ಸೃಜನ್ ಲೋಕೇಶ್ (Srujan Lokesh) ಅವರು ಇಂದು (ಜೂನ್ 28) 42ನೇ ವರ್ಷದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಸೃಜನ್ ಲೋಕೇಶ್ ಸಿನಿಮಾ ಹಿನ್ನೆಲೆಯಿಂದ ಬಂದವರು. ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನ’ದಲ್ಲಿ ನಟಿಸಿದ್ದು ಸೃಜನ್ ತಾತ ಸುಬ್ಬಯ್ಯ ನಾಯ್ಡು. ತಂದೆ ಹಿರಿಯ ನಟ ಲೋಕೇಶ್ (Lokesh) ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಕೂಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಫೇಮಸ್. ಸಿನಿಮಾ ಹಿನ್ನೆಲೆ ಇದ್ದ ಹೊರತಾಗಿಯೂ ಸೃಜನ್ ಲೋಕೇಶ್ಗೆ ಸಿನಿಮಾ ಇಂಡಸ್ಟ್ರಿ ಅಷ್ಟಾಗಿ ಕೈ ಹಿಡಿಯಲಿಲ್ಲ. ಅವರಿಗೆ ಯಶಸ್ಸು ಸಿಕ್ಕಿದ್ದು ಕಿರುತೆರೆ ಲೋಕದಲ್ಲಿ.
ಸೃಜನ್ ಲೋಕೇಶ್ ಅವರು ಬಾಲ ಕಲಾವಿದನಾಗಿ ಗುರುತಿಸಿಕೊಂಡರು. 1991ರಲ್ಲಿ ತೆರೆಗೆ ಬಂದ ‘ವೀರಪ್ಪನ್’ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲ ಕಲಾವಿದನಾಗಿ ನಟಿಸಿದರು. 2002ರಲ್ಲಿ ತೆರೆಗೆ ಬಂದ ರಾಜ್ಕಿಶೋರ್ ನಿರ್ದೇಶನದ ‘ನೀಲ ಮೇಘ ಶ್ಯಾಮ’ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಗೊಂಡರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಯಾವುದೂ ಹೇಳಿಕೊಳ್ಳುವಂತಹ ಯಶಸ್ಸು ನೀಡಲಿಲ್ಲ.
ಸಿನಿಮಾ ರಂಗದಲ್ಲಿ ಯಶಸ್ಸಿಗಾಗಿ ಕಾದು ಕೂತಿದ್ದಾಗ ಸೃಜನ್ ಕಿರುತೆರೆಯತ್ತ ಆಕರ್ಷಿತರಾದರು. ಮೊದಲ ಬಾರಿಗೆ 2011ರಲ್ಲಿ ‘ಮಜಾ ವಿತ್ ಸೃಜ’ ಶೋ ನಡೆಸಿಕೊಡುವ ಮೂಲಕ ಅವರು ಜನಪ್ರಿಯರಾದರು. ಈ ಶೋ ಅನ್ನು ಜನರು ಮೆಚ್ಚಿಕೊಂಡರು. ನಂತರ ಅವರಿಗೆ ಕಿರುತೆರೆಯಿಂದ ಹಲವು ಆಫರ್ಗಳು ಬಂದವು. ಮರುವರ್ಷ ಅಂದರೆ 2012ರಲ್ಲಿ ‘ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆ’, ‘ಸುವರ್ಣ ಫಿಲ್ಮ್ ಅವಾರ್ಡ್ಸ್’, ‘ಸೈ 2’ ‘ಮಮ್ಮಿ ನಂಬರ್ 1’ ಶೋಗಳನ್ನು ಇವರು ನಿರೂಪಣೆ ಮಾಡಿದರು.
ಸೃಜನ್ಗೆ ‘ಬಿಗ್ ಬಾಸ್’ ಹೆಸರು ತಂದುಕೊಟ್ಟಿತು. ‘ಬಿಗ್ ಬಾಸ್ ಕನ್ನಡ ಸೀಸನ್ 2’ನಲ್ಲಿ ಸೃಜನ್ ಸ್ಪರ್ಧಿ ಆಗಿದ್ದರು. ಈ ಶೋಅನ್ನು ಅಕುಲ್ ಗೆದ್ದರೆ, ಸೃಜನ್ ಮೊದಲ ರನ್ನರ್ ಅಪ್ ಆದರು. 2015-17ರವರೆಗೆ ‘ಮಜಾ ಟಾಕೀಸ್’ ಪ್ರಸಾರವಾಯಿತು. ಇದನ್ನು ಸೃಜನ್ ನಡೆಸಿಕೊಟ್ಟರು. ನಂತರ ‘ಮಜಾ ಟಾಕೀಸ್ ಸೂಪರ್ ಸೀಸನ್’, ‘ಮಜಾ ಟಾಕೀಸ್’ ಸೃಜನ್ ಸಾರಥ್ಯದಲ್ಲಿ ಮೂಡಿ ಬಂದವು. ಸದ್ಯ, ‘ಗಿಚ್ಚಿ ಗಿಲಿಗಿಲಿ’ ಶೋಗೆ ಅವರು ಜಡ್ಜ್ ಆಗಿದ್ದಾರೆ.
2013ರಲ್ಲಿ ಸೃಜನ್ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ‘ಲೋಕೇಶ್ ಪ್ರೊಡಕ್ಷನ್ಸ್’ ಆರಂಭಿಸಿದರು. ಹಲವು ಯಶಸ್ವಿ ಶೋಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಇವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದ ‘ಮಜಾ ಟಾಕೀಸ್’ ದೊಡ್ಡ ಯಶಸ್ಸು ಪಡೆಯಿತು. ಅವರು ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ನಿಮ್ಮನ್ನು ನಕ್ಕು ನಲಿಸುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರಾಗಿರುವ ಸೃಜನ್ ಮತ್ತು ಶೃತಿಯ ಮನದಾಳದ ಮಾತು!
‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್ ಬಗ್ಗೆ ಸೃಜನ್ ಲೋಕೇಶ್ ಮಾತು