Hero Movie Review: ಈ ಹೀರೋ ಎಲ್ಲರಂತಲ್ಲ; ಪ್ರೇಕ್ಷಕರು ಅಂದುಕೊಂಡಂತೆ ಏನೂ ನಡೆಯಲ್ಲ!

  • ಮದನ್​ಕುಮಾರ್
  • Published On - 16:43 PM, 5 Mar 2021
Hero Movie Review: ಈ ಹೀರೋ ಎಲ್ಲರಂತಲ್ಲ; ಪ್ರೇಕ್ಷಕರು ಅಂದುಕೊಂಡಂತೆ ಏನೂ ನಡೆಯಲ್ಲ!
ರಿಷಬ್ ಶೆಟ್ಟಿ-ಗಾನವಿ ಲಕ್ಷ್ಮಣ್​

ಚಿತ್ರ: ಹೀರೋ
ಪಾತ್ರವರ್ಗ: ರಿಷಬ್​ ಶೆಟ್ಟಿ, ಗಾನವಿ ಲಕ್ಷ್ಮಣ್​, ಪ್ರಮೋದ್​ ಶೆಟ್ಟಿ, ಉಗ್ರಂ ಮಂಜು ಮುಂತಾದವರು
ನಿರ್ದೇಶನ: ಎಂ. ಭರತ್​ ರಾಜ್​
ನಿರ್ಮಾಣ: ರಿಷಬ್​ ಶೆಟ್ಟಿ
ಸ್ಟಾರ್​: 2.5/5

ಕನ್ನಡ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡವರು ರಿಷಬ್​ ಶೆಟ್ಟಿ. ಮೊದಲು ನಿರ್ದೇಶಕನಾಗಿದ್ದ ಅವರು ನಂತರ ಹೀರೋ ಆಗಿ ಮೆಚ್ಚುಗೆ ಗಳಿಸಿದರು. ಅವರು ಹೀರೋ ಆಗಿದ್ದನ್ನು ಜನರು ಒಪ್ಪಿಕೊಂಡರು. ಹಾಗಂತ ಅವರ ‘ಹೀರೋ’ ಸಿನಿಮಾ ಕೂಡ ಜನರಿಗೆ ಇಷ್ಟವಾಗುತ್ತಾ? ಒಂದೇ ವಾಕ್ಯದಲ್ಲಿ ಈ ಪ್ರಶ್ನೆಗೆ ಉತ್ತರ ನೀಡೋದು ಕಷ್ಟ.

ನಿರ್ದೇಶಕ ಎಂ. ಭರತ್​ ರಾಜ್​ ತುಂಬ ಇತಿಮಿತಿಗಳ ನಡುವೆ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಇದ್ದ ಕೆಲವೇ ಸೌಲಭ್ಯಗಳನ್ನು ಬಳಸಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ಆ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲಲೇ ಬೇಕು. ಆದರೆ ತೆರೆ ಹಿಂದಿನ ಕಷ್ಟಗಳನ್ನೆಲ್ಲ ಪ್ರೇಕ್ಷಕ ಕೇಳುವುದಿಲ್ಲ. ಪ್ರೇಕ್ಷಕನಿಗೆ ಮನರಂಜನೆ ಬೇಕು. ಅದನ್ನು ಪೂರೈಸಲು ತನ್ನದೇ ದಾಟಿಯಲ್ಲಿ ಪ್ರಯತ್ನಿಸಿದ್ದಾನೆ ಈ ‘ಹೀರೋ‘.

ಒನ್​ ಲೈನ್​ ಕಥೆ ಏನು?
ನಾಯಕನ ಜೊತೆ ಬ್ರೇಕಪ್​ ಮಾಡಿಕೊಂಡ ಬಳಿಕ ಡಾನ್​ ಒಬ್ಬನ ಜೊತೆ ನಾಯಕಿ ಮದುವೆ ಮಾಡಿಕೊಂಡಿದ್ದಾಳೆ. ಈಗ ಆ ಡಾನ್​ನ ಮನೆಗೆ ನುಗ್ಗಿ ಮಾಜಿ ಪ್ರೇಯಸಿಯನ್ನೇ ಸಾಯಿಸಬೇಕು ಎಂಬ ಉದ್ದೇಶ ನಾಯಕನದ್ದು! ಡಾನ್​ನ ಮನೆಗೆ ಕಾಲಿಡುವ ಹೀರೋಗೆ ಅಚ್ಚರಿ ಕಾದಿರುತ್ತದೆ. ಮುಂದೇನಾಗುತ್ತೆ? ನಾಯಕನ ಕೆಲಸ ಈಡೇರುತ್ತಾ? ಅದನ್ನು ತಿಳಿದುಕೊಳ್ಳೋಕೆ ಪೂರ್ತಿ ಸಿನಿಮಾ ನೋಡಬೇಕು.

