುತ್ತದೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಇದು ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