ದೀಪಾವಳಿಗೂ ಮುನ್ನ ಮನೆಗೆ ತನ್ನಿ ಈ 3 ಗಿಡ; ಒಲಿಯಲಿದೆ ಲಕ್ಷ್ಮಿ ದೇವಿಯ ಕೃಪೆ, ವೃದ್ಧಿಯಾಗಲಿದೆ ಸಂಪತ್ತು!
ದೀಪಾವಳಿ ಹಬ್ಬವು ಧನಲಕ್ಷ್ಮಿ ಮತ್ತು ಗಣೇಶನ ಪೂಜೆಗೆ ಅತ್ಯಂತ ಶ್ರೇಷ್ಠ. ವಾಸ್ತು ಮತ್ತು ಶಾಸ್ತ್ರಗಳ ಪ್ರಕಾರ, ಈ ಹಬ್ಬದ ಶುಭ ಸಂದರ್ಭದಲ್ಲಿ ಮನೆಯಲ್ಲಿ ಜೇಡ್ ಪ್ಲಾಂಟ್, ತುಳಸಿ ಹಾಗೂ ಶಂಖ ಪುಷ್ಪ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ದೂರವಾಗುತ್ತವೆ. ಈ ಸಸ್ಯಗಳು ಮನೆಗೆ ಧನಾತ್ಮಕ ಶಕ್ತಿಯನ್ನು ತರುವುದಲ್ಲದೆ, ವ್ಯಾಪಾರ-ವಹಿವಾಟಿನಲ್ಲಿ ಪ್ರಗತಿ, ಆರ್ಥಿಕ ಲಾಭ ಹಾಗೂ ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದದೊಂದಿಗೆ ಮನೆಯಲ್ಲಿ ಸದಾ ಸುಖ, ಶಾಂತಿ ಮತ್ತು ಅಷ್ಟೈಶ್ವರ್ಯಗಳನ್ನು ವೃದ್ಧಿಸುತ್ತವೆ.

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಕಾಯುವ ಪ್ರಮುಖ ಹಬ್ಬವೆಂದರೆ ಅದು ದೀಪಾವಳಿ. ಹಿಂದೂ ಧರ್ಮದಲ್ಲಿ ಈ ಬೆಳಕಿನ ಹಬ್ಬಕ್ಕೆ ಅತ್ಯಂತ ಪವಿತ್ರ ಹಾಗೂ ವಿಶೇಷ ಮಹತ್ವವಿದೆ. ದೀಪಾವಳಿಯ ದಿನದಂದು ಪ್ರತಿಯೊಬ್ಬರೂ ಧನಲಕ್ಷ್ಮಿ ಮತ್ತು ವಿಘ್ನನಿವಾರಕ ಗಣೇಶನನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಪೂಜಿಸುತ್ತಾರೆ. ಮನೆಮನೆಗಳಲ್ಲೂ ದೀಪಗಳ ಸಾಲು, ರಂಗೋಲಿಗಳ ಚಿತ್ತಾರ ಹಾಗೂ ಪಟಾಕಿಗಳ ಸದ್ದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಶಾಸ್ತ್ರಗಳು ಮತ್ತು ವಾಸ್ತು ಪ್ರಕಾರ, ದೀಪಾವಳಿ ಹಬ್ಬದ ಸಮಯದಲ್ಲಿ ಕೆಲವೊಂದು ಶುಭ ನಿಯಮಗಳನ್ನು ಪಾಲಿಸುವುದರಿಂದ ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದ ಸಿಗುತ್ತದೆ. ಅದರಲ್ಲೂ ದೀಪಾವಳಿಗೂ ಮುನ್ನ ಅಥವಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ನಾಲ್ಕು ವಿಶೇಷ ಗಿಡಗಳನ್ನು ನೆಟ್ಟು ಪೂಜಿಸುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ, ಸುಖ-ಶಾಂತಿ ಹಾಗೂ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತವೆ.
