ಒಂದೇ ಸೋಲಿನಿಂದ ರಶ್ಮಿಕಾ ವೃತ್ತಿಜೀವನಕ್ಕೆ ಪೆಟ್ಟು; ‘ಸ್ಪಿರಿಟ್’ ಸಿನಿಮಾದಿಂದ ಔಟ್?
‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಈಗ ನಟಿಗೆ ಹಿನ್ನಡೆ ಆದಂತಿದೆ. ‘ಸಿಕಂದರ್’ ಸಿನಿಮಾ ಸೋತಿದ್ದರಿಂದ ರಶ್ಮಿಕಾ ಅವರಿಗೆ ಬೇಡಿಕೆ ಕಡಿಮೆ ಆಗಲಿದೆ ಎಂದು ಸುದ್ದಿ ಹಬ್ಬಿದೆ. ಚಿತ್ರತಂಡದವರು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸೂಪರ್ ಸಕ್ಸಸ್ ಕಂಡ ರಶ್ಮಿಕಾ ಮಂದಣ್ಣ ಅವರು ನಿರ್ಮಾಪಕರ ಫೇವರಿಟ್ ಆಗಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳು ಹರಿದುಬರುತ್ತಿವೆ. ‘ಛಾವ’, ‘ಅನಿಮಲ್’ ಸಿನಿಮಾಗಳ ಯಶಸ್ಸಿನಿಂದ ಬಾಲಿವುಡ್ನಲ್ಲಿ ಕೂಡ ರಶ್ಮಿಕಾ ಅವರ ಖ್ಯಾತಿ ಡಬಲ್ ಆಯಿತು. ಇನ್ನು, ದಕ್ಷಿಣ ಭಾರತದಲ್ಲಿ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಈ ನಡುವೆ ಪ್ರಭಾಸ್ ನಟನೆಯ ‘ಸ್ಪಿರಿಟ್’ (Spirit) ಸಿನಿಮಾಗೂ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗುತ್ತಾರೆ ಎಂದು ಗಾಸಿಪ್ ಹಬ್ಬಿತ್ತು. ಆದರೆ ಈಗ ಬೇರೆ ಸುದ್ದಿ ಕೇಳಿಬರುತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna) ಅವರು ಈ ಚಿತ್ರಕ್ಕೆ ಆಯ್ಕೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ‘ಸ್ಪಿರಿಟ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್ ಆಗಿದ್ದಾರೆ. ಪ್ರಭಾಸ್ ಜೊತೆ ‘ಸ್ಪಿರಿಟ್’ ಸಿನಿಮಾ ಮಾಡಲು ಅವರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ರಶ್ಮಿಕಾ ಮಂದಣ್ಣ ಮತ್ತು ಸಂದೀಪ್ ರೆಡ್ಡಿ ವಂಗಾ ಅವರು ‘ಅನಿಮಲ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ‘ಸ್ಪಿರಿಟ್’ ಚಿತ್ರಕ್ಕೂ ರಶ್ಮಿಕಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿತ್ತು. ಆದರೆ ಈಗ ರಶ್ಮಿಕಾ ನಟನೆಯ ‘ಸಿಕಂದರ್’ ಸಿನಿಮಾಗೆ ಸೋಲು ಉಂಟಾಗಿರುವ ಕಾರಣದಿಂದ ಬೇರೆ ನಟಿಯನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ರಶ್ಮಿಕಾ ನಟಿಸಿದರು. ಟ್ರೇಲರ್ ಬಿಡುಗಡೆ ಆದಾಗಲೇ ಈ ಸಿನಿಮಾ ಬಗ್ಗೆ ಟ್ರೋಲ್ ಶುರುವಾಯಿತು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಿಲ್ಲ. ರಶ್ಮಿಕಾ ಅವರ ನಟನೆಯನ್ನು ಜನರು ಟೀಕಿಸಿದ್ದಾರೆ. ರಶ್ಮಿಕಾ ಬಗ್ಗೆ ಇಂಥ ನೆಗೆಟಿವ್ ಟಾಕ್ ಶುರುವಾಗಿರುವುದರಿಂದ ‘ಸ್ಪಿರಿಟ್’ ಸಿನಿಮಾಗೆ ಬೇರೆ ನಟಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಫೋಟೋದಿಂದ ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಡುವಿನ ಗುಟ್ಟು
ಒಂದು ವೇಳೆ ರಶ್ಮಿಕಾ ಮಂದಣ್ಣ ಅವರು ‘ಸ್ಪಿರಿಟ್’ ಚಿತ್ರಕ್ಕೆ ಆಯ್ಕೆಯಾದರೆ ಅದು ಅವರ ಪಾಲಿಗೆ ದೊಡ್ಡ ಪ್ರಾಜೆಕ್ಟ್ ಆಗಲಿದೆ. ಅದಕ್ಕಾಗಿ ಅವರು 4 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಸಾಧ್ಯತೆ ಇತ್ತು. ಆದರೆ ಈ ಯಾವ ಬೆಳವಣಿಗೆಗಳ ಬಗ್ಗೆಯೂ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಾಗಿ ಕಾದುನೋಡೋಣ ಎನ್ನುತ್ತಿದ್ದಾರೆ ರಶ್ಮಿಕಾ ಮಂದಣ್ಣ ಅಭಿಮಾನಿಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.