ಅನಂತ್ ನಾಗ್ ಮೇಲೆ ನಡೆದಿತ್ತು ಕೊಲೆ ಯತ್ನ: ಪಾರಾಗಿದ್ದು ಹೇಗೆ?
ಅನಂತ್ ನಾಗ್ ಅವರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವ ಮೂರನೇ ಕನ್ನಡಿಗ ಎನಿಸಿಕೊಂಡಿದ್ದಾರೆ ಅನಂತ್ ನಾಗ್. ಈ ಶುಭ ಸಂದರ್ಭದಲ್ಲಿ ಅನಂತ್ ಅವರ ಜೀವನ ಪಯಣ, ಸಿನಿಮಾ ಪಯಣವನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಅನಂತ್ ಅವರ ಸಿನಿ ಪಯಣದಲ್ಲಿ ಸಿಹಿಯಷ್ಟೆ ಕಹಿ ನೆನಪುಗಳು ಸಹ ಇವೆ. ಅವುಗಳಲ್ಲಿ ಒಂದು ಅನಂತ್ ನಾಗ್ ಅವರ ಮೇಲೆ ಆಗಿದ್ದ ದಾಳಿ.

ಮುಖ್ಯಾಂಶಗಳು
- ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದೆ
- ಅವರ ಸಿನಿಮಾ ಪಯಣ, ಜೀವನ ಪಯಣ ನೆನಪು ಮಾಡಿಕೊಳ್ಳಲಾಗುತ್ತಿದೆ.
- ಅವರ ಮೇಲೆ ಒಮ್ಮೆ ದುಷ್ಕರ್ಮಿಗಳ ದಾಳಿ ನಡೆದಿದ್ದು, ನಟ ಪಾರಾಗಿದ್ದು ಹೇಗೆ?
ಅನಂತ್ ನಾಗ್ ಅವರು ಇಂದು ಭಾರತ ಸಿನಿಮಾ ಕ್ಷೇತ್ರದ ಅತ್ಯುತ್ತಮ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರವು, ಅನಂತ್ ನಾಗ್ ಅವರು ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಪೂರ್ವವಾದ ಹಾಗೂ ಅವಿರತಾದ ಸೇವೆಯನ್ನು ಗುರುತಿಸಿ ಅವರನ್ನು 2024ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಅನಂತ್ ನಾಗ್ ಅವರಿಗೆ ಹಲವಾರು ಮಂದಿ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಅನಂತ್ ನಾಗ್ ಅವರ ಸಿನಿಮಾ ಪಯಣ ಅವರ ಹಿನ್ನೆಲೆಗಳನ್ನು ಮೆಲಕು ಹಾಕಲಾಗುತ್ತಿದೆ. ಇದೇ ಅನಂತ್ ನಾಗ್ ಅವರ ಹಿನ್ನೋಟದಲ್ಲಿ ಹಲವು ಸಿಹಿ ಕ್ಷಣಗಳಿಗೆ ಅದರ ಜೊತೆಗೆ ಕೆಲ ಕಹಿ ಕ್ಷಣಗಳೂ ಸಹ ಇವೆ. ಅವುಗಳಲ್ಲಿ ಒಂದು ಅನಂತ್ ನಾಗ್ ಅವರನ್ನು ಕೊಲ್ಲಲು ನಡೆದಿದ್ದ ಯತ್ನ.
ಹೌದು, ಅನಂತ್ ನಾಗ್ ಅವರು ಸಭ್ಯ, ಸರಳ, ಮಿತಭಾಷಿ, ವಿನಯಪೂರ್ಣ ಸಜ್ಜನ. ಆದರೆ ಅಂಥಹಾ ವ್ಯಕ್ತಿಯನ್ನೂ ಸಹ ಕೊಲ್ಲುವ ಪ್ರಯತ್ನ ನಡೆಸಲಾಗಿತ್ತು. ಸಿನಿಮಾಗಳಲ್ಲಿ ಅತಿಯಾದ ‘ಹೀರೋಯಿಸಂ’ ಅನ್ನೇನೂ ತೋರಿಸದ ಅನಂತ್ ನಾಗ್ ಅವರು ನಿಜ ಜೀವನದಲ್ಲಿ ಹೀರೋಯಿಸಂ ತೋರಿಸಿದ್ದು ಅಲ್ಲದೆ, ತಮ್ಮನ್ನು ಕೊಲ್ಲಲು ಬಂದ ವ್ಯಕ್ತಿಯನ್ನೇ ತಾವೇ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಆ ಘಟನೆ, ಅವರ ಕುಟುಂಬದ ಮೇಲೆ ಬೀರಿದ ಪರಿಣಾಮ ಮಾತ್ರ ಅಳಿಸಲಾದದ್ದು. ಏನದು ಪ್ರಕರಣ? ವಿವರ ಇಲ್ಲಿದೆ…
