ಕ್ರಿಕೆಟ್ ಮೈದಾನ ನಿರ್ಮಣಕ್ಕೆ ಸ್ಥಳೀಯರ ವಿರೋಧ; HSR ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ
ಎಲ್ಲರೂ ಆಡಬಹುದಾದ ಈ ಮೈದಾನವನ್ನು ಖಾಸಗೀಕರಣ ಮಾಡಿ, ಕ್ರಿಕೆಟ್ ಮೈದಾನವಾಗಿಸಿದರೆ ಅದರಿಂದ ಸ್ಥಳೀಯ ಮಕ್ಕಳಿಗೆ ಆಡುವ ಅವಕಾಶ ತಪ್ಪಿಹೋಗಬಹುದು ಎಂಬುದು ಅಲ್ಲಿನ ಜನರ ಆತಂಕವಾಗಿದೆ.
ಬೆಂಗಳೂರು: ನಗರದ HSR ಬಡಾವಣೆ ಸೆಕ್ಟರ್ 2ರ 7.18 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ 140 ಕೋಟಿಯ ಕ್ರಿಕೆಟ್ ಮೈದಾನ ಕೆಲಸದ ವಿರುದ್ಧ ನಾಗರಿಕರು ಇಂದು (ಮಾರ್ಚ್ 6) ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ನಿವಾಸಿಗಳ ವಿರೋಧ ಅಭಿಪ್ರಾಯದ ನಡುವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕ್ರಿಕೆಟ್ ಮೈದಾನ ನಿರ್ಮಿಸಲು ಹೊರಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 10 ಸಾವಿರ ಜನರು ಕುಳಿತುಕೊಳ್ಳಬಹುದಾದ ಈ ಮೈದಾನದಲ್ಲಿ, ನಾಲ್ಕು ಪೆವಿಲಿಯನ್, ವಾಲಿಬಾಲ್ ಮತ್ತು ಬಾಸ್ಕೆಟ್ಬಾಲ್ ಕೋರ್ಟ್ಗಳು ಕೂಡ ಇರಲಿದೆ. ಪ್ರತಿಯೊಂದು ಮೈದಾನಕ್ಕೂ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ. ಈ ಮೈದಾನದ ನಿರ್ಮಾಣ ಕಾರ್ಯವನ್ನು ಸ್ಥಳೀಯರು ವಿರೋಧಿಸಿದ್ದಾರೆ.
ಇದು ಸುಮಾರು 500 ಜನರು ಆಡಬಹುದಾದ ಓಪನ್ ಮೈದಾನವಾಗಿದೆ. ಆದರೆ, ಕ್ರಿಕೆಟ್ ಮೈದಾನ ಮಾಡಿದರೆ ಕೇವಲ 11 ಆಟಗಾರರು ಮಾತ್ರ ಆಡಬಹುದು. ಇದರಿಂದ ಕೇವಲ ಕಾಂಟ್ರಾಕ್ಟರ್ಗೆ ಮಾತ್ರ ಲಾಭವಾಗಲಿದೆ ಎಂದು 2ನೇ ಹಂತದ ನಿವಾಸಿ ಹಾಗೂ ಆಮ್ ಆದ್ಮಿ (AAP) ಪಕ್ಷದ ಸದಸ್ಯರೂ ಆಗಿರುವ ಗಿರೀಶ್ ತಿಳಿಸಿದ್ದಾರೆ.
