ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಅಂಗೀಕಾರ: ಶೀಘ್ರವೇ ಸಿಗಲಿದೆ ರಿಲೀಫ್?
ದರ್ಶನ್ ಅವರಿಗೆ ಜೈಲು ಅಧಿಕಾರಿಗಳು ಕನಿಷ್ಠ ಸವಲತ್ತು ಕೂಡ ನೀಡಿಲ್ಲ ಎಂಬ ಆರೋಪ ಇದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.

ಖ್ಯಾತ ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆದರೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಅವರಿಗೆ ಕನಿಷ್ಠ ಸವಲತ್ತುಗಳನ್ನು ಕೂಡ ನೀಡಿಲ್ಲ ಎಂಬ ಆರೋಪ ಇದೆ. ಹಾಗಾಗಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಖುದ್ದು ಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ಇದರಿಂದಾಗಿ ದರ್ಶನ್ (Darshan) ಅವರಿಗೆ ರಿಲೀಫ್ ಸಿಗುವ ಸಾಧ್ಯತೆ ಇದೆ.
ಕೊಲೆ ಆರೋಪಿ ದರ್ಶನ್ ಅವರ ಅರ್ಜಿಯನ್ನು ಭಾಗಶಃ ಅಂಗೀಕರಿಸಿ, ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶ ನೀಡಿದೆ. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
‘ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಅಕ್ಟೋಬರ್ 18ರೊಳಗೆ ಭೇಟಿ ನೀಡಿ ವರದಿ ನೀಡಬೇಕು’ ಎಂದು ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಈ ಮೊದಲು ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ನಂತರ ಅವರು ಜಾಮೀನು ಪಡೆದುಕೊಂಡರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ ಬಳಿಕ ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಯಿತು.
ಇದನ್ನೂ ಓದಿ: ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ದರ್ಶನ್ ಕೇಸ್ಗೆ ಎರಡನೇ ಸ್ಥಾನ
ಈ ಬಾರಿ ಆರೋಪಿಯಿಂದ ಯಾವುದೇ ನಿಯಮ ಉಲ್ಲಂಘನೆ ಆಗದ ರೀತಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಆದ್ದರಿಂದ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಿದೆ. ಇದರಿಂದಾಗಿ ತಮಗೆ ಜೈಲು ಅಧಿಕಾರಿಗಳು ಕನಿಷ್ಠ ಸವಲತ್ತು ಕೂಡ ನೀಡಿಲ್ಲ ಎಂದು ದರ್ಶನ್ ಆರೋಪಿಸಿದ್ದಾರೆ. ಪರಿಶೀಲನೆ ಬಳಿಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯಾವ ರೀತಿ ವರದಿ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



