ಆಸ್ಕರ್ ಗೆದ್ದ ಕೀರವಾಣಿಗೆ ತೆಲುಗು ರಾಜ್ಯ ಸಂಗೀತಗಾರರಿಂದಲೇ ವಿರೋಧ

ಆಸ್ಕರ್ ಗೆದ್ದು ಭಾರತಕ್ಕೆ ಕೀರ್ತಿ ತಂದ ಎಂಎಂ ಕೀರವಾಣಿ ಈಗ ಅವರದ್ದೇ ಆದ ತೆಲುಗು ಸಂಗೀತಗಾರರು ಕೆಲವರ ವಿರೋಧಕ್ಕೆ ಕಾರಣವಾಗಿದ್ದಾರೆ. ಎಂಎಂ ಕೀರವಾಣಿ ವಿರುದ್ಧ ತೆಲಂಗಾಣ ಸಂಗೀತಗಾರರು ಸಿಎಂಗೆ ಪತ್ರ ಬರೆದಿದ್ದಾರೆ.

ಆಸ್ಕರ್ ಗೆದ್ದ ಕೀರವಾಣಿಗೆ ತೆಲುಗು ರಾಜ್ಯ ಸಂಗೀತಗಾರರಿಂದಲೇ ವಿರೋಧ
Follow us
ಮಂಜುನಾಥ ಸಿ.
|

Updated on:May 25, 2024 | 10:53 PM

ಆಸ್ಕರ್ ಗೆಲ್ಲುವ ಮೂಲಕ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಭಾರತದ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲಿ ಹಾರಿಸಿದ್ದಾರೆ. ಭಾರತೀಯ ಸಿನಿಮಾಕ್ಕೆ ಮೊದಲ ಆಸ್ಕರ್ ಬರಲು ಕಾರಣವಾಗಿದ್ದು ಎಂಎಂ ಕೀರವಾಣಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಭಾರತದಾದ್ಯಂತ ಕೀರವಾಣಿಯ ಸಾಧನೆಯನ್ನು ಕೊಂಡಾಡಿದ್ದರು. ಆದರೆ ಈಗ ತೆಲಂಗಾಣದ ಸಂಗೀತಗಾರರು ಕೀರವಾಣಿಯನ್ನು ವಿರೋಧಿಸಿ, ತೆಲಂಗಾಣ ಸಿಎಂಗೆ ಪತ್ರ ಬರೆದಿದ್ದಾರೆ. ಅವರಿಂದ ಸಂಗೀತ ಮಾಡಿಸಬಾರದು ಎಂದು ಆಗ್ರಹಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ತೆಲಂಗಾಣದಲ್ಲಿ ಸರ್ಕಾರ ಬದಲಾಗಿ ಕಾಂಗ್ರೆಸ್​ನ ರೇವಂತ್ ರೆಡ್ಡಿ ಸಿಎಂ ಆಗಿದ್ದಾರೆ. ತೆಲಂಗಾಣ ರಾಜ್ಯ ರಚನೆಯಾದ ದಿನದ ಆಚರಣೆ ಹತ್ತಿರದಲ್ಲಿದ್ದು, ರಾಜ್ಯಕ್ಕೆ ರಾಜ್ಯಗೀತೆಯೊಂದು ಇರಬೇಕೆಂದೆನಿಸಿ, ರಾಜ್ಯ ಗೀತೆಯನ್ನು ರಚಿಸುವ ಜವಾಬ್ದಾರಿಯನ್ನು ಅಂದೆ ಶ್ರೀ ಅವರಿಗೆ ವಹಿಸಲಾಗಿತ್ತು. ಇನ್ನು ಹಾಡಿಗೆ ಸಂಗೀತ ಸಂಯೋಜಿಸುವ ಜವಾಬ್ದಾರಿಯನ್ನು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರಿಗೆ ಒಪ್ಪಿಸಲಾಗಿದೆ. ಕೆಲವು ದಿನದ ಹಿಂದಷ್ಟೆ ಎಂಎಂ ಕೀರವಾಣಿ ಹಾಗೂ ಅಂದೆ ಶ್ರೀ ಅವರು ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಹಾಡಿನ ಬಗ್ಗೆ ಚರ್ಚೆ ಸಹ ನಡೆಸಿದ್ದರು.

