AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅಸಿಡಿಟಿ ಹೆಚ್ಚಾಗುತ್ತಾ? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ? ಈ ಅಭ್ಯಾಸ ಕೆಲವರಲ್ಲಿ ಅಸಿಡಿಟಿ, ಎದೆಯುರಿ, ವಾಕರಿಕೆ ಮತ್ತು ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಆದರೆ ಚಹಾ ಕುಡಿಯುವುದರಿಂದ ನೇರವಾಗಿ ಕರುಳಿಗೆ ಹಾನಿಯಾಗುತ್ತದೆ ಎಂಬುದಕ್ಕೆ ದೃಢವಾದ ಪುರಾವೆಗಳಿಲ್ಲ. ಚಹಾ ಸೇವಿಸುವಾಗ ಯಾವ ಮುನ್ನೆಚ್ಚರಿಕೆ ವಹಿಸಬೇಕು, ಮತ್ತು ಬೆಳಗಿನ ದಿನಚರಿಯನ್ನು ಹೇಗೆ ಆರೋಗ್ಯಕರವಾಗಿ ಆರಂಭಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅಸಿಡಿಟಿ ಹೆಚ್ಚಾಗುತ್ತಾ? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ
Morning Tea HabitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Oct 16, 2026 | 12:29 PM

Share

ಚಹಾ ಇಲ್ಲದೆ ದಿನ ಆರಂಭವಾಗುವುದಿಲ್ಲ. ಇದು ದಿನನಿತ್ಯ ಜೀವನದ ಅವಿಭಾಜ್ಯ ಭಾಗ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇನ್ನು ಕೆಲವರು ದಿನವಿಡೀ ಹಲವು ಬಾರಿ ಚಹಾ ಕುಡಿಯುತ್ತಲೇ ಇರುತ್ತಾರೆ. ಚಹಾ ಕುಡಿಯುವುದರಿಂದ ಚೈತನ್ಯ ದೊರೆಯಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಕೆಲವರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತದೆ, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತದೆ?

ಚಹಾದಲ್ಲಿ ಕೆಫೀನ್ ಸೇರಿದಂತೆ ಹಲವು ರಾಸಾಯನಿಕ ಸಂಯುಕ್ತಗಳಿವೆ. ಇವು ಕೆಲವರಲ್ಲಿ ಹೊಟ್ಟೆಯ ಆಮ್ಲೀಯತೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಈಗಾಗಲೇ ಅಸಿಡಿಟಿ, ಎದೆಯುರಿ ಅಥವಾ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವಾಗ ಹೆಚ್ಚಿನ ಅಸ್ವಸ್ಥತೆಯ ಅನುಭವವಾಗಬಹುದು. ಕೆಲವರಿಗೆ ಚಹಾ ಕುಡಿದ ನಂತರ ಹೊಟ್ಟೆಯಲ್ಲಿ ಉರಿ, ವಾಕರಿಕೆ ಅಥವಾ ಹೊಟ್ಟೆ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಆದರೆ ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ಒಂದೇ ರೀತಿಯಾಗಿರುವುದಿಲ್ಲ. ಚಹಾದ ಪ್ರಮಾಣ, ಅದರ ಗಾಢತೆ ಮತ್ತು ವೈಯಕ್ತಿಕ ಆರೋಗ್ಯದ ಸ್ಥಿತಿಯೂ ಇಲ್ಲಿ ಮುಖ್ಯವಾಗುತ್ತವೆ.

ಇದನ್ನೂ ಓದಿ: ಮಲಬದ್ಧತೆಯ ಸಮಸ್ಯೆ ಕಾಡುತ್ತಿದ್ದರೆ ಆಹಾರ ಮತ್ತು ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ

ಚಹಾ ಕುಡಿಯುವುದರಿಂದ ಕರುಳಿಗೆ ಹಾನಿಯಾಗುತ್ತದೆಯೇ?

ಸಾಮಾನ್ಯವಾಗಿ ಚಹಾ ಕುಡಿಯುವುದರಿಂದ ನೇರವಾಗಿ ಕರುಳಿಗೆ ಹಾನಿಯಾಗುತ್ತದೆ ಎಂಬುದಕ್ಕೆ ಸದ್ಯಕ್ಕೆ ಸಾಕಷ್ಟು ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಚಹಾದಲ್ಲಿರುವ ಕೆಫೀನ್ ಕೆಲವರಲ್ಲಿ ಕರುಳಿನ ಚಟುವಟಿಕೆಯನ್ನು ಉತ್ತೇಜಿಸಬಹುದು. ಹೀಗಾಗಿ ಚಹಾ ಕುಡಿದ ತಕ್ಷಣ ಮಲವಿಸರ್ಜನೆಗೆ ಹೋಗಬೇಕೆನಿಸಬಹುದು. ಕೆಲವು ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರಿಗೆ ಹೊಟ್ಟೆ ಸೆಳೆತ ಅಥವಾ ಭೇದಿಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಚಹಾದಲ್ಲಿರುವ ಟ್ಯಾನಿನ್‌ಗಳು ಆಹಾರದಲ್ಲಿನ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಕಬ್ಬಿಣದ ಕೊರತೆ ಇರುವವರು ಚಹಾ ಸೇವನೆಯ ಸಮಯದ ಬಗ್ಗೆ ಗಮನಹರಿಸುವುದು ಉತ್ತಮ.

ಬೆಳಗ್ಗೆ ಚಹಾ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

ಆರೋಗ್ಯಕರ ದಿನಚರಿ ರೂಢಿಸಿಕೊಳ್ಳಬೇಕು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದಾಗ ಅಸ್ವಸ್ಥತೆ ಉಂಟಾಗುತ್ತಿದ್ದರೆ, ಸ್ವಲ್ಪ ಆಹಾರ ಸೇವಿಸಿದ ನಂತರ ಚಹಾ ಕುಡಿಯುವುದು ಸೂಕ್ತ. ಚಹಾದ ಪ್ರಮಾಣವನ್ನು ಮಿತವಾಗಿರಿಸಿ, ಅತಿಯಾಗಿ ಚಹಾ ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಪದೇಪದೇ ಹೊಟ್ಟೆನೋವು, ಎದೆಯುರಿ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಬೇಕು. ಒಟ್ಟಿನಲ್ಲಿ, ಚಹಾ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯ ಎಲ್ಲರಿಗೂ ಇಲ್ಲ. ತಮ್ಮ ದೇಹಕ್ಕೆ ಹೊಂದುವ ಪ್ರಮಾಣ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More