ಎಲ್ಲರೂ ಆಡಬಹುದಾದ ಈ ಮೈದಾನವನ್ನು ಖಾಸಗೀಕರಣ ಮಾಡಿ, ಕ್ರಿಕೆಟ್ ಮೈದಾನವಾಗಿಸಿದರೆ ಅದರಿಂದ ಸ್ಥಳೀಯ ಮಕ್ಕಳಿಗೆ ಆಡುವ ಅವಕಾಶ ತಪ್ಪಿಹೋಗಬಹುದು ಎಂಬುದು ಅಲ್ಲಿನ ಜನರ ಆತಂಕವಾಗಿದೆ. ಹೀಗೆ ಕ್ರಿಕೆಟ್ ಮೈದಾನ ಮಾಡುವುದರಿಂದ ಅದು ಪರಿಸರಕ್ಕೂ ಹಾನಿ ಮಾಡಲಿದೆ. 10 ಸಾವಿರ ಜನರ ಮೈದಾನದಲ್ಲಿ ಪಂದ್ಯಾಟಗಳು ನಡೆದರೆ ಅದರಿಂದ ಶಬ್ದ ಮತ್ತು ವಾಯು ಮಾಲಿನ್ಯ ಆಗಲಿದೆ. ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆ ಆಗಲಿದೆ ಎಂದು ಶಿವಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇದು ಖಾಸಗೀಕರಣದ ಒಂದು ಹಂತ ಎಂದು ಸ್ಥಳೀಯರು ದೂರುತ್ತಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. RTI ಮೂಲಕ ಪಡೆದ ಮಾಹಿತಿಯಂತೆ, ಕಂಠೀರವ ಹಾಗೂ ಕೋರಮಂಗಲ ಮೈದಾನದಲ್ಲಿ ಕ್ರೀಡೆಯ ಹೊರತಾದ ಚಟುವಟಿಕೆಗಳು, ವಸ್ತು ಪ್ರದರ್ಶನ, ಸಮಾವೇಶಗಳು ನಡೆಯುತ್ತವೆ. ಉಲ್ಸೂರಿನ ಕೆನ್ಸಿಂಗ್ಟನ್ ಸ್ವಿಮ್ಮಿಂಗ್ ಪೂಲ್ ಕೂಡ ಖಾಸಗೀಕರಣದ ಸುಳಿಗೆ ಬಿದ್ದು ಬಳಿಕ, ಹಣ ಕೊಟ್ಟವರು ಮಾತ್ರ ಈಜಲು ಪ್ರವೇಶ ಪಡೆಯುವಂತೆ ಆಗಿತ್ತು. ಈ ಉದಾಹರಣೆಗಳನ್ನು ನೀಡಿ ಇಂದಿರಾನಗರ ನಿವಾಸಿಗಳು ಕರ್ನಾಟಕ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಅದರಂತೆ ಅಲ್ಲಿನ ಮೈದಾನ ಯೋಜನೆ ಕೈಬಿಡಲಾಗಿತ್ತು. ಸುಸಜ್ಜಿತ ಮೈದಾನ ಎಂಬ ಹೆಸರಿನಲ್ಲಿ ಸ್ಥಳೀಯ ಮಕ್ಕಳ ಆಟವನ್ನು ಕಸಿದುಕೊಳ್ಳಲಾಗುತ್ತದೆ ಎಂಬುದು ಅವರ ವಾದವಾಗಿತ್ತು.
ನಗರದ ಸ್ವಚ್ಛತೆ, ಒಳಚರಂಡಿ, ರಸ್ತೆ ದುರಸ್ತಿ, ಫುಟ್ಪಾತ್ ನಿರ್ಮಾಣಕ್ಕೆ ಮುಂದಾಗದ BBMP ಈ ಕ್ರೀಡಾಂಗಣ ನಿರ್ಮಾಣಕ್ಕೆ ಅಷ್ಟು ದೊಡ್ಡ ಮೊತ್ತ ನೀಡಿ, ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದು ಏಕೆ ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದ್ದಾರೆ.
ಈ ಹಿಂದೆ, 2008ರಲ್ಲಿ ಸ್ಥಳೀಯರು ಈ ಮೈದಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರು. ಜಡ್ಜ್ಗಳಿಗೆ ಕಾಲನಿ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ, ಸ್ಥಳೀಯರು ಹೈಕೋರ್ಟ್ನಲ್ಲಿ 5 ವರ್ಷ ಹೋರಾಡಿದ್ದರು. ಹೀಗೆ ಉಳಿಸಿಕೊಂಡ ಆ ಮೈದಾನವನ್ನು ಈಗ ಮತ್ತೆ ಕ್ರೀಡಾಂಗಣ ಎಂಬ ಸ್ವರೂಪಕ್ಕೆ ತಂದು ಬಿಡುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಈಗಿನ ವಿಸ್ತೃತ ಯೋಜನಾ ವರದಿ (DPR) ನೀಡುವಂತೆ ಶಿವಲಿಂಗಯ್ಯ ಎಂಬವರು RTI ಹಾಕಿದ್ದರು. ಆದರೆ, 60 ದಿನಗಳ ಬಳಿಕವೂ ಅವರಿಗೆ ಪ್ರತಿಕ್ರಿಯೆ ಲಭಿಸಿಲ್ಲ. ಮುಂಬರುವ ದಿನಗಳಲ್ಲಿ ಬೊಮ್ಮನಹಳ್ಳಿ BBMP ಮತ್ತು BBMP ಮುಖ್ಯ ಕಚೇರಿ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಸ್ಥಳೀಯರು ಚಿಂತಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?
ಗನ್ ಮಾಫಿಯಾದಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರು: ಸಿಟಿ ಪೊಲೀಸರ ರಹಸ್ಯ ಕಾರ್ಯಾಚರಣೆ ವೇಳೆ ಹೊರಬಂತು ಸ್ಪೋಟಕ ಮಾಹಿತಿ
Published On - 8:17 pm, Sat, 6 March 21