‘ಲೈಗರ್’ ಸೋತ ಬೆನ್ನಲ್ಲೇ ಪುರಿ ಜಗನ್ನಾಥ್ ಸಹಾಯಕ ನಿರ್ದೇಶಕ ಸಾಯಿ ಕುಮಾರ್ ಆತ್ಮಹತ್ಯೆ
Sai Kumar suicide: ಸಾಯಿ ಕುಮಾರ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಅವರ ಮೃತದೇಹ ಸಿಕ್ಕ ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಖ್ಯಾತ ನಿರ್ದೇಶಕ, ನಿರ್ಮಾಪಕ ಪುರಿ ಜಗನ್ನಾಥ್ (Puri Jagannadh) ಅವರಿಗೆ 2022ರ ವರ್ಷ ತುಂಬ ನೆಗೆಟಿವ್ ಆಗಿದೆ. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲೈಗರ್’ ಸಿನಿಮಾ (Liger) ಸೋಲು ಕಂಡಿತು. ಇದರ ಬೆನ್ನಲ್ಲೇ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. ಪುರಿ ಜಗನ್ನಾಥ್ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾಯಿ ಕುಮಾರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ಕೇಳಿ ಇಡೀ ಟಾಲಿವುಡ್ ಮರುಕ ವ್ಯಕ್ತಪಡಿಸುತ್ತಿದೆ. ಕಳೆದ ಕೆಲವು ತಿಂಗಳಿಂದ ಸಾಯಿ ಕುಮಾರ್ ಅವರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಅವರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಕ್ಕೆ ಹಣಕಾಸಿನ ತೊಂದರೆಯೇ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆ ಬಳಿಕ ಸ್ಪಷ್ಟ ಚಿತ್ರಣ ದೊರಕಬೇಕಿದೆ.
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದರು. ಅಂದುಕೊಂಡ ರೀತಿಯಲ್ಲಿ ಈ ಚಿತ್ರಕ್ಕೆ ಕಲೆಕ್ಷನ್ ಆಗಲಿಲ್ಲ. ಆ ಬಳಿಕ ಅನೇಕ ಸುದ್ದಿಗಳು ಹರಿದಾಡಲು ಆರಂಭಿಸಿವೆ. ಮುಂಬೈನಲ್ಲಿ ಪುರಿ ಜಗನ್ನಾಥ್ ಮಾಡಿಕೊಂಡಿದ್ದ ಆಫೀಸ್ ಕಟ್ಟಡವನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಭಾರಿ ನಷ್ಟದಿಂದಾಗಿ ತಮ್ಮ ಸಿಬ್ಬಂದಿಗಳಿಗೂ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಅದರ ಬೆನ್ನಲ್ಲೇ ಸಹಾಯಕ ನಿರ್ದೇಶಕ ಸಾಯಿ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಸಾಯಿ ಕುಮಾರ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಅವರ ಮೃತದೇಹ ಸಿಕ್ಕ ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ‘ಲೈಗರ್’ ಸಿನಿಮಾದ ಸೋಲಿಗೂ, ಸಾಯಿ ಕುಮಾರ್ ಆತ್ಮಹತ್ಯೆಗೂ ಏನಾದರೂ ನೇರ ಸಂಬಂಧ ಇದೆಯೇ ಎಂಬುದು ತನಿಖೆ ಬಳಿಕವೇ ಗೊತ್ತಾಗಬೇಕಿದೆ.
ಹೊರಗಿನಿಂದ ನೋಡುವವರಿಗೆ ಚಿತ್ರರಂಗ ಕಲರ್ಫುಲ್ ಆಗಿ ಕಾಣುತ್ತದೆ. ಆದರೆ ಈ ಕ್ಷೇತ್ರದಲ್ಲೂ ಕೂಡ ಕಷ್ಟ-ನಷ್ಟ ಎದುರಾಗುತ್ತದೆ ಎಂಬುದು ಹೊರಗಿನವರಿಗೆ ಅರ್ಥ ಆಗುವುದು ವಿರಳ. ಒಂದು ಸಿನಿಮಾ ಸೋತರೆ ಅದರಿಂದ ಅನೇಕರ ಜೀವನ ಕಷ್ಟಕ್ಕೆ ತಳ್ಳಲ್ಪಡುತ್ತದೆ. ಸರಿಯಾದ ಅವಕಾಶ ಸಿಗದೇ ಇದ್ದರೆ ಬದುಕು ನಡೆಸುವುದೇ ಕಷ್ಟ ಆಗಿಬಿಡುತ್ತದೆ.
‘ಲೈಗರ್’ ಚಿತ್ರದ ಸೋಲಿನಿಂದ ಅನೇಕರ ಕನಸು ಭಗ್ನ ಆಗಿದೆ. ಈ ಮೊದಲು ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ನಲ್ಲಿ ‘ಜನ ಗಣ ಮನ’ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಈಗ ಆ ಚಿತ್ರವನ್ನು ಕೈ ಬಿಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Sun, 11 September 22