ರಿಷಬ್​ ಶೆಟ್ಟಿಯ ಇನ್ನೊಂದು ಪ್ರಯತ್ನ
ಮೊದಲಿನಿಂದಲೂ ಕ್ಲಾಸ್​ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾಗಳನ್ನೇ ರಿಷಬ್​ ಶೆಟ್ಟಿ ಆಯ್ಕೆ ಮಾಡಿಕೊಳ್ಳುತ್ತ ಬರುತ್ತಿದ್ದಾರೆ. ಅದೇ ಸಾಲಿನ ಇನ್ನೊಂದು ಡಿಫರೆಂಟ್​ ಪ್ರಯತ್ನವೇ ‘ಹೀರೋ’ ಚಿತ್ರ. ಆದರೆ ಎಲ್ಲರಿಗೂ ಈ ಹೀರೋ ಇಷ್ಟವಾಗುತ್ತಾನೆ ಎನ್ನೋಕಾಗಲ್ಲ. ಹೀರೋ ಎಂದ ಮಾತ್ರಕ್ಕೆ ಇವನು ಕಮರ್ಷಿಯಲ್​ ಸಿನಿಮಾಗಳ ಟಿಪಿಕಲ್​ ನಾಯಕನಲ್ಲ. ತಾನೇ ಪೇಚಿಗೆ ಸಿಲುಕಿಕೊಳ್ಳುತ್ತಾ ಪ್ರೇಕ್ಷಕರನ್ನು ರಂಜಿಸುವ ವ್ಯಕ್ತಿತ್ವ ಈತನದ್ದು. ಇನ್ನೇನು ಫೈಟ್​ ಮಾಡುತ್ತಾನೆ ಎಂದುಕೊಳ್ಳುವಾಗ ಈತ ನಗಿಸುತ್ತಾನೆ. ನಗಿಸಬಹುದು ಎಂದುಕೊಳ್ಳುವಾಗಲೇ ಫೈಟ್​ ಮಾಡಿಬಿಡುತ್ತಾನೆ. ಹಾಗಾಗಿ ತಾವು ನಿರೀಕ್ಷಿಸಿದ್ದು ಹುಸಿ ಆಯಿತು ಎಂದುಕೊಂಡು ಬೇಸರಪಟ್ಟುಕೊಳ್ಳಬೇಕೋ ಅಥವಾ ನಿರೀಕ್ಷೆಗೂ ಮೀರಿ ಬೇರೇನೋ ಆಯಿತು ಎಂದು ಖುಷಿಪಡಬೇಕೂ ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು.

ಮ್ಯಾಜಿಕ್​ಗಾಗಿ ಲಾಜಿಕ್​ ಮಾಯ!
ಇದೊಂದು ಕಾಮಿಡಿ ಸಿನಿಮಾ. ಇದರಲ್ಲಿ ಪ್ರೇಕ್ಷಕರು ಹೆಚ್ಚಿನ ಲಾಜಿಕ್​ ಬಯಸೋದು ಕಷ್ಟ. ಆದರೆ ಕೆಲವು ಥ್ರಿಲ್ಲಿಂಗ್​ ದೃಶ್ಯಗಳಲ್ಲೂ ಕೂಡ ನಿರ್ದೇಶಕರು ಲಾಜಿಕ್​ಗೆ ಕಿಂಚಿತ್ತೂ ಗಮನ ನೀಡದೇ ಇರುವುದು ಎದ್ದು ಕಾಣುತ್ತದೆ. ಮರುಕ್ಷಣವೇ ಎದುರಾಗುವ ಹಾಸ್ಯದ ದೃಶ್ಯಗಳನ್ನು ನೋಡಿಕೊಂಡು ಲಾಜಿಕ್​ ಕೊರತೆಯನ್ನು ಮರೆಯಬೇಕಷ್ಟೇ. ಇಂಥ ಕೊರತೆಗಳ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಹರಿಸಿದ್ದಿದ್ದರೆ ಚಿತ್ರದ ತೂಕ ಹೆಚ್ಚುವ ಸಾಧ್ಯತೆ ಇತ್ತು.

