ಬೆಂಗಳೂರಿನಲ್ಲಿ ನ್ಯೂ ಇಯರ್ ಎಫೆಕ್ಟ್: 15 ಮೆಟ್ರಿಕ್ ಟನ್ ಕಸ ಸಂಗ್ರಹ, ಬಿಎಂಟಿಸಿಗೆ 5 ಕೋಟಿ ಆದಾಯ
New Year 2025: ಬೆಂಗಳೂರಿನಲ್ಲಿ 2025ರ ಹೊಸ ವರ್ಷದ ಆಚರಣೆಯಿಂದ ಬಿಎಂಟಿಸಿಗೆ 5 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಕೆಯಾಗಿದೆ. 35 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಬಸ್ಗಳನ್ನು ಬಳಸಿದ್ದಾರೆ. ಆದರೆ, ಎಂ.ಜಿ. ರಸ್ತೆಯಲ್ಲಿ 15 ಮೆಟ್ರಿಕ್ ಟನ್ ಕಸ ಸಂಗ್ರಹವಾಗಿದೆ. ಪಾಲಿಕೆ ಸಿಬ್ಬಂದಿ ಕಸ ವಿಲೇವಾರಿ ಮಾಡಿದ್ದಾರೆ.
ಬೆಂಗಳೂರು, ಜನವರಿ 01: 2024ಕ್ಕೆ ಬಾಯ್ ಬಾಯ್ ಹೇಳಿ 2025 ನ್ನ ವೆಲ್ಕಮ್ ಮಾಡಿಕೊಂಡು ಹೊಸ ವರ್ಷಾಚರಣೆಯನ್ನು (New Year) ಸಿಲಿಕಾನ್ ಸಿಟಿ ಮಂದಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಹೊಸ ವರ್ಷ ಬಂತು ಅಂದರೆ ಸಾಕು ಅಬಕಾರಿ ಇಲಾಖೆಗೆ ಕೋಟ್ಯಾಂತರ ರೂ. ಆದಾಯ ಹರಿದು ಬರುತ್ತದೆ. ಅದೇ ರೀತಿಯಾಗಿ ಬಿಎಂಟಿಸಿಗೂ ಕೋಟ್ಯಾಂತರ ರೂ. ಆದಾಯ ಹರಿದು ಬಂದಿದೆ. ಇನ್ನು ಆದಾಯದ ಜೊತೆಗೆ M.G.ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ಕಸ ಕೂಡ ಸಂಗ್ರಹವಾಗಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಕೋಟಿ ಕೋಟಿ ರೂ. ಆದಾಯ ಬಂದಿದೆ. ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗುವವರ ಅನುಕೂಲ ದೃಷ್ಟಿಯಿಂದ ಬಿಎಂಟಿಸಿ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿತ್ತು. ನಿನ್ನೆ ಮಧ್ಯರಾತ್ರಿ ಎರಡು ಗಂಟೆಯವರೆಗೆ ಬಿಎಂಟಿಸಿ ಬಸ್ಗಳು ಸಂಚಾರ ಮಾಡಿದ್ದವು. ನಿನ್ನೆ ಒಂದೇ ದಿನ 35 ಲಕ್ಷದ 70 ಸಾವಿರದ 842 ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದರಿಂದ 5 ಕೋಟಿ 48 ಲಕ್ಷದ 89 ಸಾವಿರ 254 ರೂ. ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಜನರ ಹೊಳೆ: ಮೆಟ್ರೋ ಖಜಾನೆಗೆ ಕಳೆ, ಬರೋಬ್ಬರಿ 2 ಕೋಟಿ ರೂ ಆದಾಯ
ಡಿಸೆಂಬರ್ 31 ರಂದು ನಗರದ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಎಂಜಿ ರಸ್ತೆಯಿಂದ ನಗರದ 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಕಾರ್ಯಚರಣೆ ಮಾಡಿದ್ದವು.
15 ಮೆಟ್ರಿಕ್ ಟನ್ ಕಸ ಸಂಗ್ರಹ
ಇನ್ನು ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಎಫೆಕ್ಟ್ ಜೋರಾಗಿ ತಟ್ಟಿದಂತಿದೆ. ಏಕೆಂದರೆ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ಕಸ ಸಂಗ್ರಹವಾಗಿದೆ. ತಡರಾತ್ರಿ ಮೂರು ಗಂಟೆಯಲ್ಲಿ ಪಾಲಿಕೆ ಕಾರ್ಯಾಚರಣೆ ನಡೆಸಿ 70 ಪೌರಕಾರ್ಮಿಕರಿಂದ ಎಂ.ಜಿ.ರಸ್ತೆ ಸ್ವಚ್ಛತೆ ಮಾಡಲಾಗಿದೆ. ಆ ಮೂಲಕ ಪಾಲಿಕೆ ಸಿಬ್ಬಂದಿ 15 ಮೆಟ್ರಿಕ್ ಟನ್ ಕಸ ಸಂಗ್ರಹಿಸಿದ್ದು, 25 ಆಟೋ, 3 ಕಾಂಪ್ಯಾಕ್ಟರ್ಗಳ ಮೂಲಕ ಕಸವನ್ನು ವಿಲೇವಾರಿ ಮಾಡಲಾಗಿದೆ.
ಇದನ್ನೂ ಓದಿ: New Year 2025: ಹೊಸ ವರ್ಷದ ಸೆಲೆಬ್ರೇಷನ್ ಅಂದರೆ ಮತ್ತೇರುವಂತೆ ಕುಡಿದು ರಸ್ತೆಗಳಲ್ಲಿ ಓಲಾಡುವುದಾ?
ಹೊಸ ವರ್ಷದ ಸಂಭ್ರಮಕ್ಕಾಗಿ ಹೊಟ್ಟೆಗೆ ಎಣ್ಣೆ ಹಾಕಿಕೊಂಡವರಿಂದ ಸರ್ಕಾರಕ್ಕೆ 308 ಕೋಟಿ ರೂ ಆದಾಯ ಬಂದಿದ್ದರೆ, ಮೋಜು ಮಸ್ತಿ ಮಾಡಲು ಹೋದವರಿಂದ 8 ಕೋಟಿ ರೂಪಾಯಿಯಷ್ಟು ಆದಾಯ ಬಂದಿದ್ದು ಮಾತ್ರ ವಿಶೇಷ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.