ತೆಲಂಗಾಣ ರಾಜ್ಯ ಗೀತೆಯ ಸಂಯೋಜನೆಯ ಜವಾಬ್ದಾರಿಯನ್ನು ಕೀರವಾಣಿಯವರಿಗೆ ನೀಡಿದ್ದಕ್ಕೆ ಇದಕ್ಕೆ ತೆಲಂಗಾಣದ ಕೆಲ ಸಂಗೀತಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸಿನಿ ಮ್ಯೂಸಿಕ್ ಅಸೋಸಿಯೇಷನ್​ನವರು ಕೀರವಾಣಿ ಆಯ್ಕೆಯನ್ನು ವಿರೋಧಿಸಿ ಸಿಎಂ ರೇವಂತ್ ರೆಡ್ಡಿಗೆ ಪತ್ರ ಬರೆದಿದ್ದಾರೆ. ತೆಲಂಗಾಣದಲ್ಲಿಯೇ ಹಲವಾರು ಸಂಗೀತಗಾರರು ಇರುವಾಗ, ನೆರೆಯ ಆಂಧ್ರ ಪ್ರದೇಶದ ಸಂಗೀತಗಾರನಿಗೆ ಹಾಡಿಗೆ ಸಂಗೀತ ನೀಡುವ ಜವಾಬ್ದಾರಿ ವಹಿಸಿರುವುದು ಸರಿಯಲ್ಲವೆಂದು, ಕೂಡಲೇ ಈ ನಿರ್ಧಾರವನ್ನು ಬದಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತೆಲಂಗಾಣ ರಾಜ್ಯ ಗೀತೆ ಮಾಡುವ ಜವಾಬ್ದಾರಿಯನ್ನು ಕೀರವಾಣಿಗೆ ನೀಡಿರುವುದು ನಾಚಿಕೆಗೇಡು ಎಂದು ಸಹ ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ತಮಿಳು ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ: ರೆಹಮಾನ್ ಸಂಗೀತ ನೀಡಲಿಲ್ಲವೇಕೆ?

ಈ ಹಿಂದೆ ಇದ್ದ ಸರ್ಕಾರವು ತೆಲಂಗಾಣ ರಾಜ್ಯ ಗೀತೆಯ ಅಗತ್ಯತೆಯನ್ನು ನಿರ್ಲಕ್ಷಿಸಿತ್ತು. ಈ ಸರ್ಕಾರ ತೆಲಂಗಾಣ ರಾಜ್ಯ ಗೀತೆಯ ಬಗ್ಗೆ ಆಸಕ್ತಿ ತೋರಿರುವುದು ಸ್ವಾಗತಾರ್ಹ ಆದರೆ ಆ ಜವಾಬ್ದಾರಿಯನ್ನು ನಮ್ಮ ರಾಜ್ಯದವರಲ್ಲ ಕೀರವಾಣಿಗೆ ನೀಡಿರುವುದು ಖೇದಕರ. ತೆಲಂಗಾಣ ರಾಜ್ಯ ಸ್ಥಾಪನೆ ಆಗಿದ್ದೆ ಈ ರಾಜ್ಯದ ಜನರಿಗೆ ಅವಕಾಶಗಳು ಸಿಗಲೆಂಬ ಕಾರಣಕ್ಕೆ ಆದರೆ ಈಗ ನೆರೆ ರಾಜ್ಯದವರಿಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಆದರೆ ತೆಲಂಗಾಣ ಸಿನಿ ಮ್ಯೂಸಿಕ್ ಅಸೋಸಿಯೇಷನ್​ ನವರು ಬರೆದಿರುವ ಈ ಪತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ತೆಲುಗಿನ ಕಲಾವಿದರನ್ನು ರಾಜ್ಯಗಳ ಗಡಿಯಿಲ್ಲದೆ ಜನ ಪ್ರೀತಿಸಿದ್ದಾರೆ ಗೌರವಿಸಿದ್ದಾರೆ. ಕೀರವಾಣಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಲುಗು ಜನರಿಗೆ ಗೌರವ ತಂದುಕೊಟ್ಟವರು, ಅಂಥಹವರನ್ನು ಗಡಿಯ ಕಾರಣಕ್ಕೆ ದೂರ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Sat, 25 May 24