ಜೈಲರ್ 2: 40 ವರ್ಷಗಳ ನಂತರ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿದೆ. ಈ ಬ್ಲಾಕ್‌ಬಸ್ಟರ್ ಯಶಸ್ಸಿನ ನಡುವೆ, ರಜನಿಕಾಂತ್ ಅವರು 40 ವರ್ಷಗಳ ನಂತರ ಮೊದಲ ಬಾರಿಗೆ ಚೆನ್ನೈನ ಥಿಯೇಟರ್‌ನಲ್ಲಿ ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಆ್ಯಕ್ಷನ್ ಥ್ರಿಲ್ಲರ್ ‘ಜೈಲರ್ 2’ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಮಿಂಚಿದ್ದು, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಒಂದು ಅಚ್ಚರಿಯ ವಿಷಯವೆಂದರೆ, ಸ್ವತಃ ರಜನಿಕಾಂತ್ ಅವರೇ ಥಿಯೇಟರ್‌ಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಕುಳಿತು ‘ಜೈಲರ್ 2’ ವೀಕ್ಷಿಸಿದ್ದಾರೆ.
ಕಳೆದ 40 ವರ್ಷಗಳಲ್ಲಿ ರಜನಿಕಾಂತ್ ಅವರು ತಮ್ಮ ಸಿನಿಮಾವನ್ನು ಥಿಯೇಟರ್‌ನಲ್ಲಿ ಸಾರ್ವಜನಿಕರ ಜೊತೆ ಕುಳಿತು ವೀಕ್ಷಿಸಿರುವುದು ಇದೇ ಮೊದಲ ಬಾರಿ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಶುಕ್ರವಾರ ರಾತ್ರಿ ಚೆನ್ನೈನ ಫೀನಿಕ್ಸ್ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರಕ್ಕೆ ರಜನಿಕಾಂತ್ ಅವರು ಯಾರಿಗೂ ತಿಳಿಯದಂತೆ ಭೇಟಿ ನೀಡಿದ್ದರು. ನೀಲಿ ಬಣ್ಣದ ಶರ್ಟ್, ಗ್ರೇ ಪ್ಯಾಂಟ್ ಹಾಗೂ ಕ್ಯಾಪ್ ಧರಿಸಿ ಕಾರಿನಿಂದ ಇಳಿದ ರಜನಿಕಾಂತ್ ಅವರಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸ್ವಾಗತ ಕೋರಿದರು.
ಇವರೊಂದಿಗೆ ರಜನಿಕಾಂತ್ ಅವರ ಮೊಮ್ಮಗ ಲಿಂಗಾ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕೂಡ ಹಾಜರಿದ್ದರು. ಚಿತ್ರಮಂದಿರದ ಕೊನೆಯ ಸಾಲಿನಲ್ಲಿ ಕುಳಿತು ರಜನಿಕಾಂತ್ ಅವರು ತಮ್ಮ ಸಿನಿಮಾವನ್ನು ವೀಕ್ಷಿಸುತ್ತಾ, ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಕಣ್ಣಾರೆ ಕಂಡು ಆನಂದಿಸಿದರು. ‘ಸನ್ ಪಿಕ್ಚರ್ಸ್’ ಸಂಸ್ಥೆಯು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ವಿಶೇಷ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದೆ. ‘40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಭಿಮಾನಿಗಳೊಂದಿಗೆ ಬಿಗ್ ಸ್ಕ್ರೀನ್ ಮೇಲೆ ಜೈಲರ್ 2 ವೀಕ್ಷಿಸಿದ್ದಾರೆ’ ಎಂದು ಬರೆದುಕೊಂಡಿದೆ.
For the first time in 40 years, Superstar Rajinikanth joins fans to witness #Jailer2 on the big screen!😎🔥 #Jailer2 Industry Mega Blockbuster
#Jailer2 Rampage in theatres worldwide
@rajinikanth @Nelsondilpkumar @anirudhofficial @vidya_balan @iam_SJSuryah #MithunChakraborty #SurajVenjaramoodu @meramyakrishnan @iYogiBabu @mirnaaofficial @vijaykartikdop @Nirmalcuts @ChethanDsouza @AlwaysJani @KiranDrk @sunilreddy22 #PallaviSingh @valentino_suren @Alagiakoothan #SantoshRaju @kabilanchelliah @kuchirayar73 @RIAZtheboss @IMAX
— Sun Pictures (@sunpictures) October 24, 2026
ನವರಾತ್ರಿ ಮತ್ತು ದಸರಾ ಸಾಲು ಸಾಲು ರಜಾದಿನಗಳ ಸದುಪಯೋಗ ಪಡೆದುಕೊಂಡ ‘ಜೈಲರ್ 2’, ಬಿಡುಗಡೆಯಾದ ಕೇವಲ ಮೊದಲ ವಾರದಲ್ಲೇ 500 ಕೋಟಿ ರೂಪಾಯಿ ಗಳಿಸಿತ್ತು. ಇದೀಗ ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಚಿತ್ರದ ಈ ಅಭೂತಪೂರ್ವ ಯಶಸ್ಸಿಗೆ ನಿರ್ದೇಶಕ ನೆಲ್ಸನ್ ಕೃತಜ್ಞತೆ ಸಲ್ಲಿಸಿದ್ದು, ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿದೆ. ತಲೈವಾ ಮ್ಯಾಜಿಕ್ ಎಲ್ಲಕ್ಕಿಂತ ವಿಭಿನ್ನ. ಪ್ರೇಕ್ಷಕರು ನೀಡಿದ ಈ ಅಪಾರ ಪ್ರೀತಿಗೆ ಧನ್ಯವಾದಗಳು’ ಎಂದು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಜೈಲರ್ 2’ ನೋಡಿ ಮನಸಾರೆ ಹೊಗಳಿದ ಅಲ್ಲು ಅರ್ಜುನ್
2023ರ ಸೂಪರ್ ಹಿಟ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ‘ಜೈಲರ್ 2’ ಸಿನಿಮಾವನ್ನು ಕಲಾನಿಧಿ ಮಾರನ್ ಅವರ ‘ಸನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ರಜನಿಕಾಂತ್, ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ರಿತ್ವಿಕ್ ಜೊತೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜಾರಮೂಡು ಮತ್ತು ವಿದ್ಯಾ ಬಾಲನ್ ನಟಿಸಿದ್ದಾರೆ. ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್, ಹೃತಿಕ್ ರೋಷನ್ ಅವರು ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




