ದೊಡ್ಡಬಳ್ಳಾಪುರಕ್ಕೆ ಕಾಲಿಟ್ಟ ಮಕ್ಕಳ ಕಳ್ಳರ ವದಂತಿ: ಮಕ್ಕಳಿಗೆ ಚಾಕೊಲೇಟ್ ನೀಡಲು ಬಂದ ಮಹಿಳೆಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಮಕ್ಕಳ ಕಳ್ಳರ ವದಂತಿ ಹಾವಳಿ ಹೆಚ್ಚಾಗಿದ್ದು ನೆರಳಘಟ್ಟ ಗ್ರಾಮಕ್ಕೆ ಬಂದಿದ್ದ ಮಹಿಳೆ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಮಕ್ಕಳ ಕಳ್ಳಿ ಎಂದು ಭಾವಿಸಿ ಮಹಿಳೆಯನ್ನು ಜನರು ಥಳಿಸಿದ್ದಾರೆ.
ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹೆಚ್ಚಾಗುತ್ತಿದ್ದು ಎಲ್ಲಂದರಲ್ಲಿ ಸಂಶಯ ಬಂದವರ ಮೇಲೆ ಹಲ್ಲೆ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದ ಈ ವದಂತಿ ಈಗ ಬೆಂಗಳೂರಿನ ಮಂದಿಯ ನಿದ್ದೆ ಕೆಡಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲೂ ಮಕ್ಕಳ ಕಳ್ಳರ ವದಂತಿ ಹಾವಳಿ ಹೆಚ್ಚಾಗಿದ್ದು ನೆರಳಘಟ್ಟ ಗ್ರಾಮಕ್ಕೆ ಬಂದಿದ್ದ ಮಹಿಳೆ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಮಕ್ಕಳ ಕಳ್ಳಿ ಎಂದು ಭಾವಿಸಿ ಮಹಿಳೆಯನ್ನು ಜನರು ಥಳಿಸಿದ್ದಾರೆ. ಬಳಿಕ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶೌಚಾಲಯಕ್ಕೆ ತೆರಳುತ್ತಿದ್ದ ಇಬ್ಬರು ಮಕ್ಕಳಿಗೆ ಮಹಿಳೆ ಚಾಕೊಲೇಟ್ ಆಮಿಷವಡ್ಡಿ ಚಾಕೊಲೇಟ್ ಕೊಡ್ತಿನಿ ಬಾ ಎಂದು ಮಕ್ಕಳನ್ನ ಎಳೆದಾಡಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆತಂಕದಿಂದ ಓಡಿಬಂದ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಮಹಿಳೆಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದ್ರೆ ಬಲೂನು ಮಾರಲು ಗ್ರಾಮಕ್ಕೆ ಬಂದಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರ ವಿಚಾರಣೆ ಬಳಿಕವಷ್ಟೇ ಸತ್ಯ ತಿಳಿದುಬರಲಿದೆ. ಇದನ್ನೂ ಓದಿ: Egg: ಮೊಟ್ಟೆಗಳ ಸಂಗ್ರಹಣೆ ಮತ್ತು ಆಹಾರ ನಿರ್ವಹಣೆ ಸಲಹೆಗಳು ಇಲ್ಲಿವೆ
ಮಕ್ಕಳ ಕಳ್ಳರ ವದಂತಿ ಸುಳ್ಳು ಎಂದ ಎಸ್ಪಿ ಆನಂದಕುಮಾರ
ಇನ್ನು ಮತ್ತೊಂದು ಕಡೆ ವಿಜಯಪುರ ನಗರದಲ್ಲಿ ಮಕ್ಕಳ ಕಳ್ಳರು ಎಂಬ ಸಂಶಯದ ಮೇಲೆ ನಾಲ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಬೆನ್ನಲ್ಲೆ ಮಕ್ಕಳ ಕಳ್ಳರ ವದಂತಿಯ ಕುರಿತು ವಿಜಯಪುರ ಎಸ್ಪಿ ಆನಂದಕುಮಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆಂದು ಸುಳ್ಳು ವದಂತಿ ಸೃಷ್ಟಿಸಲಾಗಿದೆ. ಈ ರೀತಿ ಸುಳ್ಳು ವದಂತಿ ಸೃಷ್ಟಿಸುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ವದಂತಿಗಳಿಂದ ಅಮಾಯಕರ ಮೇಲೆ ಹಲ್ಲೆಗಳಾಗುತ್ತಿದೆ. ಮಕ್ಕಳ ಕಳ್ಳರು ಬಂದಿದ್ದಾರೆಂದು ಕೆಲ ಕಿಡಿಗೇಡಿಗಳು ವದಂತಿ ಹರಡುತ್ತಿದ್ದಾರೆ. ಆಡಿಯೋ, ವಿಡಿಯೋ ಹರಿಬಿಟ್ಟು ಕಿಡಿಗೇಡಿಗಳು ಆತಂಕ ಸೃಷ್ಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ 112 ಗೆ ಕರೆ ಮಾಡುವಂತೆ ಎಸ್ಪಿ ಆನಂದಕುಮಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:08 am, Sun, 25 September 22