‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?
Cult vs Landlord Kannada movie: ಈ ಶುಕ್ರವಾರ ಎರಡು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ ಅದುವೇ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಮತ್ತು ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ. ಆದರೆ ಈ ಬಗ್ಗೆ ನಟ ದುನಿಯಾ ವಿಜಯ್ ಅವರಿಗೆ ಕರೆ ಮಾಡಿ ‘ಕಲ್ಟ್’ ಸಿನಿಮಾದ ನಾಯಕ ಝೈದ್ ಖಾನ್ ಅವರು ಪ್ರಶ್ನೆ ಮಾಡಿದರಂತೆ. ಇದಕ್ಕೆ ದುನಿಯಾ ವಿಜಯ್ ಉತ್ತರ ಏನಿತ್ತು?

ಸ್ಯಾಂಡಲ್ವುಡ್ನಲ್ಲಿ (Sandalwood) ಮತ್ತೆ ಎರಡು ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಡಿಸೆಂಬರ್ ತಿಂಗಳಲ್ಲಿ ದರ್ಶನ್ ನಟನೆಯ ‘ಡೆವಿಲ್’ ಬಿಡುಗಡೆ ಆಗಿತ್ತು, ಅದಾದ ಬಳಿಕ ಡಿಸೆಂಬರ್ 25 ರಂದು ಒಂದೇ ದಿನ ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಬಿಡುಗಡೆ ಆಗಿತ್ತು. ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ ಸ್ಪರ್ಧೆಗೆ ಬಿದ್ದಿದ್ದವು. ಈಗ ಇದೇ ಶುಕ್ರವಾರ ಮತ್ತೊಮ್ಮೆ ಎರಡು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ ಅದುವೇ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಮತ್ತು ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ.
ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಮಲೈಕಾ ವಸುಪಾಲ್ ಮತ್ತು ರಚಿತಾ ರಾಮ್ ನಾಯಕಿ. ಇನ್ನು ‘ಲ್ಯಾಂಡ್ಲಾರ್ಡ್’ ಸಿನಿಮಾನಲ್ಲಿ ದುನಿಯಾ ವಿಜಯ್, ರಚಿತಾ ರಾಮ್ ನಟಿಸಿದ್ದಾರೆ. ಇದೀಗ ಝೈದ್ ಖಾನ್ ಅವರು ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಬಗ್ಗೆ ಮಾತನಾಡಿದ್ದು, ‘ಈ ವಿಷಯವಾಗಿ ನಾನು ಖುದ್ದಾಗಿ ದುನಿಯಾ ವಿಜಯ್ ಜೊತೆಗೆ ಮಾತನಾಡಿದ್ದು, ನನ್ನ ಸಿನಿಮಾವನ್ನು ಏಕೆ ಕೊಲೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದೆ ಎಂದು ಹೇಳಿದ್ದಾರೆ.
‘ನಾವು ಅಕ್ಟೋಬರ್ 2ನೇ ತಾರೀಖಿನಂದೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕ ಜನವರಿ 23 ಎಂದು ಘೋಷಣೆ ಮಾಡಿದೆವು. ಅಂದು ರಚಿತಾ ರಾಮ್ ಅವರ ಹುಟ್ಟುಹಬ್ಬ ಇತ್ತು, ಹಾಗಾಗಿ ವಿಶೇಷ ದಿನದಂದೇ ನಮ್ಮ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆವು. ಆದರೆ ಅವರು ತುಸು ತಡವಾಗಿ ಘೋಷಣೆ ಮಾಡಿದರು. ಎಷ್ಟೇ ಆಗಲಿ ಅವರು ಸೂಪರ್ ಸ್ಟಾರ್ ನಾನು ಅವರಿಗೆ ಕರೆ ಮಾಡಿ ನೋಡಿ ಸರ್ ಮುಂದೆ ಹಾಕಿಕೊಳ್ಳಲು ಆಗುತ್ತಾ? ನನ್ನ ಸಿನಿಮಾವನ್ನೇ ಕೊಲೆ ಮಾಡ್ತಿದ್ದೀರಲ್ಲ, ಎಷ್ಟೇ ಆಗಲಿ, ನಾನು ನಿಮ್ಮ ಹುಡುಗನೇ’ ಎಂದು ಕೇಳಿಕೊಂಡೆ’ ಎಂದಿದ್ದಾರೆ ಝೈದ್ ಖಾನ್.
