ವಿಜಯ್-ತ್ರಿಷಾ ಮಧ್ಯೆ ಬ್ರೇಕಪ್? ನಡೆಯಿತು ಪ್ರಮುಖ ಬೆಳವಣಿಗೆ
ದಳಪತಿ ವಿಜಯ್ ಜನ್ಮದಿನಕ್ಕೆ ನಟಿ ತ್ರಿಷಾ ಶುಭಾಶಯ ಕೋರದಿರುವುದು ಹಾಗೂ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ತಮ್ಮ ಪತ್ನಿ ಸಂಗೀತಾ ಜೊತೆ ಸಂಸಾರ ಸರಿಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದಾಗಿಯೇ ತ್ರಿಷಾ ವಿಜಯ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಇದು ಕಾಲಿವುಡ್‌ನಲ್ಲಿ ಕುತೂಹಲ ಹೆಚ್ಚಿಸಿದೆ.

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜನ್ಮದಿನದಂದು ನಟಿ ತ್ರಿಷಾ ಕೃಷ್ಣನ್ ಯಾವುದೇ ಶುಭಾಶಯದ ಪೋಸ್ಟ್ ಹಾಕದಿರುವುದು ತೀವ್ರ ಕುತೂಹಲ ಮೂಡಿಸಿದೆ. ಟ್ರೋಲ್ ಹಾಗೂ ಅನಗತ್ಯ ಚರ್ಚೆಗಳನ್ನು ತಪ್ಪಿಸಲು ತ್ರಿಷಾ ಈ ರೀತಿ ದೂರ ಉಳಿದಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಇದೀಗ ತ್ರಿಷಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದ್ದು, ಇದು ಸಿನಿಮಾ ರಂಗದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ.
ಕೆಲವು ತಿಂಗಳುಗಳ ಹಿಂದೆ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಸ್ಪಷ್ಟವಾಗಿತ್ತು. ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ವಿಜಯ್ ಹಾಗೂ ತ್ರಿಷಾ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವುದು ಹಲವು ಬಾರಿ ಕಂಡುಬಂದಿತ್ತು. ಇವರಿಬ್ಬರ ಆಪ್ತತೆ ಗಾಸಿಪ್‌ಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ತಂದಿದ್ದವು.
ರಾಜಕೀಯ ಎಂಟ್ರಿ ವದಂತಿ:
ಇವರಿಬ್ಬರ ಸ್ನೇಹದ ವದಂತಿ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ, ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ತ್ರಿಷಾ ಅವರನ್ನು ರಾಜಕೀಯಕ್ಕೆ ಪರಿಚಯಿಸುವ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಬಲವಾಗಿ ಕೇಳಿಬಂದಿದ್ದವು. ವಿಜಯ್ ಬೆಂಬಲದೊಂದಿಗೆ ತ್ರಿಷಾ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.
ಇದನ್ನೂ ಓದಿ: ದಳಪತಿ ವಿಜಯ್ ಜನ್ಮದಿನಕ್ಕೆ ವಿಶ್ ಮಾಡಲೇ ಇಲ್ಲ ತ್ರಿಷಾ ಕೃಷ್ಣನ್
ನೆಟ್ಟಿಗರ ಕಾಮೆಂಟ್‌ಗಳು ಮತ್ತು ಸಂಸಾರ ಸುಧಾರಣೆಯ ಮುನ್ಸೂಚನೆ:
ತ್ರಿಷಾ ಅವರ ಈ ದಿಢೀರ್ ಅನ್‌ಫಾಲೋ ಮತ್ತು ಮೌನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಈಗ ತ್ರಿಷಾಗೆ ತಮ್ಮ ತಪ್ಪಿನ ಅರಿವಾಗಿದೆ, ಅದಕ್ಕೇ ವಿಜಯ್ ಅವರಿಂದ ದೂರ ಉಳಿಯುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದರ ನಡುವೆ, ವಿಜಯ್ ಹಾಗೂ ಸಂಗೀತಾ ಅವರ ವೈವಾಹಿಕ ಜೀವನದ ಸಂಸಾರ ಮತ್ತೆ ಸರಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಕುಟುಂಬದ ಹಿರಿಯರ ಸಂಧಾನದ ಬೆನ್ನಲ್ಲೇ ವಿಜಯ್ ತಮ್ಮ ಸಂಸಾರವನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ, ಇದೇ ಕಾರಣಕ್ಕೆ ತ್ರಿಷಾ ಈಗ ವಿಜಯ್ ಅವರಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




