‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್ಗೆ ಸಮನ್ಸ್ ಜಾರಿ
‘ಬೀಯಿಂಗ್ ಹ್ಯೂಮನ್’ ಆಭರಣದ ವ್ಯವಹಾರದಲ್ಲಿ ಸಲ್ಮಾನ್ ಖಾನ್ ಮೋಸ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಕೋರ್ಟ್ ಸಮನ್ಸ್ ನೀಡಿದೆ. ಅಷ್ಟಕ್ಕೂ ಸಲ್ಮಾನ್ ಖಾನ್ ಮೇಲೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಬಂದಿರುವುದು ಹೇಗೆ? ಇಲ್ಲಿದೆ ಉತ್ತರ..

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ಬ್ರ್ಯಾಂಡ್ ‘ಬೀಯಿಂಗ್ ಹ್ಯೂಮನ್’ (Being Human) ಜ್ಯುವೆಲ್ಲರಿ ವ್ಯವಹಾರಕ್ಕೆ ಸಂಬಂಧಿಸಿದ ಕೋಟಿಗಟ್ಟಲೆ ರೂಪಾಯಿ ವಂಚನೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಇದರಿಂದಾಗಿ ಹಳೆಯ ಉದ್ಯಮ ವಿವಾದವೊಂದು ಮತ್ತೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಎಂಬುವರು ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್ ತೆರೆಯಲು ತಮ್ಮನ್ನು ಪ್ರಚೋದಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಉದ್ಯಮದ ಯಶಸ್ಸಿಗೆ ಅಗತ್ಯ ಬೆಂಬಲ ನೀಡುವುದಾಗಿ ಮತ್ತು ಭಾರಿ ಲಾಭ ಸಿಗಲಿದೆ ಎಂದು ಕಂಪನಿಯ ಪದಾಧಿಕಾರಿಗಳು ನೀಡಿದ ಭರವಸೆಯನ್ನು ನಂಬಿ ಸುಮಾರು 2ರಿಂದ 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾಗಿ ಗುಪ್ತಾ ದೂರಿದ್ದಾರೆ.
ಸುಳ್ಳಾದ ಭರವಸೆ, ಭಾರಿ ಆರ್ಥಿಕ ನಷ್ಟ:
ಉದ್ಯಮಿ ಅರುಣ್ ಗುಪ್ತಾ ಅವರ ಪ್ರಕಾರ, ಶೋರೂಮ್ ಆರಂಭವಾದ ಬಳಿಕ ಕಂಪನಿಯು ಒಪ್ಪಂದದಂತೆ ಯಾವುದೇ ಪ್ರಚಾರ ಅಥವಾ ವ್ಯಾಪಾರ ಬೆಂಬಲವನ್ನು ನೀಡಲಿಲ್ಲ. ಅಷ್ಟೇ ಅಲ್ಲದೆ, ಜ್ಯುವೆಲ್ಲರಿ ಆಭರಣಗಳ ಪೂರೈಕೆಯನ್ನೂ ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ತಮ್ಮ ಶೋರೂಮ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿ, ಕೋಟಿಗಟ್ಟಲೆ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.
ಸಲ್ಮಾನ್ ಖಾನ್ ಬದಲಿಗೆ ಆಯುಷ್ ಶರ್ಮಾ ಭೇಟಿ:
ಶೋರೂಮ್ ಉದ್ಘಾಟನೆಗೆ ಖುದ್ದು ನಟ ಸಲ್ಮಾನ್ ಖಾನ್ ಆಗಮಿಸಲಿದ್ದಾರೆ ಎಂದು ಕಂಪನಿಯ ಪ್ರತಿನಿಧಿಗಳು ಭರವಸೆ ನೀಡಿದ್ದರು ಎಂದು ಉದ್ಯಮಿ ತಿಳಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಸಲ್ಮಾನ್ ಖಾನ್ ಬದಲಿಗೆ ಅವರ ಭಾವ, ನಟ ಆಯುಷ್ ಶರ್ಮಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು. ಕೊಟ್ಟ ಮಾತು ತಪ್ಪಿದ್ದಕ್ಕೆ ಹಾಗೂ ವ್ಯವಹಾರದಲ್ಲಿ ಆದ ನಷ್ಟಕ್ಕೆ ಸಂಬಂಧಪಟ್ಟವರು ಸೂಕ್ತ ಸ್ಪಂದನೆ ನೀಡಲಿಲ್ಲ ಎಂಬುದು ಗುಪ್ತಾ ಅವರ ದೂರು.
ಇದನ್ನೂ ಓದಿ: ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್
ಕಂಪನಿಯ ಸ್ಪಷ್ಟನೆ:
ಈ ವಿವಾದದ ಕುರಿತು ಹಿಂದೆ ಸ್ಪಷ್ಟನೆ ನೀಡಿದ್ದ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ವ್ಯವಹಾರದ ಲೈಸೆನ್ಸ್ ಹೊಂದಿರುವ ಕಂಪನಿಯು, ಫ್ರಾಂಚೈಸಿ ಒಪ್ಪಂದದಲ್ಲಿ ಸಲ್ಮಾನ್ ಖಾನ್ ಅಥವಾ ಅವರ ಸಹೋದರಿ ಅಲ್ವಿರಾ ಯಾವುದೇ ರೀತಿಯ ನೇರ ಪಾಲುದಾರರಲ್ಲ ಎಂದು ತಿಳಿಸಿತ್ತು. ಆದ್ದರಿಂದ ಈ ವ್ಯಾಪಾರ ವಿವಾದಕ್ಕೂ ಸಲ್ಮಾನ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಕಂಪನಿ ಹೇಳಿಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