ಇದನ್ನೂ ಓದಿ:ದುನಿಯಾ ವಿಜಯ್ ನಟನೆಯನ್ನು ಮೆಚ್ಚಿ ಕೊಂಡಾಡಿದ ತೆಲುಗಿನ ಸ್ಟಾರ್ ನಿರ್ದೇಶಕ
‘ಅದಕ್ಕೆ ಉತ್ತರಿಸಿದ ದುನಿಯಾ ವಿಜಯ್, ಜನವರಿ 20ರಂದು ನನ್ನ ಹುಟ್ಟುಹಬ್ಬ ಇದೆ ಆ ಸಮಯಕ್ಕೆ ಸಿನಿಮಾ ರಿಲೀಸ್ ಮಾಡುವುದು ನಾನು ಪಾಲಿಸಿಕೊಂಡು ಬಂದಿದ್ದೇನೆ. ಎರಡು ಸಿನಿಮಾಗಳು ಒಟ್ಟಿಗೆ ಬರ್ತಿವೆ ಅಂತ ನೀನೇನು ತಲೆ ಕೆಡಿಸಿಕೊಳ್ಳೋಕೆ ಹೋಗಬೇಡ. ಅದೇನು ದೊಡ್ಡ ಸಮಸ್ಯೆ ಆಗಲ್ಲ. ನಮ್ಮಲ್ಲಿ ಸಾಕಷ್ಟು ಚಿತ್ರಮಂದಿರಗಳು ಇವೆ, ಒಳ್ಳೆಯ ಆಡಿಯೆನ್ಸ್ ಸಹ ಇದ್ದಾರೆ. ನನಗಿರುವ ಪ್ರೇಕ್ಷರೇ ಬೇರೆ, ನಿನಗಿರುವ ಪ್ರೇಕ್ಷಕರೇ ಬೇರೆ ಹಾಗಾಗಿ ಒಟ್ಟಿಗೆ ಬಂದರೂ ಸಮಸ್ಯೆ ಆಗಲ್ಲ ಎಂದರು’ ಎಂದು ಝೈದ್ ಖಾನ್ ಹೇಳಿದ್ದಾರೆ.
‘ಆಗ ನಾನು, ಸರಿ ಸರ್, ಹಾಗಿದ್ದರೆ ನಾನು ‘ಕಲ್ಟ್’ ಪ್ರಚಾರಕ್ಕೆ ಹೋದಾಗೆಲ್ಲ ‘ಲ್ಯಾಂಡ್ಲಾರ್ಡ್’ ಸಿನಿಮಾ ಪ್ರಚಾರವನ್ನೂ ಮಾಡುತ್ತೀನಿ, ನೀವು ‘ಲ್ಯಾಂಡ್ಲಾರ್ಡ್’ ಸಿನಿಮಾ ಪ್ರಚಾರಕ್ಕೆ ಹೋದಾಗೆಲ್ಲ ‘ಕಲ್ಟ್’ ಸಿನಿಮಾದ ಬಗ್ಗೆಯೂ ಮಾತನಾಡಿ, ಎರಡೂ ಕನ್ನಡ ಸಿನಿಮಾನೇ, ಜೊತೆಯಾಗಿ ಕೈಹಿಡಿದುಕೊಂಡು ಕೆಲಸ ಮಾಡೋಣ, ಜೋಡೆತ್ತಿನ ರೀತಿ ಕೆಲಸ ಮಾಡೋಣ ಎಂದೆ, ಅದಕ್ಕೆ ದುನಿಯಾ ವಿಜಯ್ ಅವರು ಸಹ ಒಪ್ಪಿಕೊಂಡರು. ಹಾಗಾಗಿ ಈಗ ಇಬ್ಬರ ಸಿನಿಮಾಗಳು ಸಹ ಒಂದೇ ದಿನ ಬಿಡುಗಡೆ ಆಗುತ್ತಿವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




