AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕ, ಚಿರಂಜೀವಿ ಆಪ್ತ ಜಿ.ವಿ. ನಾರಾಯಣ ರಾವ್ ನಿಧನ; ಕಂಬನಿ ಮಿಡಿದ ನಟ

ಹಿರಿಯ ತೆಲುಗು ನಟ ಹಾಗೂ ನಿರ್ಮಾಪಕ ಜಿ.ವಿ. ನಾರಾಯಣ ರಾವ್ ಹೈದರಾಬಾದ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರು ಚಿರಂಜೀವಿ ಹಾಗೂ ರಜನಿಕಾಂತ್ ಅವರೊಂದಿಗೆ ಆಪ್ತ ಬಾಂಧವ್ಯ ಹೊಂದಿದ್ದರು. ಅವರ ಅಗಲಿಕೆಗೆ ನಟ ಚಿರಂಜೀವಿ ಸೇರಿದಂತೆ ತೆಲುಗು ಚಿತ್ರರಂಗದ ಪ್ರಮುಖ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ನಿರ್ಮಾಪಕ, ಚಿರಂಜೀವಿ ಆಪ್ತ ಜಿ.ವಿ. ನಾರಾಯಣ ರಾವ್ ನಿಧನ; ಕಂಬನಿ ಮಿಡಿದ ನಟ
ಚಿರಂಜೀವಿ-ನಾರಾಯಣ ರಾವ್
ರಾಜೇಶ್ ದುಗ್ಗುಮನೆ
|

Updated on: Aug 28, 2026 | 2:47 PM

Share

ಮುಖ್ಯಾಂಶಗಳು

  • ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ನಟ ಜಿ.ವಿ. ನಾರಾಯಣ ರಾವ್
  • ರಜನಿಕಾಂತ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಗೆಳೆತನ
  • ಚಿರಂಜೀವಿ ಸಿನಿಮಾಗಳ ನಿರ್ಮಾಪಕ ಇನ್ನಿಲ್ಲ 

ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ಜಿ.ವಿ. ನಾರಾಯಣ ರಾವ್ (73) ಅವರು ಹೈದರಾಬಾದ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 1976ರಲ್ಲಿ ಕೆ. ಬಾಲಚಂದರ್ ಅವರ ‘ಅಂತುಲೇನಿ ಕಥಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ಹೈದರಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಜಿ.ವಿ. ನಾರಾಯಣ ರಾವ್ ಅವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಮಕಾಲೀನರಾಗಿದ್ದರು. ರಜನಿಕಾಂತ್ ಅವರೊಂದಿಗೆ ಚೆನ್ನೈನ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದ ಇವರು ಆಪ್ತ ಸ್ನೇಹಿತರಾಗಿದ್ದರು. ಚಿರಂಜೀವಿ ಅವರೊಂದಿಗೆ ‘ಚಟ್ಟಾನಿಕಿ ಕಲ್ಲು ಲೇವು’, ‘ಗ್ಯಾಂಗ್ ಲೀಡರ್’ ಮತ್ತು ‘ಹಿಟ್ಲರ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ‘ಪಸುಪು ಕುಂಕುಮ’ ಹಾಗೂ ‘ಸುಂದರಕಾಂಡ’ದಂತಹ ಜನಪ್ರಿಯ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದರು. ನಟನೆಯ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಚಿರಂಜೀವಿ ಅಭಿನಯದ ‘ದೇವಾಂತಕುಡು’ ಮತ್ತು ‘ಯಮುಡಿಕಿ ಮೊಗುಡು’ ಚಿತ್ರಗಳನ್ನು ನಿರ್ಮಿಸಿದ್ದರು. ನಂತರ ‘ಯಮುಡಿಕಿ ಮೊಗುಡು’ ಚಿತ್ರವನ್ನು ತಮಿಳಿನಲ್ಲಿ ರಜನಿಕಾಂತ್ ಅಭಿನಯದಲ್ಲಿ ‘ಅತಿಶಯ ಪಿರವಿ’ ಎಂದು ರಿಮೇಕ್ ಮಾಡಿದ್ದರು.

ಆಪ್ತ ಗೆಳೆಯನ ಅಗಲಿಕೆಯಿಂದ ನಟ ಚಿರಂಜೀವಿ ತೀವ್ರ ಕಂಬನಿ ಮಿಡಿದಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು ನಾರಾಯಣ ರಾವ್ ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದ್ದಾರೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾದದ್ದು. ನಮ್ಮಿಬ್ಬರ ಸುದೀರ್ಘ ಪಯಣದಲ್ಲಿ ಅನೇಕ ಸಿಹಿ ನೆನಪುಗಳಿವೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿರಂಜೀವಿಗಾಗಿ ಬಂದಿದ್ದ ಹಾಲಿವುಡ್ ನಿರ್ದೇಶಕ-ನಿರ್ಮಾಪಕ, ಸಿನಿಮಾ ಏನಾಯ್ತು?

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿರುವ ಚಿರಂಜೀವಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಸಾಂತ್ವನ ಹೇಳಿದ್ದಾರೆ. ಜಿ.ವಿ. ನಾರಾಯಣ ರಾವ್ ಅವರ ನಿಧನದಿಂದ ತೆಲುಗು ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಅಗಲಿಕೆಗೆ ಚಲನಚಿತ್ರ ರಂಗದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us