ಸಾವಿರ ಕೋಟಿ ರೂಪಾಯಿ ಗಳಿಸುತ್ತಾ ‘ಜೈಲರ್ 2’? ಕಾಲಿವುಡ್ ಕನಸು ನನಸಾಗೋದು ಅನುಮಾನ?
ತಮಿಳು ಚಿತ್ರರಂಗಕ್ಕೆ ಸಾವಿರ ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಗಳಿಕೆ ಮಾಡುವುದು ಇಂದಿಗೂ ಸವಾಲಾಗಿ ಉಳಿದಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದ್ದರೂ, 900 ರಿಂದ 950 ಕೋಟಿ ಗಳಿಸಿ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆಯಿದೆ. ಕಾಲಿವುಡ್‌ನ ಸಾವಿರ ಕೋಟಿಯ ಕನಸು ಇನ್ನೂ ಈಡೇರಿಲ್ಲ.

ಮುಖ್ಯಾಂಶಗಳು
- ಕಾಲಿವುಡ್‌ಗೆ ಕೈಕೊಡುತ್ತಿದೆಯೇ 1000 ಕೋಟಿ ಮೈಲಿಗಲ್ಲು?:
- ಕಡಿಮೆ ಆಗುತ್ತಿದೆ 'ಜೈಲರ್ 2' ಮ್ಯಾಜಿಕ್
- 950 ಕೋಟಿಗೆ ಮುಕ್ತಾಯಗೊಳ್ಳಲಿದೆಯೇ ರಜನಿ ಅಬ್ಬರ?
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾ ರಿಲೀಸ್ ಆದರೂ ಸಾವಿರ ಕೋಟಿ ರೂಪಾಯಿ ಗಳಿಕೆಯು ಇನ್ನೂ ಕನಸಾಗಿಯೇ ಉಳಿದಿದೆ. ಕಾಲಿವುಡ್ ಚಿತ್ರರಂಗ ಈ ಸಾಧನೆಗಾಗಿ ಹಲವು ವರ್ಷಗಳಿಂದ ಕಾಯುತ್ತಿದೆ. ತಮಿಳಿನ ದಿಗ್ಗಜ ನಿರ್ದೇಶಕರು ಹಾಗೂ ಸಾಲು ಸಾಲು ಸೂಪರ್‌ಸ್ಟಾರ್‌ಗಳು ಪ್ರಯತ್ನಿಸಿದರೂ ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿಲ್ಲ. ಪ್ರಸ್ತುತ ‘ಜೈಲರ್ 2’ ಸಿನಿಮಾ ಕೂಡ ಈ ಗಡಿಯನ್ನು ದಾಟುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ.
ತಮಿಳು ಚಿತ್ರರಂಗದಲ್ಲಿ ಸಾವಿರ ಕೋಟಿ ಬಾಕ್ಸ್ ಆಫೀಸ್ ಗಳಿಕೆ ಎಂಬುದು ಬಹಳ ದೊಡ್ಡ ಗುರಿಯಾಗಿದೆ. ಶಂಕರ್, ಅಟ್ಲಿ, ಲೋಕೇಶ್ ಕನಗರಾಜ್, ಮುರುಗದಾಸ್, ನೆಲ್ಸನ್ ಮತ್ತು ಮಣಿರತ್ನಂ ಅವರಂತಹ ಪ್ರಸಿದ್ಧ ನಿರ್ದೇಶಕರಿಂದಲೂ ಈ ಸಾಧನೆ ಸಾಧ್ಯವಾಗಿಲ್ಲ. ರಜನಿಕಾಂತ್, ವಿಜಯ್, ಅಜಿತ್, ಸೂರ್ಯ, ಧನುಷ್, ಕಮಲ್ ಹಾಸನ್, ವಿಕ್ರಮ್ ಮತ್ತು ಶಿವಕಾರ್ತಿಕೇಯನ್ ಅವರಂತಹ ದೊಡ್ಡ ನಟರ ಸಿನಿಮಾಗಳು ಸಹ ಈ ದಾಖಲೆಯನ್ನು ಬರೆಯಲು ವಿಫಲವಾಗಿವೆ.
ವಿಜಯ್ ಅಭಿನಯದ ‘ಲಿಯೋ’ ಸಿನಿಮಾ ಮೇಲೆ ಆರಂಭದಲ್ಲಿ ಭಾರಿ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಸಾವಿರ ಕೋಟಿ ಗಳಿಸುವಲ್ಲಿ ಸಂಪೂರ್ಣವಾಗಿ ಸೋತಿತು. ಆ ನಂತರ ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಕೂಡ ಈ ಸಾಧನೆ ಮಾಡುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಆ ಚಿತ್ರ ಕೂಡ ಈ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ. ದಳಪತಿ ವಿಜಯ್ ಈಗ ಸಿನಿಮಾರಂಗ ತೊರೆದು ಸಂಪೂರ್ಣವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗೆ ತೆರೆಕಂಡ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ ಮೇಲೆ ಚಿತ್ರರಂಗಕ್ಕೆ ಬೆಟ್ಟದಷ್ಟು ಆಸೆ ಇತ್ತು. ದಸರಾ ಹಬ್ಬದ ರಜೆಗಳು ಹಾಗೂ ಅನಿರುದ್ಧ್ ಸಂಗೀತದ ಬಲ ಚಿತ್ರಕ್ಕಿತ್ತು. ಆದರೆ ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ ಈ ಚಿತ್ರವೂ ಸಾವಿರ ಕೋಟಿ ತಲುಪುವುದು ಕಷ್ಟವಾಗಿದೆ. ಜೈಲರ್ 2 ಚಿತ್ರವು ತನ್ನ ಪೂರ್ಣ ಓಟದಲ್ಲಿ ಒಟ್ಟು 900 ರಿಂದ 950 ಕೋಟಿ ರೂಪಾಯಿ ಗಳಿಸಿ ತನ್ನ ಪ್ರದರ್ಶನ ಮುಕ್ತಾಯಗೊಳಿಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಜೈಲರ್ 2: 40 ವರ್ಷಗಳ ನಂತರ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ರಜನಿಕಾಂತ್
ಪ್ರಸ್ತುತ ಜೈಲರ್ 2 ಚಿತ್ರವು ವಿಶ್ವಾದ್ಯಂತ ಒಟ್ಟು 710.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 398.70 ಕೋಟಿ ನೆಟ್ ಹಾಗೂ 466.85 ಕೋಟಿ ಗ್ರಾಸ್ ಗಳಿಕೆ ಕಂಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 243.50 ಕೋಟಿಗೂ ಹೆಚ್ಚು ಗಳಿಸಿದೆ. 11ನೇ ದಿನದಂದು ಭಾನುವಾರವಾಗಿದ್ದರೂ 11,954 ಶೋಗಳಿಂದ ₹25.70 ಕೋಟಿ ಗಳಿಸಿದ್ದು, ಚಿತ್ರಮಂದಿರಗಳಲ್ಲಿ ಶೇಕಡಾ 38 ರಷ್ಟು ಆಕ್ಯುಪೆನ್ಸಿ ಮಾತ್ರ ಕಂಡುಬಂದಿದೆ. ನವೆಂಬರ್ 5ರಂದು ‘ರಾಮಾಯಣ’ ಬರಲಿದ್ದು, ಆಗ ಕಲೆಕ್ಷನ್ ಕುಗ್ಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಮಲ್ಟಿಸ್ಟಾರರ್ ಚಿತ್ರವಾದರೂ ಈ ಐತಿಹಾಸಿಕ ಸಾಧನೆ ಮಾಡುತ್ತದೆಯೇ ಎಂದು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




