FASTag ಬದಲು ಶೀಘ್ರದಲ್ಲೇ ಮತ್ತೊಂದು ನಿಯಮ: ಗಾಡಿ ಓಡಿದಷ್ಟು ದೂರಕ್ಕೆ ಟೋಲ್ ಸಂಗ್ರಹ
ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು: ಹೆದ್ದಾರಿಗಳಲ್ಲಿ ಸುಗಮ ಸಂಚಾರ ಮತ್ತು ಸುಲಭವಾಗಿ ಟೋಲ್ ಸಂಗ್ರಹಿಸಲೆಂದು ಜಾರಿಗೆ ತಂದ ಫಾಸ್ಟ್ಯಾಗ್ (FASTag) ವ್ಯವಸ್ಥೆ ಶೀಘ್ರ ಇತಿಹಾಸದ ಪುಟ ಸೇರಲಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಜಿಪಿಎಸ್ ಉಪಗ್ರಹ ತಂತ್ರಜ್ಞಾನವನ್ನು ಟೋಲ್ ನಿಗದಿಪಡಿಸಲು ಬಳಸಿಕೊಳ್ಳಲು (GPS-Based Toll Collection) ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರ ಕಾರ್ಯಸಾಧ್ಯತೆ ಪರಿಶೀಲಿಸಲು ಪ್ರಾಯೋಗಿಕವಾಗಿ ಭಾರತದಲ್ಲಿ ಹೊಸ ವ್ಯವಸ್ಥೆಯನ್ನು ಕೆಲವೆಡೆ ಜಾರಿಗೆ ತರಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಜಾಲತಾಣ ವರದಿ ಮಾಡಿದೆ.
ಒಂದು ಹೆದ್ದಾರಿಯಲ್ಲಿ ವಾಹನವು ಎಷ್ಟು ದೂರ ಸಂಚರಿಸಿದೆ ಎನ್ನುವುದನ್ನು ಲೆಕ್ಕ ಹಾಕಿ ಎಷ್ಟು ಟೋಲ್ ಪಾವತಿಸಬೇಕು ಎನ್ನುವುದನ್ನು ನಿಗದಿಪಡಿಸಲಾಗುತ್ತದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಕಳೆದ ಮಾರ್ಚ್ನಲ್ಲಿ ಲೋಕಸಭೆಯಲ್ಲಿ ಮಾತನಾಡುವಾಗ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ ಟೋಲ್ಪ್ಲಾಜಾ ತೆಗೆದುಹಾಕಲಾಗುವುದು ಎಂದು ಹೇಳಿದ್ದರು.
ಟೋಲ್ಬೂತ್ಗಳ ಜಾಗದಲ್ಲಿ ಜಿಪಿಎಸ್-ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಚಲಿಸುವ ವಾಹನಗಳು ಟೋಲ್ ರಸ್ತೆಯಲ್ಲಿ ಎಷ್ಟು ದೂರ ಸಂಚರಿಸಿವೆ ಎಂಬುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ ಈ ವ್ಯವಸ್ಥೆಯು ಟೋಲ್ ಸಂಗ್ರಹಿಸಲಿದೆ. ಹಾಲಿ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಎಕ್ಸ್ಪ್ರೆಸ್ ವೇ ಅಥವಾ ಹೆದ್ದಾರಿಯಲ್ಲಿ ಸಾಗುವ ಎಲ್ಲ ವಾಹನಗಳು ಒಂದು ಟೋಲ್ ದಾಟುವಾಗ ಮತ್ತೊಂದು ಟೋಲ್ವರೆಗಿನ ಅಂತರಕ್ಕೆ ಇಡಿಯಾಗಿ. ವಾಹನ ಎಷ್ಟು ದೂರ ಚಲಿಸಿತು ಎನ್ನುವುದನ್ನು ಪರಿಗಣಿಸಲು ಅವಕಾಶವಿಲ್ಲ.
ವಿದೇಶಗಳಲ್ಲಿ, ಮುಖ್ಯವಾಗಿ ಐರೋಪ್ಯ ದೇಶಗಳಲ್ಲಿ ಜಿಪಿಎಸ್ ಆಧರಿತ ವ್ಯವಸ್ಥೆ ಜಾರಿಗೆ ಬಂದಿದೆ. ಭಾರತದಲ್ಲಿಯೂ ಇದೇ ವ್ಯವಸ್ಥೆ ಅಳವಡಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದೆ. ಜರ್ಮನಿಯಲ್ಲಿ ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಾಹನವೊಂದು ಟೋಲ್ ಪ್ರದೇಶಕ್ಕೆ ಪ್ರವೇಶಿಸಿದ ತಕ್ಷಣ ತೆರಿಗೆ ಲೆಕ್ಕಾಚಾರ ಆರಂಭವಾಗುತ್ತದೆ. ಭಾರತದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಲು ಸಾರಿಗೆ ನೀತಿಯನ್ನೇ ಬದಲಿಸಬೇಕಾಗುತ್ತದೆ. ಪ್ರಸ್ತುತ ಪ್ರಾಯೋಗಿಕ ಜಾರಿಗಾಗಿ ದೇಶಾದ್ಯಂತ 1.37 ಲಕ್ಷ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.
ಟೋಲ್ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲೆಂದು 2016ರಲ್ಲಿ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಯಿತು. ಈ ವ್ಯವಸ್ಥೆಯಡಿ ವಾಹನವೊಂದು ಟೋಲ್ ಪ್ಲಾಜಾ ದಾಟಿದ ತಕ್ಷಣ ಹಣ ಕಡಿತಗೊಳ್ಳುತ್ತದೆ. ಫಾಸ್ಟ್ಯಾಗ್ ಜಾರಿಯಾದ ನಂತರ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸುಗಮವಾಗಿತ್ತು. ಇದೀಗ ಸರ್ಕಾರವು ಮತ್ತೊಂದು ಸುಧಾರಣೆಯನ್ನು ಜಾರಿಗೆ ತರಲು ಮುಂದಾಗಿದೆ.
Published On - 11:25 am, Mon, 8 August 22