ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿ ಒಡೆದು ಹಾಕಿದ ದರ್ಶನ್ ಫ್ಯಾನ್ಸ್
ಬೆಂಗಳೂರಿನ ‘ಪ್ರಸನ್ನ’ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಚಿತ್ರಮಂದಿರದ ವಸ್ತುಗಳಿಗೆ ಹಾನಿ ಮಾಡಲಾಗಿದೆ. ಅಂದಾಜು 90 ಸೀಟ್ಗಳನ್ನು ಒಡೆದುಹಾಕಲಾಗಿದೆ. ಕಿಟಕಿ ಮತ್ತು ಬಾಗಿಲಿಗೂ ಹಾನಿ ಆಗಿದೆ. ದರ್ಶನ್ ಅಭಿಮಾನಿಗಳ ಈ ವರ್ತನೆಯಿಂದ ಚಿತ್ರಮಂದಿರದ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ.

ನಟ ದರ್ಶನ್ ಅವರ ಅಭಿಮಾನಿಗಳು (Darshan Fans) ಹಲವು ಬಾರಿ ಅತಿರೇಕದಿಂದ ವರ್ತಿಸಿದ ಉದಾಹರಣೆ ಇದೆ. ಈಗ ಅಂಥ ವರ್ತನೆ ಮತ್ತೆ ಮರುಕಳಿಸಿದೆ. ಬೆಂಗಳೂರಿನಲ್ಲಿ ಪ್ರಸನ್ನ (Prasanna Theatre) ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳು ಹುಚ್ಚಾಟ ಪ್ರದರ್ಶಿಸಿದ್ದಾರೆ. ದರ್ಶನ್ ಅವರ ಆಪ್ತ ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಟ್ರೇಲರ್ (Vaamana Trailer) ಬಿಡುಗಡೆ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಚಿತ್ರಮಂದಿರದ ಕುರ್ಚಿ, ಕಿಟಕಿ, ಬಾಗಿಲಿಗೆ ಹಾನಿ ಆಗುವ ರೀತಿಯಲ್ಲಿ ದರ್ಶನ್ ಫ್ಯಾನ್ಸ್ ನಡೆದುಕೊಂಡಿದ್ದಾರೆ. ಈ ಬಗ್ಗೆ ಚಿತ್ರಮಂದಿರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದರ್ಶನ್ ಮತ್ತು ಧನ್ವೀರ್ ಗೌಡ ನಡುವೆ ಆಪ್ತತೆ ಇದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾಗ ಜಾಮೀನು ಕೊಡಿಸಲು ಪ್ರಯತ್ನಿಸಿದವರಲ್ಲಿ ಧನ್ವೀರ್ ಗೌಡ ಪ್ರಮುಖರು. ಈಗ ಧನ್ವೀರ್ ನಟನೆಯ ‘ವಾಮನ’ ಸಿನಿಮಾಗೆ ದರ್ಶನ್ ಬೆಂಬಲ ನೀಡಿದ್ದಾರೆ. ಆನ್ಲೈನ್ ಮೂಲಕ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಆ ವಿಡಿಯೋವನ್ನು ‘ಪ್ರಸನ್ನ’ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.
ದರ್ಶನ್ ಆಪ್ತನ ಸಿನಿಮಾ ಆದ್ದರಿಂದ ‘ವಾಮನ’ ಟ್ರೇಲರ್ ಬಿಡುಗಡೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾದರು. ಪ್ರಸನ್ನ ಚಿತ್ರಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ದಾಂಧಲೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ನೋಡಲು ಬಂದವರು ‘ಪ್ರಸನ್ನ’ ಚಿತ್ರಮಂದಿರದ ವಸ್ತುಗಳನ್ನು ಒಡೆದುಹಾಕಿದ್ದಾರೆ.
ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿಗಳನ್ನು ದರ್ಶನ್ ಅಭಿಮಾನಿಗಳು ಒಡೆದುಹಾಕಿದ್ದಾರೆ. ಥಿಯೇಟರ್ನ ಸೆಕೆಂಡ್ ಕ್ಲಾಸ್ನಲ್ಲಿರುವ 80 ಸೀಟ್ ಹಾಗೂ ಬಾಲ್ಕನಿಯಲ್ಲಿನ 10 ಸೀಟ್ಗಳನ್ನು ಮುರಿದುಹಾಕಲಾಗಿದೆ. ದರ್ಶನ್ ಫ್ಯಾನ್ಸ್ ನಡೆಗೆ ಪ್ರಸನ್ನ ಥಿಯೇಟರ್ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಶುಕ್ರವಾರ (ಮಾರ್ಚ್ 28) ಹೊಸ ಸಿನಿಮಾ ರಿಲೀಸ್ ಇದೆ. ದರ್ಶನ್ ಅಭಿಮಾನಿಗಳು ಸಾಕಷ್ಟು ಸೀಟ್ಗಳನ್ನು ಮುರಿದು ಹಾಕಿದ್ದಾರೆ. ನಾಳೆ ಸಿನಿಮಾ ರಿಲೀಸ್ಗೆ ನಾವು ಹೇಗೆ ಥಿಯೇಟರ್ ಕೊಡೋದು’ ಎಂದು ಚಿತ್ರಮಂದಿರದ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹೆಂಡತಿಗೆ ನಾನು ಮುದ್ದು ರಾಕ್ಷಸಿ ಎನ್ನುತ್ತೇನೆ: ‘ವಾಮನ’ ಟ್ರೇಲರ್ ನೋಡಿ ಮಾತಾಡಿದ ದರ್ಶನ್
‘ವಾಮನ’ ಸಿನಿಮಾದ ಟ್ರೇಲರ್ ನೋಡಿ ದರ್ಶನ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಆ ವಿಡಿಯೋವನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಬಿತ್ತರ ಮಾಡಲಾಯಿತು. ಈ ವೇಳೆ ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.