ಇಲ್ಲಿದೆ RRR ಚಿತ್ರದ ರಾಶಿ ರಾಶಿ ಟಿಕೆಟ್; ತಿಂಗಳಿಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ಗೆ ಭರ್ಜರಿ ರೆಸ್ಪಾನ್ಸ್
RRR Movie Ticket: ತಿಂಗಳಿಗೂ ಮುನ್ನವೇ ವಿದೇಶದಲ್ಲಿ ‘ಆರ್ಆರ್ಆರ್’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಾರಂಭ ಆಗಿದೆ. ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್ ಆಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವ ‘ಆರ್ಆರ್ಆರ್’ ಸಿನಿಮಾ (RRR Movie) ಈಗ ಬಿಡುಗಡೆಗೆ ಸಜ್ಜಾಗಿದೆ. ಮಾ.25ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ರಾಜಮೌಳಿ (Rajamouli) ನಿರ್ದೇಶನದ ಸಿನಿಮಾ ಆದ್ದರಿಂದ ನಿರೀಕ್ಷೆ ಜೋರಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಮಂದೂಡಲ್ಪಟ್ಟಿತ್ತು. ಈಗ ಮಾ.25ರಂದು ‘ಆರ್ಆರ್ಆರ್’ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಜೊತೆ ಬಾಲಿವುಡ್ ತಾರೆಯರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಸಾಥ್ ನೀಡಿದ್ದಾರೆ. ಅಭಿಮಾನಿಗಳು ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ‘ಆರ್ಆರ್ಆರ್’ ಮೇಲೆ ಜನರಿಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಈಗಾಗಲೇ ಸಾಕ್ಷಿ ಸಿಕ್ಕಿದೆ. ವಿದೇಶದಲ್ಲಿ ಅಡ್ವಾನ್ಸ್ ಬುಕಿಂಗ್ (RRR Advance Ticket Booking) ಓಪನ್ ಆಗಿದ್ದು, ಅಲ್ಲಿನ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಅದರಲ್ಲೂ ಜ್ಯೂ. ಎನ್ಟಿಆರ್ ಫ್ಯಾನ್ಸ್ ರಾಶಿ ರಾಶಿ ಟಿಕೆಟ್ ಖರೀದಿಸಿದ್ದಾರೆ.
‘ಬಾಹುಬಲಿ’ ಸಿನಿಮಾದಿಂದಾಗಿ ವಿದೇಶದಲ್ಲೂ ರಾಜಮೌಳಿ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಗಮನ ಸೆಳೆದ ಆ ಚಿತ್ರದ ಬಳಿಕ ಅವರ ಬತ್ತಳಿಕೆಯಿಂದ ಈಗ ‘ಆರ್ಆರ್ಆರ್’ ಬರುತ್ತಿದೆ. ಹಾಗಾಗಿ ಅಭಿಮಾನಿಗಳ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಟೀಸರ್ಗಳಿಂದ ಈ ಸಿನಿಮಾ ಧೂಳೆಬ್ಬಿಸಿದೆ. ಇನ್ನೇನಿದ್ದರೂ ಚಿತ್ರಮಂದಿರದಲ್ಲಿ ಪೂರ್ತಿ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಷ್ಟೇ ಬಾಕಿ. ತಿಂಗಳಿಗೂ ಮುನ್ನವೇ ವಿದೇಶದಲ್ಲಿ ಈ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಾರಂಭ ಆಗಿದೆ.
ಜ್ಯೂ. ಎನ್ಟಿಆರ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಅಮೆರಿಕದಲ್ಲಿ ಇರುವ ಅಭಿಮಾನಿಯೊಬ್ಬರು ಬರೋಬ್ಬರಿ 75 ಟಿಕೆಟ್ಗಳನ್ನು ಏಕಕಾಲಕ್ಕೆ ಖದೀರಿಸಿದ್ದಾರೆ. ಅದರ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲೆಡೆ ವೈರಲ್ ಆಗುತ್ತಿದೆ. ‘ಆರ್ಆರ್ಆರ್’ ಚಿತ್ರದ ಬಗ್ಗೆ ವಿದೇಶದಲ್ಲಿ ಎಷ್ಟರಮಟ್ಟಿಗೆ ಕ್ರೇಜ್ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದ ಕಡೆಗಳಲ್ಲೂ ಬುಕಿಂಗ್ ಶುರುವಾಗಿದೆ. ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್ ಆಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಈ ಎಲ್ಲ ಬೆಳವಣಿಗೆ ಗಮನಿಸಿದರೆ ‘ಆರ್ಆರ್ಆರ್’ ಚಿತ್ರವು ಥಿಯೇಟರ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂಬುದರ ಮುನ್ಸೂಚನೆ ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಶೀಘ್ರದಲ್ಲೇ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೆ ತೆರಳಿರುವ ರಾಜಮೌಳಿ ಮತ್ತು ಅವರ ಬಳಗದವರು ಒಂದು ಸುತ್ತಿನ ಪ್ರಚಾರ ಕಾರ್ಯ ನಡೆಸಿದ್ದಾರೆ.
ಈ ರೀತಿ ಹೈಪ್ ಇರುವ ಸಿನಿಮಾಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳೋಕೆ ಒಟಿಟಿ ಪ್ಲಾಟ್ಫಾರ್ಮ್ಗಳು ಪ್ರಯತ್ನಿಸುತ್ತಾರೆ. ಈಗ ‘ಆರ್ಆರ್ಆರ್’ ಪ್ರಸಾರ ಹಕ್ಕನ್ನು ಒಟಿಟಿ ಪ್ಲಾಟ್ಫಾರ್ಮ್ ಒಂದು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಅದರಿಂದ ರಿಲೀಸ್ಗೂ ಮೊದಲೇ ಈ ಚಿತ್ರ ಬರೋಬ್ಬರಿ 890 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂಬ ಸುದ್ದಿ ಹಬ್ಬಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಒಂದಷ್ಟು ತಿಂಗಳ ನಂತರದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ:
‘ಆರ್ಆರ್ಆರ್’ ನಿರ್ಮಾಪಕನ ಖಾತೆಯಿಂದ ಪ್ರಭಾಸ್ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?
ರಾಜಮೌಳಿ ಜತೆ ಪ್ರಭಾಸ್ ಮತ್ತೊಂದು ಸಿನಿಮಾ; ಗುಡ್ ನ್ಯೂಸ್ ತಿಳಿಸಿದ ‘ರಾಧೆ ಶ್ಯಾಮ್’ ಹೀರೋ