AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್! ಮೊಬೈಲ್ ಟಾರ್ಚ್ ಬೆಳಕಲ್ಲೇ ರಾತ್ರಿ ಕಳೆದ ಬಾಣಂತಿಯರು, ಹಸುಗೂಸುಗಳು

ಬಳ್ಳಾರಿಯ ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳು ತೀವ್ರ ಪರದಾಟ ಅನುಭವಿಸಿದ್ದಾರೆ. ರಾತ್ರಿಯಿಡೀ ಕತ್ತಲು, ಸೊಳ್ಳೆ ಕಾಟ ಮತ್ತು ಸೆಕೆಯಿಂದ ರೋಗಿಗಳು ನರಳಿದ್ದಾರೆ. ಪರ್ಯಾಯ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್! ಮೊಬೈಲ್ ಟಾರ್ಚ್ ಬೆಳಕಲ್ಲೇ ರಾತ್ರಿ ಕಳೆದ ಬಾಣಂತಿಯರು, ಹಸುಗೂಸುಗಳು
ಕರೆಂಟ್​ ಇಲ್ಲಿದೆ ಬಾಣಂತಿಯರು ಪರದಾಟImage Credit source: tv9 kannada
ವಿನಾಯಕ ಬಡಿಗೇರ್​
| Edited By: |

Updated on: Oct 09, 2026 | 8:23 PM

Share

ಬಳ್ಳಾರಿ, ಅಕ್ಟೋಬರ್​​ 09: ಸರ್ಕಾರಿ ಆಸ್ಪತ್ರೆ ಅಂದರೆ ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕು. ಆದರೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಬಾಣಂತಿಯರು, ನವಜಾತ ಶಿಶುಗಳು ಮೊಬೈಲ್ ಟಾರ್ಚ್​ನಲ್ಲಿ ಇಡೀ ರಾತ್ರಿ ಕಳೆಯುವಂತಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಟಾರ್ಚ್ ಬೆಳಕೆ ಆಸರೆ; ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ 

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 30 ಹಾಸಿಗೆಯುಳ್ಳ ತೆಕ್ಕಲಕೋಟೆ ಸಮುದಾಯ ಕೇಂದ್ರದಲ್ಲಿ ಬಾಣಂತಿಯರ ವಾಡ್೯‌ನಲ್ಲೇ ವಿದ್ಯುತ್ ಕೈಕೊಟ್ಟಿದೆ. ಪರಿಣಾಮ ರಾತ್ರಿ ಇಡೀ ಕರೆಂಟ್ ಇಲ್ಲದೆ, ಗಾಳಿ ಇಲ್ಲದೆ, ಸೊಳ್ಳೆಗಳ ಕಾಟ ತಾಳಲಾರದೆ ಬಾಣಂತಿಯರು ಹಾಗೂ ಹಸುಗೂಸುಗಳು ಪರದಾಡಿವೆ. ಮೊಬೈಲ್ ಟಾರ್ಚ್ ಬೆಳಕಿನಲ್ಲೇ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಸುಗೂಸುಗಳು ಸೆಕೆ ತಾಳಲಾರದೆ ಅಳುತ್ತಿದ್ದರೆ, ಸಂಬಂಧಿಕರು ಸೀರೆ ಸೆರಗಿನಿಂದಲೇ ಗಾಳಿ ಬಿಸಿ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲೇ ಆರೋಗ್ಯಾಧಿಕಾರಿಗಳ ಡ್ಯಾನ್ಸ್: ತೆಲುಗು ಹಾಡಿಗೆ ಹೆಜ್ಜೆ ಹಾಕಿದ ವೈದ್ಯರ ವಿಡಿಯೋ ವೈರಲ್

ಬಾಣಂತಿಯರು ಮತ್ತು ನವಜಾತ ಶಿಶುಗಳ ವಾಡ್೯‌ನಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ, ಮೊಬೈಲ್ ಟಾರ್ಚ್ ಬೆಳಕೇ ಆಸರೆಯಾಗಿದೆ. ಆಸ್ಪತ್ರೆಯ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಯೂ ಇಲ್ಲ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಳವಾಗಿದೆ. ವಿದ್ಯುತ್​ ಕೈಕೊಟ್ಟಾಗ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LIVE TV

ಬಾಣಂತಿಯರು ಹಾಗೂ ನವಜಾತ ಶಿಶುಗಳ ವಾರ್ಡ್‌ನಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆಯಿಲ್ಲ ಎಂದು ಆರೋಪಿಸಲಾಗಿದೆ. ಪದೇಪದೇ ವಿದ್ಯುತ್ ಕಡಿತವಾಗುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸಂಬಂಧಿಕರ ಆಕ್ರೋಶ. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ವಾಡ್೯‌ನಲ್ಲಿ ಕರೆಂಟ್ ಸಮಸ್ಯೆ ಯಾಕಾಯಿತು, ವಿದ್ಯುತ್ ಕಡಿತದ ವೇಳೆ ಪರ್ಯಾಯ ವ್ಯವಸ್ಥೆ ಏಕೆ ಕಲ್ಪಿಸಿಲ್ಲ ಎಂಬ ಪ್ರಶ್ನೆಗಳು ಮೂಡಿವೆ.

ಡಿಹೆಚ್​ಓ ಅಲಕನಂದಾ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಡಿಹೆಚ್​ಓ ಅಲಕನಂದಾ ಅವರನ್ನ ಕೇಳಿದರೆ ‘ಯುಪಿಎಸ್ ಆಫ್ ಆಗಿರುವ ಪರಿಣಾಮ ಹೀಗಾಗಿದೆ. ವಿದ್ಯುತ್ ಸಮಸ್ಯೆಯಾದ ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆ ಹರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವರದಿ ಕೊಡಲು ತಿಳಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಕ್ರಮಕೈಕೊಳ್ಳುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!

ಒಟ್ಟಿನಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ವಾರ್ಡ್‌ನಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ, ಸೊಳ್ಳೆ ಕಾಟದಿಂದ ರಕ್ಷಣೆ ಒದಗಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಾಯಕ ಬಡಿಗೇರ್​
ವಿನಾಯಕ ಬಡಿಗೇರ್​