ಗ್ಯಾಸ್, ಆಸಿಡಿಟಿ ಕಡಿಮೆಮಾಡಲು ಧನಿಯಾ-ಶುಂಠಿ ನೀರು ಕೆಲಸ ಮಾಡುತ್ತೋ, ಇಲ್ಲವೋ ತಿಳಿದುಕೊಳ್ಳಿ
ಬೆಳಗ್ಗೆ ಗ್ಯಾಸ್, ಆಸಿಡಿಟಿ ಮತ್ತು ಹೊಟ್ಟೆ ಉಬ್ಬರದಿಂದ ತೊಂದರೆ ಅನುಭವಿಸುತ್ತಿದ್ದೀರಾ? ಧನಿಯಾ ಮತ್ತು ಶುಂಠಿಯಿಂದ ತಯಾರಿಸುವ ಪಾನೀಯ ಕೆಲವರಿಗೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿನ ಆರಾಮ ನೀಡಬಹುದು. ಆದರೆ ಇದು ಗ್ಯಾಸ್ ಅಥವಾ ಆಸಿಡಿಟಿಗೆ ಹೇಗೆ ಸಹಕಾರಿ ಮತ್ತು ಇಂತಹ ಸಮಸ್ಯೆ ತಡೆಗಟ್ಟಲು ಮತ್ತೆ ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಉಬ್ಬರ, ಗ್ಯಾಸ್, ಆಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಕಾಡುವುದು ಹಲವರ ಸಾಮಾನ್ಯ ಸಮಸ್ಯೆ. ಬದಲಾಗುತ್ತಿರುವ ಜೀವನಶೈಲಿ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಹೆಚ್ಚು ಮಸಾಲೆಯುಕ್ತ ಅಥವಾ ಜಂಕ್ ಫುಡ್ ಸೇವನೆ, ಕಡಿಮೆ ನೀರು ಕುಡಿಯುವುದು ಸೇರಿದಂತೆ ಹಲವು ಕಾರಣಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭದಲ್ಲಿ ಕೆಲವರು ಮನೆಯಲ್ಲೇ ಸಿಗುವ ಧನಿಯಾ ಮತ್ತು ಶುಂಠಿಯನ್ನು ಬಳಸಿ ಪಾನೀಯ ತಯಾರಿಸಿಕೊಂಡು ಸೇವಿಸುತ್ತಾರೆ. ಆದರೆ ಇದು ಗ್ಯಾಸ್ ಅಥವಾ ಆಸಿಡಿಟಿಗೆ ಹೇಗೆ ಸಹಕಾರಿ ಮತ್ತು ಇಂತಹ ಸಮಸ್ಯೆ ತಡೆಗಟ್ಟಲು ಮತ್ತೆ ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಧನಿಯಾ-ಶುಂಠಿ ನೀರನ್ನು ಹೇಗೆ ತಯಾರಿಸಬಹುದು?
ಒಂದು ಚಮಚ ಧನಿಯಾವನ್ನು ಸ್ವಲ್ಪ ಹುರಿದುಕೊಂಡು ನೀರಿಗೆ ಸೇರಿಸಬಹುದು. ಅದಕ್ಕೆ ಸಣ್ಣ ತುಂಡು ಶುಂಠಿ ಹಾಕಿ ಕೆಲವು ನಿಮಿಷ ಕುದಿಸಿ, ನಂತರ ಸೋಸಿ ಬೆಚ್ಚಗಿರುವಾಗ ಸೇವಿಸಬಹುದು. ಕೆಲವರು ರುಚಿಗಾಗಿ ಸ್ವಲ್ಪ ಜೇನುತುಪ್ಪ ಸೇರಿಸುತ್ತಾರೆ. ಧನಿಯಾ ಮತ್ತು ಶುಂಠಿ ಎರಡನ್ನೂ ಬಹಳ ಹಿಂದಿನಿಂದಲೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತಿದೆ. ಶುಂಠಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಈ ಪಾನೀಯವನ್ನು ಸೇವಿಸಿದರೆ ಎರಡು ದಿನಗಳಲ್ಲಿ ಗ್ಯಾಸ್, ಆಸಿಡಿಟಿ ಅಥವಾ ಹೊಟ್ಟೆ ನೋವು ನಿವಾರಣೆಯಾಗುತ್ತದೆ ಎಂಬುದಕ್ಕೆ ದೃಢವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ.
ಇದನ್ನೂ ಓದಿ: ಪ್ರತಿದಿನ ಸೋಂಪು ನೀರು ಕುಡಿಯುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ?
ಗ್ಯಾಸ್, ಆಸಿಡಿಟಿ ಕಡಿಮೆಯಾಗಲು ಇನ್ನೇನು ಮಾಡಬೇಕು?
ಜೀರ್ಣಕ್ರಿಯೆ ಸರಿಯಾಗಿರಲು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ, ಅತಿಯಾಗಿ ಕಾಫಿ ಅಥವಾ ಚಹಾ, ಕಾರ್ಬೊನೇಟೆಡ್ ಪಾನೀಯಗಳನ್ನು ಕಡಿಮೆ ಮಾಡುವುದು ಸಹಾಯಕವಾಗಬಹುದು. ಊಟವನ್ನು ನಿಧಾನವಾಗಿ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಊಟ ಮಾಡಿದ ತಕ್ಷಣ ಮಲಗದೆ ಇರುವುದು ಒಳ್ಳೆಯದು.
ಗ್ಯಾಸ್ ಅಥವಾ ಆಸಿಡಿಟಿ ಪದೇಪದೇ ಕಾಣಿಸಿಕೊಂಡರೆ ಅದನ್ನು ಕೇವಲ ಮನೆಮದ್ದಿನಿಂದ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುವ ಬದಲು ಕಾರಣವನ್ನು ಪತ್ತೆಹಚ್ಚುವುದು ಅಗತ್ಯ. ಎದೆ ಉರಿ ನಿರಂತರವಾಗಿರುವುದು, ತೀವ್ರ ಹೊಟ್ಟೆ ನೋವು, ವಾಂತಿ, ನುಂಗಲು ಕಷ್ಟ, ತೂಕ ಇಳಿಕೆ ಅಥವಾ ಮಲದಲ್ಲಿ ರಕ್ತದಂತಹ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