ಮಾರ್ಚ್ 14, 1996 ಆಗ ಅನಂತ್ ನಾಗ್ ಖ್ಯಾತ ನಟರು ಮಾತ್ರವೇ ಅಲ್ಲ ಸಕ್ರಿಯ ರಾಜಕಾರಣಿ ಸಹ. ಚುನಾವಣೆ ಗೆದ್ದು ಶಾಸಕರು ಸಹ ಆಗಿದ್ದರು ಅನಂತ್ ನಾಗ್. ಸಿನಿಮಾದ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟ ಅನಂತ್ ನಾಗ್ ಅವರಿಗೆ ಕೆಲ ವಿರೋಧಗಳು ವಿಶೇಷವಾಗಿ ರಾಜಕೀಯ ವಿರೋಧಗಳು ಎದುರಾಗಿದ್ದವು. ಮಾರ್ಚ್ 14ರ ಮುಂಜಾನೆ, ಎಂದಿನಂತೆ ಅನಂತ್ ನಾಗ್ ಅವರು ತಮ್ಮ ಪುತ್ರಿ ಅದಿತಿಯನ್ನು ಶಾಲೆಗೆ ಬಿಡಲೆಂದು ಕರೆದುಕೊಂಡು ಹೋಗಲು ತಯಾರಾಗಿದ್ದರು. ಕಾರಿನಲ್ಲಿ ಮಗಳನ್ನು ಕುಳ್ಳರಿಸಿ ಕಾರು ಮೂವ್ ಮಾಡಿದ್ದರಷ್ಟೆ ಅಷ್ಟರಲ್ಲೇ ಇಬ್ಬರು ಯುವಕರು ಕೈಯಲ್ಲಿ ನಾಡಬಾಂಬು ಮತ್ತು ಚಾಕು ಹಿಡಿದುಕೊಂಡು ಅನಂತ್ ನಾಗ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದರು.
ಇದನ್ನೂ ಓದಿ:ಭಾಗ್ಯದ ಲಕ್ಷ್ಮಿ ಬಾರಮ್ಮ, ಹಳೆಯ ಅನಂತ್ ನಾಗ್ ನೆನಪು
ಅನಂತ್ ನಾಗ್ ಅವರ ಅದೃಷ್ಟ ಚೆನ್ನಾಗಿದ್ದು ನಾಡಬಾಂಬ್ ದೊಡ್ಡಮಟ್ಟದ ಸ್ಪೋಟ ಮಾಡಲಿಲ್ಲ. ಆದರೆ ಆ ದುಷ್ಕರ್ಮಿಗಳ ಕೈಯಲ್ಲಿ ಚಾಕು ಇತ್ತು. ಆದರೆ ಜೊತೆಯಲ್ಲಿ ಮಗಳು ಇದ್ದು, ಅವಳಿಗೆ ಏನಾದರೂ ಮಾಡಿಬಿಡುತ್ತಾರೆಂಬ ಭಯದಲ್ಲಿ ಅನಂತ್ ನಾಗ್ ಹಾರಿ ಒಬ್ಬನ ಹೊಡೆದು ಉರುಳಿಸಿದರು. ಇನ್ನೊಬ್ಬ ಅಲ್ಲಿಂದ ತಪ್ಪಿಸಿಕೊಂಡು ಓಟ ಕಿತ್ತು, ಆದರೆ ಅನಂತ್ ನಾಗ್ ಅವನ ಹಿಂದೆ ಬಿದ್ದು ಓಡಿ ಹಿಡಿದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗಿನ ಆ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಆದರೆ ಆ ಘಟನೆ ತಮ್ಮ ಹಾಗೂ ತಮ್ಮ ಕುಟುಂಬದ ಮಾನಸಿಕ ಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರಿತು ಎಂದಿದ್ದರು ಅನಂತ್ ನಾಗ್. ಆ ಘಟನೆಯ ನಂತರ ಒಂದು ಅವ್ಯಕ್ತ ಭಯ ನಮ್ಮಲ್ಲಿ ಕುಳಿತುಬಿಟ್ಟಿತು. ವಿಶೇಷವಾಗಿ ಮಗಳ ಬಗ್ಗೆ, ಅವರ ರಕ್ಷಣೆ ಬಗ್ಗೆ ಭೀತಿ ಆವರಿಸಿಬಿಟ್ಟಿತು. ರಾತ್ರಿ ಹೊತ್ತು ಎಲ್ಲೂ ಹೋಗದಿರುವುದು, ಪದೇ ಪದೇ ಮಗಳಿಗೆ, ಪತ್ನಿಗೆ ಫೋನ್ ಮಾಡುವುದು ಅಭ್ಯಾಸವೇ ಆಗಿಬಿಟ್ಟಿತು’ ಎಂದು ಅನಂತ್ ನಾಗ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




