‘ಗಂಧದ ಗುಡಿ’ಯಲ್ಲಿ ಪುನೀತ್ ಹೇಳುವ ಡೈಲಾಗ್ಗೆ ವಿಧಿಯನ್ನು ಶಪಿಸಿದ ಫ್ಯಾನ್ಸ್; ಅಂಥದ್ದೇನಿದೆ?
‘ಗಂಧದ ಗುಡಿ’ ಡಾಕ್ಯುಮೆಂಟರಿ ಮಾದರಿಯಲ್ಲಿದೆ. ಇಲ್ಲಿ ಸಿನಿಮೀಯ ಅಂಶಗಳು ಇಲ್ಲ. ಪುನೀತ್ ಅವರು ಜನಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಹಲವು ಕುಗ್ರಾಮಗಳಿಗೆ ತೆರಳುವ ಅವರು ಮಕ್ಕಳ ಜತೆ ಮಕ್ಕಳಂತೆ ಬೆರೆತಿದ್ದಾರೆ.

ಪುನೀತ್ ರಾಜ್ಕುಮಾರ್ (Puneeth Rajkumar) ಅವರ ‘ಗಂಧದ ಗುಡಿ’ ಇಂದು (ಅಕ್ಟೋಬರ್ 28) ರಿಲೀಸ್ ಆಗಿದೆ. ಇದು ಪುನೀತ್ ಅವರ ಕನಸಿನ ಕೂಸಾಗಿತ್ತು. ಇದನ್ನು ನೋಡಿ ಫ್ಯಾನ್ಸ್ ಭಾವುಕರಾಗುತ್ತಿದ್ದಾರೆ. ಆ್ಯಂಕರ್ ಅನುಶ್ರೀ ಸೇರಿ ಅನೇಕರು ಕಣ್ಣೀರು ಹಾಕಿದ್ದಾರೆ. ಪುನೀತ್ ಅವರ ಕೊನೆಯ ಸಿನಿಮಾ ಇದು ಎಂಬ ಕಾರಣಕ್ಕೆ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಈಗ ‘ಗಂಧದ ಗುಡಿ’ಯ (Gandhada Gudi) ಕೆಲ ಡೈಲಾಗ್ಗಳನ್ನು ಕೇಳಿ ಫ್ಯಾನ್ಸ್ ಭಾವುಕರಾಗುತ್ತಿದ್ದಾರೆ. ಎಲ್ಲರೂ ವಿಧಿಯನ್ನು ಶಪಿಸುತ್ತಿದ್ದಾರೆ.
‘ಗಂಧದ ಗುಡಿ’ ಡಾಕ್ಯುಮೆಂಟರಿ ಮಾದರಿಯಲ್ಲಿದೆ. ಇಲ್ಲಿ ಸಿನಿಮೀಯ ಅಂಶಗಳು ಇಲ್ಲ. ಪುನೀತ್ ಅವರು ಜನಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಹಲವು ಕುಗ್ರಾಮಗಳಿಗೆ ತೆರಳುವ ಅವರು ಮಕ್ಕಳ ಜತೆ ಮಕ್ಕಳಂತೆ ಬೆರೆತಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬರುವ ಕೆಲ ಸಂಭಾಷಣೆಗಳನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಹಾವೆಂದರೆ ಭಯ. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ಮಾಡುವಾಗ ಪುನೀತ್ ಕತ್ತಿಗೆ ಹಾವನ್ನು ಸುತ್ತಲಾಗಿತ್ತು. ಹಾವು ಉಸಿರಾಡುವ ಶಬ್ದ ಪುನೀತ್ಗೆ ಸರಿಯಾಗಿ ಕೇಳಿಸಿತ್ತು. ಆಗಿನಿಂದ ಪುನೀತ್ಗೆ ಹಾವೆಂದರೆ ಭಯ. ಕಾಡಲ್ಲಿ ಸುತ್ತಾಡುವಾಗ ಹಾವಿದೆ ಎಂಬ ವಿಚಾರ ತಿಳಿದು ಪುನೀತ್ ಭಯಗೊಂಡಿದ್ದರು. ‘ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ. ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದಾರೆ. ನಾವು ಸೇಫ್ ಆಗಿ ಬೆಂಗಳೂರು ತಲುಪುತ್ತೀವಿ ತಾನೇ’ ಎಂದು ಪುನೀತ್ ಪ್ರಶ್ನೆ ಮಾಡಿದ್ದರು. ಇದನ್ನು ನೆನಪಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.
ಇದನ್ನೂ ಓದಿ: Gandhada Gudi Review: ‘ಗಂಧದ ಗುಡಿ’: ಪುನೀತ್ ನಮಗಾಗಿ ಕೊಟ್ಟುಹೋದ ಮರೆಯಲಾಗದ ಸಂದೇಶ
ಹಾವನ್ನು ಹಿಡಿಯುವ ದೃಶ್ಯವೊಂದು ಬರುತ್ತದೆ. ಉರಗ ತಜ್ಞರೊಬ್ಬರು ಹಾವನ್ನು ರಕ್ಷಿಸುತ್ತಾರೆ. ಹಾವನ್ನು ರಕ್ಷಿಸಿದ ನಂತರದಲ್ಲಿ ಪುನೀತ್ ಅವರು ವಿಶೇಷ ಮನವಿ ಒಂದನ್ನು ಮಾಡಿಕೊಳ್ಳುತ್ತಾರೆ. ‘ಒಂದೊಮ್ಮೆ ನಿಮ್ಮ ಮನೆಗೆ ಹಾವು ಬಂದರೆ ನನಗೆ ಕರೆ ಮಾಡಿ’ ಎಂಬ ಪುನೀತ್ ಮನವಿ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿದೆ. ‘ಸಮಯ ಸಿಕ್ಕಾಗಲೆಲ್ಲ ಪ್ರಕೃತಿ ಮಧ್ಯೆ ಕಳೆಯಬೇಕು’ ಎಂದು ಪುನೀತ್ ಹೇಳಿಕೊಳ್ಳುತ್ತಾರೆ. ಈ ರೀತಿಯ ಡೈಲಾಗ್ಗಳು ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸುತ್ತಿದೆ. ಪುನೀತ್ ಅವರನ್ನು ಕರೆದುಕೊಂಡ ವಿಧಿಯನ್ನು ಎಲ್ಲರೂ ಶಪಿಸುತ್ತಿದ್ದಾರೆ.








