ಮಾ.27ಕ್ಕೆ ರನ್ಯಾ ರಾವ್ ಭವಿಷ್ಯ ನಿರ್ಧಾರ; ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಅಕ್ರಮ ಚಿನ್ನ ಸಾಗಾಣಿಕೆ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ ಆಗಿದೆ. ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಮಾರ್ಚ್ 27ರಂದು ಆದೇಶ ಪ್ರಕಟ ಆಗಲಿದೆ.

ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ (Ranya Rao) ಅವರ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಡಿಆರ್‌ಐ ಪರ ವಕೀಲ ಮಧು ರಾವ್ ಅವರು ವಾದ ಮಂಡನೆ ಮಾಡಿದ್ದಾರೆ. ರನ್ಯಾ ರಾವ್ ಪರ ಹಿರಿಯ ವಕೀಲ ಕಿರಣ್ ಜವಳಿ ಪ್ರತಿವಾದ ಮಾಡಿದ್ದಾರೆ. ಎರಡೂ ಕಡೆಯ ವಾದವನ್ನು ಆಲಿಸಿರುವ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಮಾರ್ಚ್ 27ರಂದು ರನ್ಯಾ ಅವರ ಜಾಮೀನು (Ranya Rao Bail) ಆದೇಶ ಪ್ರಕಟ ಆಗಲಿದ್ದು, ಅಂದು ಅವರ ಭವಿಷ್ಯ ನಿರ್ಧಾರ ಆಗಲಿದೆ.
‘ಯಾವುದು ಕಾಗ್ನಿಸಬಲ್, ಯಾವುದು ನಾನ್ ಕಾಗ್ನಿಸಬಲ್ ಎಂದು ಕಸ್ಟಮ್ಸ್ ಕಾಯ್ದೆ 135ರಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಇದು ಕಾಗ್ನಿಸಬಲ್ ಅಪರಾಧವಾಗಿದೆ ಹಾಗೂ ಜಾಮೀನು ರಹಿತವಾಗಿದೆ. ನಟಿ ರನ್ಯಾ ರಾವ್ ದುಬೈನಿಂದ ಚಿನ್ನದ ಜೊತೆ ಬಂದಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ಗೆ ಸಂಜೆ 6.30ಕ್ಕೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ. ಅಲ್ಲಿಗೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ ಅಂದರೆ ರನ್ಯಾ ರಾನ್ ಗ್ರೀನ್ ಚಾನಲ್ ಮೂಲಕ ಬರ್ತಿದ್ದಾರೆಂದು ಅರ್ಥ’ ಎಂದು ಡಿಆರ್‌ಐ ಪರ ವಕೀಲ ಮಧು ರಾವ್ ವಾದ ಮಂಡಿಸಿದ್ದಾರೆ.
‘ಕಸ್ಟಮ್ಸ್ ಏರಿಯಾ, ಇಮ್ಮಿಗ್ರೇಷನ್ ಏರಿಯಾ ಎಲ್ಲಾ ಆದ ಮೇಲೆ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್‌ನನ್ನು ಮಾತನಾಡಿಸಿದ್ದಾರೆ. ಮೊದಲು ಬ್ಯಾಗ್ ಪರಿಶೀಲಿಸಲಾಗಿದೆ. ಅಲ್ಲಿ ಏನೂ ಪತ್ತೆಯಾಗಿರಲಿಲ್ಲ. ಬಳಿಕ ಆಕೆಯನ್ನ ತಪಾಸಣೆಗೆ ಒಳಪಡಿಸಲಾಗಿದೆ. ಕಸ್ಟಮ್ಸ್ ಕಾಯ್ದೆ 102 ಅಡಿಯಲ್ಲಿ ಕೂಡಲೇ ನೋಟಿಸ್ ನೀಡಲಾಗಿದೆ. ಇದನ್ನು ಕೊಡಲೇಬೇಕು ಎಂದಿಲ್ಲ. ವಸ್ತು ಪತ್ತೆಯಾದಾಗ ಆರೋಪಿಯ ಸ್ವಾತಂತ್ರ್ಯ, ಸಂವಿಧಾನದ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಕಸ್ಟಮ್ಸ್ ಕಾಯ್ದೆ 102ರಡಿಯಲ್ಲಿ ನೋಟಿಸ್ ನೀಡಿದ್ದೇವೆ’ ಎಂದು ವಕೀಲ ಮಧು ರಾವ್ ವಾದಿಸಿದ್ದಾರೆ.
ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ ಕೇಸ್: ಅತ್ತ ಹೆಂಡ್ತಿ ರನ್ಯಾಗೆ ಕಾನೂನು ಕುಣಿಕೆ ಬಿಗಿ, ಇತ್ತ ಪತಿಗೆ ಬಿಗ್ ರಿಲೀಫ್
‘ಗ್ರೀನ್ ಚಾನಲ್ ದಾಟಿದ ಬಳಿಕವೇ ಆಕೆಯನ್ನು ತಡೆದಿದ್ದಾರೆ ಅಂದರೆ ಆಕೆ ಯಾವುದೇ ಗೂಡ್ಸ್ ಕ್ಲೈಮ್ ಮಾಡಿಲ್ಲ ಎಂದಾಯ್ತು. ಆದಾದ ಬಳಿಕ ಚಿನ್ನದ ಬಗ್ಗೆ ಪ್ರಶ್ನೆ ಮಾಡಿದಾಗಲೂ ಆಕೆ ಇಲ್ಲ ಅಂದಿದ್ರು. ನಂತರ ಅಧಿಕಾರಿಗಳು ಪರ್ಸನಲ್ ಸರ್ಚ್ ಮಾಡಲು ಮುಂದಾಗ್ತಾರೆ. ಈ ವೇಳೆಯೂ DRI ಅಧಿಕಾರಿಗಳು ಗೈಡ್‌ಲೈನ್ಸ್ ಫಾಲೋ ಮಾಡಿದ್ದಾರೆ. ಕಸ್ಟಮ್ಸ್ ಕಾಯ್ದೆ 123ರಂತೆ ಸ್ಮಗ್ಲಿಂಗ್ ಮಾಡುವ ಪ್ರಯತ್ನ ಮಾಡಿದ್ರೆ, ಅದು ಪ್ರಾಥಮಿಕವಾಗಿ ನಂಬಲು ಆರ್ಹವಾಗಿದ್ರೆ ಜಾಮೀನು ನೀಡಬಾರದು ಈ ಹಂತದಲ್ಲಿ ಜಾಮೀನು ನೀಡಬಾರದು’ ಎಂದು DRI ಪರ ವಕೀಲ ಮಧು ರಾವ್ ವಾದ ಮಾಡಿದ್ದಾರೆ.
‘ಡಿಆರ್ಐನ ಸಂಪೂರ್ಣ ಪ್ರಕ್ರಿಯೆ ಕಾನೂನು ಬದ್ದವಾಗಿ ನಡೆದಿದೆ.ಸಂಜೆ 6:30ಕ್ಕೆ ಶುರುವಾಗಿ ಮಧ್ಯರಾತ್ರಿ 1:30 ಕ್ಕೆ ಮುಗಿದಿದೆ. ಬಳಿಕ ಸಮನ್ಸ್ ಜಾರಿಮಾಡಲಾಗಿದೆ. ತನಿಖೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಆದಾದ ಬಳಿಕ ಆಕೆ ರೆಸ್ಟ್ ಮಾಡಬೇಕು ಎಂದ ಕಾರಣ ಆಕೆಗೆ ರೆಸ್ಟ್ ನೀಡಲಾಗಿದೆ. ನಾವು ಆಕೆಯನ್ನ ಬಂಧಿಸುವ ಮೊದಲು, ಡಿಕೆ ಬಸು ಪ್ರಕರಣದಲ್ಲಿ ಯಾವೆಲ್ಲ ಗೈಡ್ ಲೈನ್ಸ್ ಇದೆಯೋ ಅದೆಲ್ಲವನ್ನೂ ಡಿಆರ್‌ಐ ಫಾಲೋ ಮಾಡಿದೆ. ಅರೆಸ್ಟ್ ಮೆಮೋ, ಗ್ರೌಂಡ್ಸ್ ಆಫ್ ಅರೆಸ್ಟ್, ಬಿಲೀವ್ ಟು ಅರೆಸ್ಟ್, ರೀಸನ್ಸ್ ಟು ಅರೆಸ್ಟ್ ಎಲ್ಲವನ್ನೂ ನೀಡಲಾಗಿದೆ. ದುಬೈನಲ್ಲಿ ಚಿನ್ನ ಖರೀದಿ ಮಾಡಲು ಬೇಕಾದ ಹಣವನ್ನ ಹವಾಲ ಮುಖಾಂತರ ರವಾನೆ ಮಾಡಲಾಗಿದೆ. ಇದನ್ನು ಆರೋಪಿಯು ಖುದ್ದು ಒಪ್ಪಿಕೊಂಡಿದ್ದಾಳೆ. ಸೆಕ್ಷನ್ 108 ಅಡಿಯಲ್ಲಿ ನೊಟೀಸ್ ನೀಡಿ ವಿಚಾರಣೆ ಮಾಡುವುದು ನ್ಯಾಯಾಂಗ ವಿಚಾರಣೆ. ಇದು ಪೊಲೀಸ್ ವಿಚಾರಣೆ ಅಲ್ಲ’ ಎಂದು ವಾದಿಸಿದ್ದಾರೆ ಡಿಆರ್‌ಐ ಪರ ವಕೀಲ ಮಧು ರಾವ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.