Roopesh Shetty: ರೂಪೇಶ್ ಶೆಟ್ಟಿಗೆ ಬೆದರಿಕೆ, ಅವಾಚ್ಯ ಪದಗಳಿಂದ ನಿಂದನೆ; ಪೊಲೀಸ್ ಠಾಣೆಗೆ ದೂರು ನೀಡಿದ ಕುಟುಂಬದವರು
Bigg Boss Kannada: ರೂಪೇಶ್ ಶೆಟ್ಟಿ ಕುಟುಂಬದ ಸದಸ್ಯರು ದೂರು ನೀಡಿದ್ದಾರೆ. ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಸಾಕಷ್ಟು ಕಾರಣಗಳಿಂದ ಸುದ್ದಿ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ಮೂಲದ ನಟ ರೂಪೇಶ್ ಶೆಟ್ಟಿ (Roopesh Shetty) ಅವರು ಸ್ಪರ್ಧಿಸುತ್ತಿದ್ದಾರೆ. ಅವರ ಜೊತೆ ಆಪ್ತವಾಗಿದ್ದ ನಟಿ ಸಾನ್ಯಾ ಐಯ್ಯರ್ ಅವರು 6ನೇ ವಾರದಲ್ಲಿ ಎಲಿಮಿನೇಟ್ ಆದರು. ಬಿಗ್ ಬಾಸ್ (BBK9) ಒಳಗಿನ ವಿಚಾರಗಳು ದೊಡ್ಮನೆ ಆಚೆಗೂ ವಿವಾದ ಹುಟ್ಟುಹಾಕುತ್ತಿವೆ. ಈ ಶೋನಲ್ಲಿ ರೂಪೇಶ್ ಶೆಟ್ಟಿ ಅವರು ನೀಡಿದ ಕೆಲವು ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ವಿರೋಧಿಸುವ ಭರದಲ್ಲಿ ಕೆಲವರು ಬೆದರಿಕೆ ಹಾಕಿದ್ದಾರೆ ಮತ್ತು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಈ ಸಂಬಂಧವಾಗಿ ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ ಕುಟುಂಬದವರು ದೂರು ನೀಡಿದ್ದಾರೆ.
ರೂಪೇಶ್ ಶೆಟ್ಟಿ ಕುಟುಂಬದ ಸದಸ್ಯರು ದೂರು ನೀಡಿರುವುದನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ. ‘ಬಿಗ್ ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ಶೆಟ್ಟಿ ಅವರು ಆ ಶೋನಲ್ಲಿ ನೀಡಿದ ಕೆಲವು ಹೇಳಿಕೆಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿದ್ದು ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದ್ದು, ಅವರ ಕುಟುಂಬದ ಸದಸ್ಯರು ದೂರು ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು, ಎಫ್ಐಆರ್ ಮಾಡಿ, ತನಿಖೆ ಮುಂದುವರಿಸುತ್ತೇವೆ’ ಎಂದು ಶಶಿಕುಮಾರ್ ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದಗಳು ಸಹಜ. ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡ ಘಟನೆಗಳಿಗೆ ಲೆಕ್ಕವೇ ಇಲ್ಲ. ಆದರೆ ಮನೆ ಹೊರಗಿನ ವಿಚಾರಗಳನ್ನು ಈ ಶೋನಲ್ಲಿ ಚರ್ಚೆ ಮಾಡಿದಾಗ ಹೊರಗಿನ ಜಗತ್ತಿನಲ್ಲಿ ವಿವಾದ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಸ್ಪರ್ಧಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ.
ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ನಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಫಿನಾಲೆ ತಲುಪಿದ ಅವರಿಗೆ ಟಿವಿ ಸೀಸನ್ಗೆ ಎಂಟ್ರಿ ಸಿಕ್ಕಿತು. ತಮ್ಮದೇ ಶೈಲಿಯಲ್ಲಿ ಅವರು ಆಟ ಆಡುತ್ತಿದ್ದಾರೆ. ಆಪ್ತ ಗೆಳತಿ ಸಾನ್ಯಾ ಐಯ್ಯರ್ ಎಲಿಮಿನೇಟ್ ಆದ ಬಳಿಕ ರೂಪೇಶ್ ಶೆಟ್ಟಿ ಅವರು ಸಖತ್ ಎಮೋಷನಲ್ ಆಗಿದ್ದಾರೆ.
ಪ್ರಶಾಂತ್ ಸಂಬರ್ಗಿ ವಿರುದ್ಧವೂ ಅಸಮಾಧಾನ:
ಇತ್ತೀಚೆಗೆ ಪ್ರಶಾಂತ್ ಸಂಬರ್ಗಿ ಕೂಡ ವಿವಾದದ ಕೇಂದ್ರ ಬಿಂದು ಆಗಿದ್ದರು. ಕನ್ನಡಪರ ಹೋರಾಟಗಾರರ ಕುರಿತು ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ಎದುರಾದ ಹಿನ್ನೆಲೆಯಲ್ಲಿ ಅವರು ಕನ್ಫೆಷನ್ ರೂಮ್ಗೆ ಬಂದು ಕ್ಷಮೆ ಕೇಳಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.