‘ಹಾಯ್ ನಾನ್ನ’ ಟ್ರೈಲರ್: ಅಮ್ಮನಿಲ್ಲದ ಕುಟುಂಬದ ಕತೆಗೆ ಪ್ರೇಕ್ಷಕರು ಫಿದಾ
Hi Nanna: ತೆಲುಗು ನಟ ನಾನಿ ಮತ್ತೊಂದು ಸುಂದರ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಅಪ್ಪ-ಮಗಳ ನಡುವಿನ ಬಂಧದ ಕತೆಯನ್ನು ಒಳಗೊಂಡ ‘ಹಾಯ್ ನಾನ್ನ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ನೋಡಿದ ಪ್ರೇಕ್ಷಕರು ವಾವ್ ಎಂದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ (Tollywood) ಮಾಸ್ ಮಸಾಲ ಸಿನಿಮಾಗಳಿಗೆ ಪ್ರೇಕ್ಷಕರು ಹೆಚ್ಚು. ಸ್ಟಾರ್ ನಟರಾಗಬೇಕೆಂದರೆ ಮಾಸ್ ಪ್ರೇಕ್ಷಕರು ಇಷ್ಟಪಡುವ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಲಿಖಿತ ನಿಯಮ. ಆದರೆ ನಟ ನಾನಿ ಆ ಸೂತ್ರ ಮುರಿಯುತ್ತಿರುವ ಕೆಲವೇ ನಟರಲ್ಲಿ ಒಬ್ಬರು. ಮಾಸ್ ಮಸಾಲಾ ಸಿನಿಮಾಗಳನ್ನು ಆಗಾಗಲಷ್ಟೆ ಮಾಡುವ ನಾನಿ ಬಹುತೇಕ ಆಯ್ದುಕೊಳ್ಳುವುದು ಕೌಟುಂಬಿಕ ಕತೆಗಳನ್ನು, ಸುಂದರವಾದ, ಸರಳವಾದ ಪ್ರೇಮಕತೆಗಳನ್ನೇ. ಇದೀಗ ಮತ್ತೊಮ್ಮೆ ಅಂಥಹುದೇ ಸುಂದರವಾದ ಕತೆಯೊಟ್ಟಿಗೆ ಬಂದಿದ್ದಾರೆ. ಸಿನಿಮಾದ ಹೆಸರು ‘ಹಾಯ್ ನಾನ್ನ’.
‘ಹಾಯ್ ನಾನ್ನ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ನೋಡಿದವರೆಲ್ಲ ವಾವ್ ಎನ್ನುತ್ತಿದ್ದಾರೆ. ಹೈಪ್ ಸೃಷ್ಟಿಸಿರುವ ಮಾಸ್ ಮಸಾಲಾ ಸಿನಿಮಾಗಳ ಮಾದರಿಯಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ‘ಹಾಯ್ ನಾನ್ನ’ ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿದೆ. ಹಲವು ಸಿನಿಮಾದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೆಸರೇ ಹೇಳುವಂತೆ ‘ಹಾಯ್ ನಾನ್ನ’ ಸಿನಿಮಾವು ಅಪ್ಪ-ಮಗಳ ನಡುವಿನ ಕತೆ. ಸಿನಿಮಾದ ಟ್ರೈಲರ್ನಲ್ಲಿ ಬಿಟ್ಟುಕೊಟ್ಟಿರುವ ಕತೆಯ ಎಳೆಯ ಪ್ರಕಾರ, ನಾನಿಗೆ ಮಗಳೊಬ್ಬಳಿದ್ದಾಳೆ, ಆಕೆಗೆ ತನ್ನ ತಾಯಿ ಯಾರು ಯಾಕೆ ತಮ್ಮೊಂದಿಗಿಲ್ಲ ಎಂಬ ಕೊರಗು, ಆದರೆ ನಾನಿಗೆ ತನ್ನ ಮಗಳ ತಾಯಿ ಯಾರು ಯಾಕೆ ಆಕೆ ನಮ್ಮೊಂದಿಗಿಲ್ಲ ಎಂದು ಹೇಳುವ ಇಷ್ಟವಿಲ್ಲ. ನಾನಿ ಹಾಗೂ ಆತನ ಪತ್ನಿಯ ನಡುವೆ ಏನಾಯ್ತು? ಯಾಕೆ ಅವರಿಬ್ಬರೂ ದೂರಾದರು ಎಂಬುದೇ ಸಿನಿಮಾದ ಕತೆ.
ಇದನ್ನೂ ಓದಿ:‘ನೀವು ಜೈ ಭೀಮ್ ಸಿನಿಮಾ ನೋಡಿದ್ದೀರೋ ಇಲ್ಲವೋ?’; ರಾಷ್ಟ್ರ ಪ್ರಶಸ್ತಿ ಜ್ಯೂರಿಗಳಿಗೆ ನಾನಿ ಪ್ರಶ್ನೆ
ಸಿನಿಮಾದ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದೆ. ಸುಂದರವಾದ ದೃಶ್ಯಗಳು, ಸಂಗೀತ, ನಾನಿ, ಮಗಳ ಪಾತ್ರ ಮಾಡಿರುವ ಪುಟ್ಟ ಹುಡುಗಿನ ಮುದ್ದಾದ ನಟನೆ ಹಾಗೂ ನಾಯಕಿ ಮೃಣಾಲ್ ಠಾಕೂರ್ರ ನಟನೆ ಗಮನ ಸೆಳೆಯುತ್ತಿದೆ. ‘ಸೀತಾ ರಾಮಂ’ ಸಿನಿಮಾದ ಬಳಿಕ ಮೃಣಾಲ್ಗೆ ಮತ್ತೊಂದು ಒಳ್ಳೆಯ ಅವಕಾಶ ‘ಹಾಯ್ ನಾನ್ನ’ ಸಿನಿಮಾ ಮೂಲಕ ಲಭಿಸಿದ್ದು ಅದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಂತೆ ತೋರುತ್ತಿದೆ.
‘ಹಾಯ್ ನಾನ್ನ’ ಸಿನಿಮಾವನ್ನು ಶೌರ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಾಗಶೌರ್ಯ ಸಂಭಾಷಣೆ ಬರೆದಿದ್ದಾರೆ. ಸಿನಿಮಾದಲ್ಲಿ ನಾನಿ, ಮೃಣಾಲ್ ಜೊತೆಗೆ ಶೃತಿ ಹಾಸನ್ ಸಹ ಇದ್ದಾರೆ. ನಾನಿಯ ತಂದೆಯ ಪಾತ್ರದಲ್ಲಿ ಜಯರಾಂ ನಟಿಸಿದ್ದಾರೆ. ನಾನಿ ಸ್ನೇಹಿತನ ಪಾತ್ರದಲ್ಲಿ ಪ್ರಿಯದರ್ಶಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ‘ಹೃದಯಂ’ ಖ್ಯಾತಿಯ ಹೇಷಮ್ ಅಬ್ದುಲ್ ವಹಾಬ್. ಡಿಸೆಂಬರ್7ಕ್ಕೆ ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




