ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರಭಾಸ್ ಭೇಟಿ: ಕಾರಣವೇನು?

Prabhas: ‘ಸಲಾರ್’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಟ ಪ್ರಭಾಸ್, ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರಭಾಸ್ ಭೇಟಿ: ಕಾರಣವೇನು?
ಪ್ರಭಾಸ್
Follow us
ಮಂಜುನಾಥ ಸಿ.
|

Updated on:Jan 12, 2024 | 6:17 PM

ಕೆಲ ವರ್ಷಗಳಿಂದ ಬ್ಲಾಕ್ ಬಸ್ಟರ್ (Block Buster) ಸಿನಿಮಾ ನೀಡಲಾಗದೆ ಸತತ ಸೋಲು ಕಂಡಿದ್ದ ಪ್ರಭಾಸ್ (Prabhas) ಇದೀಗ ‘ಸಲಾರ್’ ಸಿನಿಮಾದ ಗೆಲುವಿನ ಮೂಲಕ ಮತ್ತೆ ಜಯದ ಹಳಿಗೆ ಮರಳಿದ್ದಾರೆ. ‘ಸಲಾರ್’ ಸಿನಿಮಾ ತಂಡ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಗೆಲುವಿನ ಸಂಭ್ರಮ ಆಚರಣೆ ಮಾಡಿದೆ. ಇದೇ ಖುಷಿಯಲ್ಲಿ ಇದೀಗ ಪ್ರಭಾಸ್ ಕರ್ನಾಟಕದ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಭಾಸ್, ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆಯ ಮಾಲೀಕ ‘ಸಲಾರ್’ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಪ್ರಭಾಸ್​ರ ಜೊತೆಗಿದ್ದರು. ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಪ್ರಭಾಸ್​ಗೆ ದೇವಾಲಯದ ವತಿಯಿಂದ ದೇವಿಯ ವಿಗ್ರಹ ನೀಡಿ ಗೌರವ ಸಲ್ಲಿಸಲಾಗಿದೆ.

ನಿರ್ಮಾಪಕ ವಿಜಯ್ ಕಿರಗಂದೂರು ಅವರು ದುರ್ಗಾಪರಮೇಶ್ವರಿಯ ಪರಮ ಭಕ್ತರು. ಕಿರಗಂದೂರು ಅವರು ಹಲವು ಭಾರಿ ಕಟೀಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ‘ಸಲಾರ್’ ಸಿನಿಮಾ ಗೆದ್ದ ಬಳಿಕ ಇದೀಗ ಪ್ರಭಾಸ್ ಅವರನ್ನೂ ಜೊತೆಗೆ ಕರೆತಂದು ದೇವಿಯ ದರ್ಶನ ಮಾಡಿದ್ದಾರೆ.

ಪ್ರಭಾಸ್ ಸಹ ದೈವ ಭಕ್ತರು. ಅವರ ಕುಟುಂಬ ಕಾಳಹಸ್ತಿಯ ಶ್ರೀಕಾಲಹಸ್ತೀಶ್ವರ ದೇವಾಲಯಕ್ಕೆ ದಶಕಗಳಿಂದಲೂ ನಡೆದುಕೊಂಡು ಬಂದಿದ್ದಾರೆ. ಪ್ರಭಾಸ್​ರ ದೊಡ್ಡಪ್ಪನವರಿಗೆ ಪ್ರಭಾಸ್, ಕಾಲಹಸ್ತೀಶ್ವರನ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತಂತೆ. ಇದೇ ಕಾರಣಕ್ಕೆ ಈಗ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಪ್ರಭಾಸ್, ‘ಆದಿಪುರುಷ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಹಿಟ್ ಎನಿಸಿಕೊಳ್ಳಲಿಲ್ಲ.

ಇದನ್ನೂ ಓದಿ:ಪ್ರಭಾಸ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಪ್ರಭಾಸ್​, ‘ಬಾಹುಬಲಿ’ ಸಿನಿಮಾದ ಬಳಿಕ ನಟಿಸಿದ ಎಲ್ಲ ಸಿನಿಮಾಗಳ್ಯಾವುವೂ ಸಹ ಬ್ಲಾಕ್ ಬಸ್ಟರ್ ಎನಿಸಿಕೊಳ್ಳಲಿಲ್ಲ. ‘ಸಾಹೋ’, ‘ರಾಧೆ-ಶ್ಯಾಮ್’, ‘ಆದಿಪುರಷ’ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿರಲಿಲ್ಲ. ಆದರೆ ಡಿಸೆಂಬರ್​ನಲ್ಲಿ ಬಿಡುಗಡೆ ಆದ ‘ಸಲಾರ್’ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದ್ದು, ಹಲವು ವರ್ಷಗಳ ಬಳಿಕ ಪ್ರಭಾಸ್ ಗೆಲುವಿನ ಹಾದಿಗೆ ಮರಳಿದ್ದಾರೆ.

ಪ್ರಭಾಸ್ ಪ್ರಸ್ತುತ ‘ಕಲ್ಕಿ 2989’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯಗೊಂಡಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾದ ಜೊತೆಗೆ ನಿರ್ದೇಶಕ ಮಾರುತಿ ನಿರ್ದೇಶಿಸುತ್ತಿರುವ ಹಾರರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸಲು ಆರಂಭಿಸಿದ್ದಾರೆ. ಆ ಸಿನಿಮಾ ಅಂತ್ಯವಾಗುತ್ತಿದ್ದಂತೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Fri, 12 January 24