ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ
ರಾಜಮೌಳಿ ತಾವೇ ಆರಂಭಿಸಿದ ಎರಡು ಭಾಗಗಳ ಸಿನಿಮಾ ಟ್ರೆಂಡ್ ಬಗ್ಗೆ ರೇಜಿಗೆಗೊಂಡು ದೊಡ್ಡ ನಿರ್ಧಾರಕ್ಕೆ ಬಂದಿದ್ದಾರೆ. ಮಹೇಶ್ ಬಾಬು ನಟನೆಯ 'ವಾರಣಾಸಿ' ಚಿತ್ರವನ್ನು ಎರಡು ಭಾಗಗಳಲ್ಲಿ ಮಾಡುವ ಬದಲು, ಒಂದೇ ಭಾಗದಲ್ಲಿ ತೆರೆಗೆ ತರಲು ನಿರ್ಧರಿಸಿದ್ದಾರೆ. ಪ್ರೇಕ್ಷಕರು ಎರಡು ಭಾಗದ ಸಿನಿಮಾಗಳ ಬಗ್ಗೆ ಅಸಮಾಧಾನಗೊಂಡಿದ್ದು, ಅರ್ಥವಿಲ್ಲದಂತೆ ಆಗಿರುವ ಈ ಟ್ರೆಂಡ್‌ಗೆ ಬ್ರೇಕ್ ಹಾಕಲು ರಾಜಮೌಳಿ ನಿರ್ಧರಿಸಿದ್ದಾರೆ.

ಒಂದು ಚಿತ್ರವನ್ನು ಎರಡು ಪಾರ್ಟ್ನಲ್ಲಿ ತರುವ ಟ್ರೆಂಡ್ನ ಭಾರತದಲ್ಲಿ ಹೆಚ್ಚು ಪ್ರಚಲಿತ ಮಾಡಿದ್ದು ನಿರ್ದೇಶಕ ರಾಜಮೌಳಿ (Rajamouli). ‘ಬಾಹುಬಲಿ’ ಬಳಿಕ ‘ಬಾಹುಬಲಿ 2’ ಚಿತ್ರಕ್ಕೆ ಕಾಯುವಂತೆ ಅವರು ಮಾಡಿದರು. ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಪ್ರಶ್ನೆಯೊಂದಿಗೆ ಮೊದಲ ಭಾಗ ಪೂರ್ಣಗೊಳಿಸಿದ್ದರೆ, ಎರಡನೇ ಪಾರ್ಟ್ ಅಲ್ಲಿ ಅದಕ್ಕೆ ಉತ್ತರ ನೀಡಿದರು. ಆ ಬಳಿಕ ಬಂದ ‘ಆರ್ಆರ್ಆರ್’ ಚಿತ್ರವನ್ನು ಒಂದೇ ಭಾಗದಲ್ಲಿ ಪೂರ್ಣಗೊಳಿಸಲಾಯಿತು. ಈಗ ‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್ ಅಲ್ಲಿ ತರಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.
‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್ ಅಲ್ಲಿ ಮಾಡಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಆದರೆ, ಈಗ ಎಲ್ಲರೂ ಎರಡು ಪಾರ್ಟ್ಗಳಲ್ಲಿ ಸಿನಿಮಾ ಮಾಡಿ, ಅದಕ್ಕೆ ಅರ್ಥವೇ ಇಲ್ಲದಂತೆ ಮಾಡಿಯಾಗಿದೆ. ಕೆಲವರು ಮೊದಲ ಪಾರ್ಟ್ ರಿಲೀಸ್ ಮಾಡುತ್ತಾರೆ. ಹಿಟ್ ಆಗಿಲ್ಲ ಎಂದರೆ ಎರಡನೇ ಪಾರ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದನ್ನು ಮಾಡುವ ಗೋಜಿಗೂ ಹೋಗೋದಿಲ್ಲ. ಈ ಎಲ್ಲಾ ಕಾರಣದಿಂದ ಎರಡು ಪಾರ್ಟ್ಗಳಲ್ಲಿ ಸಿನಿಮಾನ ಮಾಡುವ ಬಗ್ಗೆ ಪ್ರೇಕ್ಷಕರಿಗೂ ಅಸಮಾಧಾನ ಇದೆ. ಸದಾ ಪ್ರೇಕ್ಷಕರ ನಾಡಿಮಿಡಿತ ಅರ್ಥಿಸಿಕೊಳ್ಳೋ ರಾಜಮೌಳಿ ಈ ಬಾರಿ ಆ ಸಾಹಸಕ್ಕೆ ಕೈ ಹಾಕುತ್ತಿಲ್ಲ.
‘ವಾರಣಾಸಿ’ ಸಿನಿಮಾನ ಒಂದೇ ಪಾರ್ಟ್ ಅಲ್ಲಿ ತರುವ ಆಲೋಚನೆ ಅವರಿಗೆ ಇದೆ. ಈ ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿರಲಿದೆಯಂತೆ. ಸಿನಿಮಾದ ಅವಧಿ ಹೆಚ್ಚಿದ್ದರೂ, ಎಲ್ಲವನ್ನೂ ಒಂದೇ ಪಾರ್ಟ್ ಅಲ್ಲಿ ಹೇಳುವ ನಿರ್ಧಾರಕ್ಕೆ ರಾಜಮೌಳಿ ಬಂದಿದ್ದಾರೆ. ಈ ನಿರ್ಧಾರ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಇದನ್ನೂ ಓದಿ: ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು
ಎರಡು ಪಾರ್ಟ್ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್‌ಗೆ ಈಗ ಅರ್ಥ ಉಳಿದುಕೊಂಡಿಲ್ಲ. ಪ್ರೇಕ್ಷಕರು ಇದನ್ನು ಹೇಟ್ ಮಾಡುತ್ತಿದ್ದಾರೆ. ಹೀಗಾಗಿ ತಾವೇ ಆರಂಭಿಸಿದ ಟ್ರೆಂಡ್ನ ರಾಜಮೌಳಿ ಅವರು ಬ್ರೇಕ್ ಮಾಡಿದ್ದಾರೆ. ಅವರಿಗೂ ಈ ಟ್ರೆಂಡ್ ರೇಜಿಗೆ ಮೂಡಿಸಿದೆ ಎನ್ನಲಾಗಿದೆ. ‘ವಾರಣಾಸಿ’ ಸಿನಿಮಾಗೆ ಮಹೇಶ್ ಬಾಬು ಹೀರೋ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




