‘ಪ್ರೇಮದ ಊರಲಿ’ ಸಿನಿಮಾದ ಒಟಿಟಿ ವದಂತಿಗೆ ಸ್ಪಷ್ಟನೆ ನೀಡಿದ ಚಿತ್ರತಂಡ
ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಈ ನಡುವೆ ಚಿತ್ರದ ಒಟಿಟಿ ಹಾಗೂ ಕಿರುತೆರೆ ಪ್ರಸಾರದ ಹಕ್ಕುಗಳ ಮಾರಾಟದ ಬಗ್ಗೆ ಒಂದಷ್ಟು ವದಂತಿಗಳು ಹಬ್ಬಿದ್ದು, ಅದಕ್ಕೆ ಸ್ವತಃ ಚಿತ್ರತಂಡ ಸ್ಪಷ್ಟನೆ ನೀಡಿದೆ.

ಸುಂದರವಾದ ಲವ್ ಸ್ಟೋರಿ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರತಿ ದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರದ ಒಟಿಟಿ ಮತ್ತು ಕಿರುತೆರೆ ಪ್ರಸಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ಸುಳ್ಳು ಮಾಹಿತಿಯನ್ನು ಚಿತ್ರತಂಡ ತಳ್ಳಿಹಾಕಿದೆ.
‘ಪ್ರೇಮದ ಊರಲಿ’ ಸಿನಿಮಾ ಯಾವಾಗ ಒಟಿಟಿ ಮತ್ತು ಕಿರುತೆರೆಯಲ್ಲಿ ಪ್ರಸಾರ ಆಗಲಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಬಗ್ಗೆ ವದಂತಿ ಹಬ್ಬಿಸಿದ್ದರು. ಸ್ಥಳೀಯ ಒಟಿಟಿ ಸಂಸ್ಥೆಯೊಂದು ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿಸಿದೆ ಎಂದು ವದಂತಿ ಹರಡಿತ್ತು. ಅದಕ್ಕೆ ಚಿತ್ರತಂಡದವರು ನೀಡಿದ ಸ್ಪಷ್ಟನೆ ಈ ಕೆಳಗಿನಂತಿದೆ.
View this post on Instagram
‘ಪ್ರೇಮದ ಊರಲಿ ಚಿತ್ರದ ಟಿವಿ ಹಾಗೂ ಒಟಿಟಿ ಪ್ರಸಾರ ಹಕ್ಕುಗಳ ಕುರಿತು ಅಧಿಕೃತ ಸ್ಪಷ್ಟನೆ. ಪ್ರೇಕ್ಷಕರ ಅಪಾರ ಪ್ರೀತಿ, ಅಭಿಮಾನ ಹಾಗೂ ಬೆಂಬಲದೊಂದಿಗೆ ಪ್ರೇಮದ ಊರಲಿ ಚಿತ್ರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಡಿಜಿಟಲ್ (ಒಟಿಟಿ) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರ ಹಕ್ಕುಗಳ ಕುರಿತು ಚಿತ್ರತಂಡದಿಂದ ಒಂದು ಮಹತ್ವದ ಸ್ಪಷ್ಟನೆ ನೀಡಲು ಬಯಸುತ್ತೇವೆ’ ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.
‘ನಮ್ಮ ಮೊದಲ ಆದ್ಯತೆ ಚಿತ್ರಮಂದಿರಗಳೇ. ಪ್ರೇಕ್ಷಕರು ಪ್ರೇಮದ ಊರಲಿ ಚಿತ್ರವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿ, ಅದರ ಪ್ರೀತಿ, ಭಾವನೆ ಹಾಗೂ ಅನುಭವವನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು ಎಂಬುದೇ ನಮ್ಮ ಆಶಯ. ಪ್ರೇಮದ ಊರಲಿ ಚಿತ್ರದ ಒಟಿಟಿ ಅಥವಾ ಟಿವಿ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಂಸ್ಥೆ ಅಥವಾ ವೇದಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಹಾಗೂ ಯಾವುದೇ ರೀತಿಯ ಅಧಿಕೃತ ಬದ್ಧತೆಯನ್ನೂ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಲಾಗಿದೆ.
ಇದನ್ನೂ ಓದಿ: 50 ಕೋಟಿ ಕ್ಲಬ್ ಸೇರಿದ ಪ್ರೇಮದ ಊರಲಿ ಸಿನಿಮಾ; ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು
‘ಸದ್ಯಕ್ಕೆ ಚಿತ್ರದ ಒಟಿಟಿ ಅಥವಾ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಯಾವುದೇ ಅಧಿಕೃತ ಮಾಹಿತಿ ಇದ್ದಲ್ಲಿ ಅದನ್ನು ಚಿತ್ರತಂಡವೇ ನೇರವಾಗಿ ಪ್ರಕಟಿಸಲಿದೆ. ಪ್ರೇಮದ ಊರಲಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ, ಪ್ರೀತಿಸಿ, ಬೆಂಬಲಿಸುತ್ತಿರುವ ಪ್ರತಿಯೊಬ್ಬ ಪ್ರೇಕ್ಷಕರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮ್ಮ ಚಿತ್ರದ ನಿಜವಾದ ಗೆಲುವು’ ಎಂದು ಚಿತ್ರತಂಡದವರು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