ಆರ್ಥಿಕ ಪ್ರಗತಿ ತರುವ ಜೇಡ್ ಪ್ಲಾಂಟ್:
ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕ ಜನರು ಜೇಡ್ ಗಿಡವನ್ನು ಮನೆಯಲ್ಲಿ ನೆಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನವಿದ್ದು, ಇದನ್ನು ಸಂಪತ್ತನ್ನು ಆಕರ್ಷಿಸುವ ಗಿಡ ಎಂದೇ ಕರೆಯಲಾಗುತ್ತದೆ. ಮನೆಯಲ್ಲಿ ಜೇಡ್ ಗಿಡವನ್ನು ನೆಡುವುದರಿಂದ ಆರ್ಥಿಕವಾಗಿ ಹಠಾತ್ ಸುಧಾರಣೆ ಕಂಡುಬರುತ್ತದೆ ಮತ್ತು ನಷ್ಟದಲ್ಲಿದ್ದ ವ್ಯವಹಾರಗಳು ಚೇತರಿಸಿಕೊಳ್ಳುತ್ತವೆ. ಇದು ಮನೆಯಲ್ಲಿ ಸಿರಿ-ಸಂಪತ್ತು ಮತ್ತು ಐಶ್ವರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಶುಭ ಹಾಗೂ ಸಮೃದ್ಧಿಯ ಸಂಕೇತ ತುಳಸಿ:
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ದೇವತೆಯ ಸ್ಥಾನ ನೀಡಲಾಗಿದೆ. ದೀಪಾವಳಿಯ ಸುಸಂದರ್ಭದಲ್ಲಿ ಮನೆಯ ಅಂಗಳದಲ್ಲಿ ಹೊಸ ತುಳಸಿ ಗಿಡವನ್ನು ನೆಡುವುದು ಅತ್ಯಂತ ಶುಭಕರ ಹಾಗೂ ಮಹಾಲಕ್ಷ್ಮಿಗೆ ಪ್ರಿಯವಾದ ಕಾರ್ಯವಾಗಿದೆ. ದೀಪಾವಳಿಯ ಸಮಯದಲ್ಲಿ ತುಳಸಿ ಗಿಡ ನೆಡುವುದರಿಂದ ಮನೆಗೆ ಅದೃಷ್ಟ ಒಲಿದುಬರುವುದಲ್ಲದೆ, ಆರ್ಥಿಕ ಲಾಭಗಳು ಉಂಟಾಗುತ್ತವೆ. ಜೊತೆಗೆ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಧನ-ಧಾನ್ಯ ಸದಾ ವೃದ್ಧಿಯಾಗುತ್ತಿರುತ್ತದೆ.
ಇದನ್ನೂ ಓದಿ: ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ
ವಾಸ್ತು ದೋಷ ನಿವಾರಿಸುವ ಶಂಖ ಪುಷ್ಪ:
ಮನೆಯಲ್ಲಿ ಶಂಖ ಪುಷ್ಪ ಗಿಡವನ್ನು (ಅಪರಾಜಿತಾ ಗಿಡ) ನೆಡುವುದು ಕೂಡ ದೀಪಾವಳಿಯ ಸಮಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆಧ್ಯಾತ್ಮಿಕ ಹಾಗೂ ವಾಸ್ತು ದೃಷ್ಟಿಕೋನದಿಂದ ಶಂಖ ಪುಷ್ಪದ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಪಾವಳಿ ಹಬ್ಬದ ಮೊದಲು ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ವಾಸ್ತು ದೋಷಗಳು ದೂರವಾಗಿ, ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ಸಂಪತ್ತು ಸ್ಥಿರವಾಗಿ ನೆಲೆಸುತ್ತದೆ.
ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಕೇವಲ ದೀಪ ಬೆಳಗಿಸುವುದು ಮಾತ್ರವಲ್ಲದೆ, ಈ ನಾಲ್ಕು ಸಸ್ಯಗಳಲ್ಲಿ ಕನಿಷ್ಠ ಒಂದನ್ನಾದರೂ ನಿಮ್ಮ ಮನೆಯಲ್ಲಿ ನೆಟ್ಟು ಭಕ್ತಿಯಿಂದ ಪೋಷಿಸಿ. ವಾಸ್ತು ದೋಷಗಳಿಂದ ಮುಕ್ತಿ ಪಡೆದು, ಮಹಾಲಕ್ಷ್ಮಿಯ ಆಶೀರ್ವಾದದೊಂದಿಗೆ ನಿಮ್ಮ ಮನೆಯಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




