AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡ ವಿರುದ್ಧ ಅವಹೇಳನಕಾರಿ ಪೋಸ್ಟ್; ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದ ಆರೋಪಕ್ಕೆ ಸಂಬಂಧಿಸಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಅವರನ್ನು ನಗರದ ಶ್ರೀರಾಮಪುರ ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.

ದೇವೇಗೌಡ ವಿರುದ್ಧ ಅವಹೇಳನಕಾರಿ ಪೋಸ್ಟ್; ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್
ಪ್ರಶಾಂತ್ ಸಂಬರಗಿ
Ganapathi Sharma
|

Updated on:Apr 05, 2023 | 6:31 PM

Share

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದ ಆರೋಪಕ್ಕೆ ಸಂಬಂಧಿಸಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ (Prashanth Sambargi) ವಿರುದ್ಧ ನಗರದ ಶ್ರೀರಾಮಪುರ ಪೊಲೀಸರು ಬುಧವಾರ ಎಫ್​ಐಆರ್ ದಾಖಲಿಸಿ ವಿಚಾರಣೆ ನಡೆಸಿದರು. ನಂತರ ಪ್ರಶಾಂತ್ ಸಂಬರಗಿಯಿಂದ ಮುಚ್ಚಳಿಕೆ ಹಾಗೂ 1 ಲಕ್ಷ ರೂ. ಬಾಂಡ್ ಬರೆಸಿಕೊಂಡು ಅವರನ್ನು ಕಳುಹಿಸಿಕೊಡಲಾಯಿತು. ದೇವೇಗೌಡರ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ​ನಾಯಕರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಂಡ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದ ಪ್ರಶಾಂತ್ ಸಂಬರಗಿ, ‘ಈ ಕೇಸ್ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಎಂದರೆ, ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರುತ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು, ಎರಡನೆಯದ್ದಕ್ಕೆ ಅವನ ಮಗನೋ ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು’ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಗೌಡರಿಗೆ ಅಪಮಾನ: ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ಜೆಡಿಎಸ್, ಕ್ಷಮೆ ಯಾಚಿಸಿದ ಸಂಬರಗಿ

ಸಂಬರಗಿ ಸಂದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಟ್ವಿಟರ್ ಹಾಗೂ ಫೇಸ್​ಬುಕ್​ನಲ್ಲಿ ಅವಹೇಳನಕಾರಿಯಾಗಿ ಬರೆದಿರುವ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಕಾನೂನು ಘಟಕದ ಎ.ಪಿ.ರಂಗನಾಥ್, ವಕ್ತಾರ ಗಂಗಾಧರ್ ಮೂರ್ತಿ ಸೇರಿ ಹಲವರು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ದೂರು ಸಲ್ಲಿಸಿದ್ದರು. ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು. ದೂರು ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ.

ಕ್ಷಮೆ ಯಾಚಿಸಿದ್ದ ಸಂಬರಗಿ

ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆ ಯಾಚಿಸಿದ್ದ ಸಂಬರಗಿ, ನನ್ನ ತಂದೆ ಸಮಾನರಾದ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೇಗೌಡ ಎಂದು ಹೆಸರನ್ನು ಬಳಸಿದೆನೇ ಹೊರತು ಯಾವುದೇ ದುರುದ್ದೇಷವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರುವುದಕ್ಕಾಗಿ ಅಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 5 April 23