AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಸ್ರಾವದಲ್ಲಿ ರಕ್ತ ಲೋಳೆ ರೂಪದಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳ ರೂಪದಲ್ಲಿ ಹೊರಹೋಗಲು ಕಾರಣವೇನು? ನಿರ್ಲಕ್ಷಿಸಬಾರದ ಆರೋಗ್ಯ ಸೂಚನೆಗಳು

ಮುಟ್ಟಿನ ಸಮಯದಲ್ಲಿ ರಕ್ತ ಗಡ್ಡೆ ಅಥವಾ ಲೋಳೆ ರೂಪದಲ್ಲಿ ಕಾಣಿಸಿಕೊಳ್ಳುವುದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆದರೆ ದೊಡ್ಡ ಗಡ್ಡೆಗಳು, ಅತಿಯಾದ ರಕ್ತಸ್ರಾವ ಅಥವಾ ತೀವ್ರ ಹೊಟ್ಟೆನೋವು ಕಂಡುಬಂದರೆ ಎಚ್ಚರಿಕೆ ಅಗತ್ಯ. ಹಾರ್ಮೋನುಗಳ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು. ಮುಟ್ಟಿನ ಸಂದರ್ಭದಲ್ಲಿ ಈ ರೀತಿ ಆಗುವುದಕ್ಕೆ ಕಾರಣ, ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.

ಋತುಸ್ರಾವದಲ್ಲಿ ರಕ್ತ ಲೋಳೆ ರೂಪದಲ್ಲಿ ಚಿಕ್ಕ ಚಿಕ್ಕ ಗಡ್ಡೆಗಳ ರೂಪದಲ್ಲಿ ಹೊರಹೋಗಲು ಕಾರಣವೇನು? ನಿರ್ಲಕ್ಷಿಸಬಾರದ ಆರೋಗ್ಯ ಸೂಚನೆಗಳು
Period Blood ClotsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Oct 29, 2026 | 5:52 PM

Share

ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವದ ಜೊತೆಗೆ ಸಣ್ಣ ರಕ್ತ ಕಣಗಳು ಹೆಪ್ಪುಗಟ್ಟಿದ ರೀತಿ ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಋತುಸ್ರಾವದ ಮೊದಲ ಒಂದು ಅಥವಾ ಎರಡು ದಿನಗಳಲ್ಲಿ ರಕ್ತಸ್ರಾವ ಹೆಚ್ಚಾಗಿರುವಾಗ ಇಂತಹ ಗಡ್ಡೆಗಳು ಕಾಣಿಸಬಹುದು. ಆದರೆ ದೊಡ್ಡ ಗಡ್ಡೆಗಳು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ರಕ್ತಸ್ರಾವದ ಪ್ರಮಾಣ ಹೆಚ್ಚಾಗಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಹಾಗಾದರೆ ಮುಟ್ಟಿನ ಸಮಯದಲ್ಲಿ ಸಣ್ಣ ರಕ್ತ ಕಣಗಳು ಏಕೆ ಉಂಟಾಗುತ್ತವೆ ಮತ್ತು ಯಾವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಸುಮಾರು ಎರಡರಿಂದ ಏಳು ದಿನಗಳವರೆಗೆ ರಕ್ತಸ್ರಾವವಾಗಬಹುದು. ಈ ಅವಧಿಯಲ್ಲಿ ಗರ್ಭಾಶಯದ ಒಳಪದರವು ಕಳಚಿಕೊಂಡು ರಕ್ತದೊಂದಿಗೆ ಹೊರಬರುತ್ತದೆ. ರಕ್ತಸ್ರಾವದ ಪ್ರಮಾಣ ಹೆಚ್ಚಾಗಿರುವಾಗ ರಕ್ತವು ಗರ್ಭಾಶಯದಲ್ಲಿ ಅಥವಾ ಯೋನಿಯಲ್ಲಿ ಸ್ವಲ್ಪ ಸಮಯ ಉಳಿಯಬಹುದು. ಈ ಸಂದರ್ಭದಲ್ಲಿ ರಕ್ತವು ಗಡ್ಡೆಗಳ ರೂಪದಲ್ಲಿ ಹೊರಬರಬಹುದು. ಸಣ್ಣ ಗಡ್ಡೆಗಳು ಕೆಲವೊಮ್ಮೆ ಕಾಣಿಸಿಕೊಳ್ಳುವುದು ಸಹಜವಾಗಿದ್ದು, ಅವು ಮಾತ್ರವೇ ಯಾವುದಾದರೂ ಕಾಯಿಲೆಯ ಲಕ್ಷಣ ಎಂದರ್ಥವಲ್ಲ. ಹಾರ್ಮೋನುಗಳ ಬದಲಾವಣೆಗಳು ಗರ್ಭಾಶಯದ ಒಳಪದರದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಗರ್ಭಾಶಯದ ಗಡ್ಡೆಗಳು, ಅಡೆನೊಮಯೋಸಿಸ್ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳಿದ್ದರೂ ಅಧಿಕ ರಕ್ತಸ್ರಾವ ಹಾಗೂ ರಕ್ತದ ಗಡ್ಡೆಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯಬಹುದೇ? ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಇಲ್ಲಿವೆ!