ಗಾನವಿಗೆ ಹೆಚ್ಚಿನ ಸ್ಕೋಪ್​
ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಟಿ ಗಾನವಿ ಲಕ್ಷ್ಮಣ್​ ಅವರು ‘ಹೀರೋ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಹೀರೋಯಿನ್​ ಪಟ್ಟಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ತಮ್ಮ ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನೋವು, ಹತಾಶೆ, ಕೋಪ ಮುಂತಾದ ಭಾವಗಳನ್ನು ವ್ಯಕ್ತಪಡಿಸುವಲ್ಲಿ ಅವರು ಗೆದ್ದಿದ್ದಾರೆ. ನಟನೆಗೆ ಮಹತ್ವ ಇರುವ ಪಾತ್ರಗಳನ್ನು ತಾವು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬ ಸಂದೇಶವನ್ನು ಗಾನವಿ ಈ ಸಿನಿಮಾ ಮೂಲಕ ಸಾರಿದ್ದಾರೆ.

ಪ್ರಮೋದ್, ಉಗ್ರಂ ಮಂಜು, ರಿಷಬ್​ ಜುಲಗ್​ಬಂದಿ
‘ಬೆಲ್​ ಬಾಟಂ’ ಚಿತ್ರದ ದಿವಾಕರನ ರೀತಿಯೇ ಕೆಲವೊಮ್ಮೆ ಪೆದ್ದುಪೆದ್ದಾಗಿ ಆಡುತ್ತಲೇ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ ರಿಷಬ್​ ಶೆಟ್ಟಿ. ಇರುವ ಕೆಲವೇ ಪಾತ್ರಗಳ ನಡುವೆ ಪ್ರಮೋದ್​ ಶೆಟ್ಟಿ ಕೂಡ ಹೈಲೈಟ್​ ಆಗಿದ್ದಾರೆ. ಅವರು ಕೆಲವೇ ಹೊತ್ತು ಪರದೆ ಮೇಲೆ ಕಾಣಿಸಿಕೊಂಡರೂ ಕೂಡ ಎಂದಿನ ಚಾರ್ಮ್​ನಲ್ಲಿ ಗಮನ ಸೆಳೆಯುತ್ತಾರೆ. ‘ಉಗ್ರಂ’ ಮಂಜು ಅವರಿಗೆ ಸಿಕ್ಕಿರುವ ಸ್ಕ್ರೀನ್​ ಸ್ಪೇಸ್​ ಕಡಿಮೆ. ಹೆಚ್ಚೇನೂ ಮಾತುಕತೆ ಇಲ್ಲದ ವಿಲನ್​ ಪಾತ್ರದಲ್ಲಿ ಅವರು ಅಬ್ಬರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದ ಕೆಲವು ಸಣ್ಣ-ಪುಟ್ಟ ಪಾತ್ರಗಳು ನಗು ಉಕ್ಕಿಸುತ್ತವೆ.

ತಾಂತ್ರಿಕವಾಗಿ ಹೇಗಿದ್ದಾನೆ ಹೀರೋ?
ಕಥೆಯಲ್ಲಿ ಹೇಳಿಕೊಳ್ಳುವಂತಹ ಹೊಸತನ ಇಲ್ಲದಿದ್ದರೂ ಮೇಕಿಂಗ್​ ವಿಚಾರದಲ್ಲಿ ಈ ಸಿನಿಮಾವನ್ನು ಮೆಚ್ಚಿಕೊಳ್ಳಬಹುದು. ಇಡೀ ಸಿನಿಮಾವನ್ನು ಒಂದು ಮನೆ ಮತ್ತು ದಟ್ಟ ಕಾಡಿನ ನಡುವೆ ಚಿತ್ರೀಕರಿಸಲಾಗಿದೆ. ಛಾಯಾಗ್ರಾಹಕ ಅರವಿಂದ್​ ಎಸ್​. ಕಶ್ಯಪ್​ ಅವರ ಶ್ರಮ ಅದರಲ್ಲಿ ಕಾಣಿಸುತ್ತದೆ. ಹಿನ್ನೆಲೆ ಸಂಗೀತದಲ್ಲಿ ಅಬ್ಬರ ಎನಿಸುವ ಅಜನೀಶ್​ ಲೋಕನಾಥ್​ ಅವರ ಕೆಲಸ ಹಾಡುಗಳ ವಿಚಾರದಲ್ಲಿ ಮೆಲೋಡಿ ಸ್ವರೂಪ ಪಡೆದುಕೊಂಡಿದೆ. ‘ನೆನಪಿನ ಹುಡುಗಿಯೇ…’ ಹಾಡಿಗೆ ಗುನುಗಿಸಿಕೊಳ್ಳುವ ಸಾಮರ್ಥ್ಯ ಇದೆ.

ಇದನ್ನೂ ಓದಿ: Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?

Rishab Shetty: ಆವತ್ತು ನಾವು ಮೈಮರೆತಿದ್ದರೆ ಮಾತ್ರ.. ಅಗ್ನಿ ಅವಘಡದ ಕರಾಳ ಘಟನೆ ವಿವರಿಸಿದ ರಿಷಬ್ ಶೆಟ್ಟಿ