ಇನ್ವೆಸ್ಟ್ ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರವನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಪೀಯೂಷ್ ಗೋಯಲ್
ಬುಧವಾರ (ನವೆಂಬರ್ 2) ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪೀಯೂಷ್ ಗೋಯಲ್ ‘ಕಾಂತಾರ’ ಚಿತ್ರವನ್ನು ಉಲ್ಲೇಖಿಸಿ ಮಾತನಾಡಿದರು.
ರಿಷಬ್ ಶೆಟ್ಟಿ (Rishab Shetty) ನಟನೆಯ ‘ಕಾಂತಾರ’ ಸಿನಿಮಾದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ನೋಡಿದ ಅನೇಕರು ರಿಷಬ್ ಶೆಟ್ಟಿಯ ಈ ಮಾಸ್ಟರ್ಪೀಸ್ಗೆ ಭೇಷ್ ಎನ್ನುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿ ಅನೇಕರು ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪೀಯೂಷ್ ಗೋಯಲ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಬುಧವಾರ (ನವೆಂಬರ್ 2) ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಅವರು ‘ಕಾಂತಾರ’ ಚಿತ್ರವನ್ನು ಉಲ್ಲೇಖಿಸಿ ಮಾತನಾಡಿದರು.
‘ಕರ್ನಾಟಕ ಹೂಡಿಕೆ ಮಾಡಲು ಒಳ್ಳೆಯ ತಾಣ. ಅದರಲ್ಲೂ ಭವಿಷ್ಯದ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಅವಕಾಶ ಇದೆ. ಅವರ ಹೂಡಿಕೆ ಆಲೋಚನೆಗಳು ಯಾವ ರೀತಿ ಇದೆ ಎಂದರೆ, ಕರ್ನಾಟಕದ ಸಂಸ್ಕೃತಿಯನ್ನು ಹೇಳುವ ‘ಕಾಂತಾರ’ ಸಿನಿಮಾದ ರೀತಿಯೇ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ 20 ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಹೂಡಿಕೆದಾರರು ಈ ನಿಟ್ಟಿನಲ್ಲಿಯೂ ಚಿಂತನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶ ಹಾಗೂ ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ ಪೀಯೂಷ್.
ಒಳ್ಳೆಯ ಕಲೆಕ್ಷನ್ ಮಾಡಿದ ‘ಕಾಂತಾರ’
‘ಕಾಂತಾರ’ ಸಿನಿಮಾ ಕನ್ನಡದಲ್ಲಿ ತೆರೆಗೆ ಬಂದಿದ್ದು ಸೆಪ್ಟೆಂಬರ್ 30ಕ್ಕೆ. ಇದಾದ ಕೆಲವೇ ಕೆಲವು ವಾರಗಳ ಬಳಿಕ ಈ ಚಿತ್ರ ಹಿಂದಿಯಲ್ಲಿ ರಿಲೀಸ್ ಆಯಿತು. ಹಿಂದಿಯಲ್ಲಿ ಆರಂಭದ ದಿನಗಳಲ್ಲಿ ಈ ಚಿತ್ರ ಒಂದೆರಡು ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ದಿನ ಕಳೆದಂತೆ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಇದು ಚಿತ್ರಕ್ಕೆ ಪ್ಲಸ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.
‘ಕಾಂತಾರ’ ಸಿನಿಮಾದ ಮಂಗಳವಾರ (ನವೆಂಬರ್ 1) 2.30 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ಆರಂಭದಲ್ಲಿ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 47.55 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್’ ಹಿಂದಿ ವರ್ಷನ್ 44 ಕೋಟಿ ರೂ. ಬಾಚಿಕೊಂಡಿತ್ತು. ಆ ದಾಖಲೆಯನ್ನು ಈ ಚಿತ್ರ ಮುರಿದಿದೆ.
‘ಕಾಂತಾರ’ ಚಿತ್ರ ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಸಿನಿಮಾ ತಂಡದವರು ಬಹುಬೇಗನೆ ಈ ಚಿತ್ರವನ್ನು ಹಿಂದಿಯಲ್ಲೂ ಬಿಡುಗಡೆ ಮಾಡಿದರು. ಇದು ಚಿತ್ರತಂಡಕ್ಕೆ ಸಹಕಾರಿ ಆಗಿದೆ. ಸಿನಿಮಾ ಹಿಂದಿಯಲ್ಲಿ ಇನ್ನೂ ಕೆಲ ದಿನ ತನ್ನ ಅಬ್ಬರ ಮುಂದುವರಿಸಲಿದೆ.
Published On - 4:34 pm, Wed, 2 November 22