ಪಂಚಭೂತಗಳಲ್ಲಿ ಹಿರಿಯ ನಟ ಶಿವರಾಂ ಲೀನ; ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್ವುಡ್ಗೆ ಆಘಾತ ತಂದಿದೆ.
ಸ್ಯಾಂಡಲ್ವುಡ್ನ ಹಿರಿಯ ನಟ ಹಾಗೂ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು (ಡಿಸೆಂಬರ್ 5) ಮಧ್ಯಾಹ್ನ ನೆರವೇರಿದೆ. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಯಾಂಡಲ್ವುಡ್ಗೆ ಮಾರ್ಗದರ್ಶಕರಾಗಿದ್ದ ಶಿವರಾಂ ಅವರು, ಪಂಚಭೂತಗಳಲ್ಲಿ ಲೀನರಾದರು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ.
ಅಂತ್ಯ ಸಂಸ್ಕಾರಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಅಷ್ಟಾಭಿಷೇಕದ ಪೂಜೆ ಮಾಡಲಾಯಿತು. ತುಪ್ಪ, ಹೂವು, ಗಂಧ, ವಿಭೂತಿ, ಖರ್ಜೂರ, ಕೆಂಪು, ಕಲ್ಲು ಸಕ್ಕರೆ, ಹಾಲು, ಮೊಸರು , ಅವಲಕ್ಕಿಯಿಂದ ಪೂಜೆ ನಡೆಸಲಾಯಿತು. ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್ವುಡ್ಗೆ ಆಘಾತ ತಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಶನಿವಾರ (ಡಿಸೆಂಬರ್ 4) ಮನೆಯಲ್ಲೇ ಶಿವರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಬಂದು ಅವರ ಅಂತಿಮ ದರ್ಶನ ಪಡೆದಿದ್ದರು. ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಅನಿಲ್ ಕುಂಬ್ಳೆ ಕೂಡ ಶಿವರಾಂ ಅವರ ಅಂತಿಮ ದರ್ಶನವನ್ನು ಪಡೆದು ತೆರಳಿದ್ದರು. ಇಂದು ಮುಂಜಾನೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಮನೆಯ ಟೆರೇಸ್ನಲ್ಲಿ ಪೂಜೆ ಮಾಡಲು ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪ್ರತಿ ಬಾರಿ ಪೂಜೆ ಮಾಡುವಾಗಲೂ ಅವರು ಏಕಾಂತ ಬಯಸುತ್ತಿದ್ದರು. ಹಾಗಾಗಿ ಪೂಜಾ ಕೊಠಡಿಯ ಬಾಗಿಲು ಹಾಕಿಕೊಂಡು ಅಯ್ಯಪ್ಪನ ಸ್ಮರಣೆಯಲ್ಲಿ ಮಗ್ನರಾಗುತ್ತಿದ್ದರು. ಕೆಲವೇ ದಿನಗಳ ಹಿಂದೆ ಕುಸಿದು ಬಿದ್ದಾಗಲೂ ಅವರು ಬಾಗಿಲು ಲಾಕ್ ಮಾಡಿಕೊಂಡಿದ್ದರು!
ಪೂಜೆ ಮಾಡುವಾಗ ಬಾಗಿಲು ಹಾಕಿಕೊಂಡಿದ್ದರಿಂದ ಅವರು ಕುಸಿದು ಬಿದ್ದಿದ್ದು ಯಾರಿಗೂ ತಕ್ಷಣಕ್ಕೆ ತಿಳಿಯಲಿಲ್ಲ. ತುಂಬ ಸಮಯದವರೆಗೆ ಅವರು ವಾಪಸ್ ಬಾರದ ಕಾರಣ ಟೆರೆಸ್ಗೆ ಹೋಗಿ ನೋಡಿದಾಗ ಪೂಜಾ ಕೊಠಡಿಯಲ್ಲಿ ಅವರು ಕುಸಿದು ಬಿದ್ದಿದ್ದು ತಿಳಿಯಿತು. ಒಂದು ಗಂಟೆಗೂ ಹೆಚ್ಚು ಸಮಯ ರಕ್ತಸ್ರಾವ ಆಗಿರುವ ಸಾಧ್ಯತೆ ಇದೆ. ಆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾದರು. ಪೂಜೆ ಮಾಡುವ ವೇಳೆಯಲ್ಲೇ ಹೀಗೆ ಆಗಿದ್ದು ಎಲ್ಲರ ಮನಸ್ಸಿಗೂ ನೋವುಂಟು ಮಾಡಿದೆ.
ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?
ಪುನೀತ್ ಯುವರತ್ನ, ಶಿವರಾಂ ಭಕ್ತಿರತ್ನ; ತಿಂಗಳಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ: ನಿರ್ದೇಶಕ ಭಗವಾನ್ ಕಂಬನಿ