ಯಾವಾಗ ಎಚ್ಚರಿಕೆ ವಹಿಸಬೇಕು?

  • ಪದೇಪದೇ ಸುಮಾರು 2.5 ಸೆಂಟಿಮೀಟರ್‌ಗಿಂತ ದೊಡ್ಡ ರಕ್ತದ ಗಡ್ಡೆಗಳು ಕಾಣಿಸಿಕೊಳ್ಳುವುದು.
  • ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವಷ್ಟು ಅಧಿಕ ರಕ್ತಸ್ರಾವವಾಗುವುದು.
  • ಮುಟ್ಟಿನ ರಕ್ತಸ್ರಾವ ಏಳು ದಿನಗಳಿಗಿಂತ ಹೆಚ್ಚು ಮುಂದುವರಿಯುವುದು.
  • ತೀವ್ರ ಹೊಟ್ಟೆನೋವು, ಅತಿಯಾದ ಸುಸ್ತು, ತಲೆಸುತ್ತು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.
  • ಪ್ರತಿ ಗಂಟೆಗೆ ಒಂದು ಪ್ಯಾಡ್ ಸಂಪೂರ್ಣವಾಗಿ ಒದ್ದೆಯಾಗುವಷ್ಟು ರಕ್ತಸ್ರಾವ ಸತತ ಎರಡು ಗಂಟೆಗಳವರೆಗೆ ಮುಂದುವರಿದರೆ, ತಲೆಸುತ್ತು ಅಥವಾ ಉಸಿರಾಟದ ತೊಂದರೆಯಿದ್ದರೆ, ತುರ್ತು ವೈದ್ಯಕೀಯ ನೆರವು ಪಡೆಯಬೇಕು.

ಮುಟ್ಟಿನ ಸಮಯದಲ್ಲಿ ಏನು ಮಾಡಬೇಕು?

ಮುಟ್ಟಿನ ದಿನಗಳಲ್ಲಿ ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ವಿಶ್ರಾಂತಿ ಪಡೆಯುವುದು ಮುಖ್ಯ. ಅಧಿಕ ರಕ್ತಸ್ರಾವವಿದ್ದರೆ ರಕ್ತಹೀನತೆಯ ಅಪಾಯವಿರುವುದರಿಂದ ವೈದ್ಯರ ಸಲಹೆಯಂತೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬಹುದು. ಒಟ್ಟಿನಲ್ಲಿ, ಮುಟ್ಟಿನ ಸಮಯದಲ್ಲಿ ಸಣ್ಣ ರಕ್ತದ ಗಡ್ಡೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರಬಹುದು. ಆದರೆ ದೊಡ್ಡ ಗಡ್ಡೆಗಳು, ಅತಿಯಾದ ರಕ್ತಸ್ರಾವ ಅಥವಾ ತೀವ್ರ ನೋವು ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವುದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Thu, 29 October 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More