120 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ‘ರಾಬಿನ್ಹುಡ್’, ವಿಕೆ ಫಿಲಮ್ಸ್ ವಿತರಣೆ
Robinhood: ಶ್ರೀಲೀಲಾ, ನಿತಿನ್ ನಟನೆಯ ‘ರಾಬಿನ್ಹುಡ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಪುಷ್ಪ’ ನಿರ್ಮಾಪಕರು ನಿರ್ಮಾಣ ಮಾಡಿರುವ ಈ ಸಿನಿಮಾ ಕರ್ನಾಟಕದಲ್ಲಿಯೂ ಅದ್ಧೂರಿಯಾಗಿ ಬಿಡುಗಡೆ ಆಗಲಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿಕೆ ಫಿಲಮ್ಸ್ ಬಿಡುಗಡೆ ಮಾಡುತ್ತಿದ್ದಾರೆ. ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ಕನ್ನಡತಿ ಶ್ರೀಲೀಲಾ ನಟಿಸಿರುವ ಮತ್ತೊಂದು ತೆಲುಗು ಸಿನಿಮಾ ಬಿಡುಗಡೆ ಆಗುತ್ತಿದೆ. ಶ್ರೀಲೀಲಾ ನಟನೆಯ ಎಂಟು ತೆಲುಗು ಸಿನಿಮಾಗಳು ಈ ವರೆಗೆ ಬಿಡುಗಡೆ ಆಗಿದ್ದು, ಇದು ಒಂಬತ್ತನೇ ಸಿನಿಮಾ ಆಗಿದೆ. ‘ರಾಬಿನ್ಹುಡ್’ ಹೆಸರಿನ ಈ ಸಿನಿಮಾವನ್ನು ‘ಪುಷ್ಪ’ ಸಿನಿಮಾ ಸರಣಿಗೆ ಬಂಡವಾಳ ತೊಡಗಿಸಿದ್ದ ಮೈತ್ರಿ ಮೂವಿ ಮೇಕರ್ಸ್ನವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡುಗಳು, ಟ್ರೈಲರ್, ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಕರ್ನಾಟಕದಲ್ಲಿಯೂ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದ್ದು, ಕನ್ನಡದಲ್ಲಿ ವಿಕೆ ಫಿಲಮ್ಸ್ ಈ ಸಿನಿಮಾದ ವಿತರಣೆ ಮಾಡುತ್ತಿದೆ.
‘ಜಯಂ’ಸಿನಿಮಾ ಖ್ಯಾತಿಯ ನಿತಿನ್ ಮುಖ್ಯ ಪಾತ್ರದಲ್ಲಿ ‘ರಾಬಿನ್ ಹುಡ್’ ಸಿನಿಮಾ ಮಾರ್ಚ್ 28ರಂದು ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯ ಬಲು ಜೋರಾಗಿ ನಡೆಯುತ್ತಿದೆ. ಈ ತೆಲುಗು ಸಿನಿಮಾವನ್ನು ಕರ್ನಾಟಕದಲ್ಲಿ ವಿಕೆ ಫಿಲಂಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ. ಸಿನಿಮಾದ ನಟರನ್ನು ಕರ್ನಾಟಕಕ್ಕೂ ಕರೆತಂದು ಪ್ರಚಾರ ಮಾಡುವ ಸಾಧ್ಯತೆ ಇದೆ. ವೆಂಕಿ ಕುಡುಮುಲ ‘ರಾಬಿನ್ ಹುಡ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ರಾಜೇಂದ್ರ ಪ್ರಸಾದ್, ವೆನ್ನೆಲಾ ಕಿಶೋರ್ ಮತ್ತು ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಪೋಷಕ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನ ಚಿತ್ರಕ್ಕಿದೆ.
ಕರ್ನಾಟಕದಲ್ಲಿ ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ ವಿಕೆ ಫಿಲಮ್ಸ್. ಬಜೆಟ್ನಲ್ಲಿ ಏಕರೂಪ ಟಿಕೆಟ್ ಘೋಷಣೆ ಮಾಡಿದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ದೊಡ್ಡ ಬಜೆಟ್ ತೆಲುಗು ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೆ ಕರ್ನಾಟಕದಲ್ಲಿ ಟಿಕೆಟ್ ದರ ಎಷ್ಟಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:‘ಡ್ಯಾನ್ಸರ್’ ಎಂದ ನಿರೂಪಕಿ ಮೇಲೆ ಶ್ರೀಲೀಲಾ ಸಿಟ್ಟು
‘ರಾಬಿನ್ಹುಡ್’ ಸಿನಿಮಾದ ‘ಅದಿದಾ ಸರ್ಪ್ರೈಸು’ ಐಟಂ ಹಾಡು ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿದೆ. ಕೇತಿಕಾ ಶರ್ಮಾ ಈ ಐಟಂ ಹಾಡಿಗೆ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ಆದರೆ ತೆಲಂಗಾಣ ಮಹಿಳಾ ಆಯೋಗ ಸೇರಿದಂತೆ ಹಲವು ಮಹಿಳಾಪರ ಹೋರಾಟಗಾರರು ಹಾಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯ ಪ್ರದರ್ಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಸಹ ಒತ್ತಾಯಗಳು ಕೇಳಿ ಬಂದಿವೆ. ಆದರೆ ಚತ್ರತಂಡ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