ನೈಸರ್ಗಿಕ ಹೂವು ಬಳಕೆಗೆ ಕರೆ: ಕೃತಕ ಹೂವು ಬಳಸದಂತೆ ರಾಜ್ಯದ ಹೂವು ಬೆಳೆಗಾರರಿಂದ ವಿನೂತನ ಜಾಗೃತಿ
ತೋಟಗಾರಿಕೆ ಇಲಾಖೆ-ಕರ್ನಾಟಕ ಸರ್ಕಾರ, ಅಂತರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ನಿ., ಹೆಬ್ಬಾಳ, ಜಿ.ಎಫ್.ಸಿ.ಐ., ಅಗ್ರಿ ಪ್ಲಾಸ್ಟ್, ರಾಜ್ಯದ ಹೂ ಬೆಳೆಗಾರರು/ ಖರೀದಾರರ ಸಹಯೋಗದಲ್ಲಿ ಇಂದು ರಾಜ್ಯದ ಹೂವು ಬೆಳೆಗಾರರಿಂದ ಲಾಲ್‌ಬಾಗ್ ಉದ್ಯಾನವನದಲ್ಲಿ ಸುಮಾರು 2 ಲಕ್ಷ ಹೂವುಗಳನ್ನ ಜನರಿಗೆ ಉಚಿತವಾಗಿ ವಿತರಿಸುವ ಮೂಲಕ ವಿನೂತನ ಜನಜಾಗೃತಿ ಕಾರ್ಯಕ್ರಮ ಮಾಡಲಾಗಿದೆ.
ಬೆಂಗಳೂರು, ಡಿಸೆಂಬರ್ 31: ರಾಜ್ಯದಲ್ಲಿ ದಿನೇ ದಿನೇ ಕೃತಕ ಹೂಗಳ (artificial flowers) ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಹೂವು ಬೆಳೆಗಾರರ ಜೀವನ ತೊಂದರೆಗೀಡು ಮಾಡಿದೆ. ಹೂವು ಬೆಳೆಗಾರರನ್ನ ಬೀದಿಗೆ ತಳ್ಳಿರುವ ಕೃತಕ ಹೂವುಗಳ ಬಳಕೆಗೆ ಕಡಿವಾಣ ಹಾಕುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯದ ಹೂವು ಬೆಳೆಗಾರರಿಂದ ಲಾಲ್‌ಬಾಗ್ ಉದ್ಯಾನವನದಲ್ಲಿ ಸುಮಾರು 2 ಲಕ್ಷ ಹೂವುಗಳನ್ನ ಜನರಿಗೆ ಉಚಿತವಾಗಿ ವಿತರಿಸುವ ಮೂಲಕ ವಿನೂತನ ಜನಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಪ್ಲಾಸ್ಟಿಕ್ ಹಾಗೂ ಸಿಂಥಟಿಕ್ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದಷ್ಪರಿಣಾಮಗಳು ಹಾಗೂ ರೈತರಿಗೆ ಆಗುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.
ತೋಟಗಾರಿಕೆ ಇಲಾಖೆ-ಕರ್ನಾಟಕ ಸರ್ಕಾರ, ಅಂತರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ನಿ., ಹೆಬ್ಬಾಳ, ಜಿ.ಎಫ್.ಸಿ.ಐ., ಅಗ್ರಿ ಪ್ಲಾಸ್ಟ್, ರಾಜ್ಯದ ಹೂ ಬೆಳೆಗಾರರು/ ಖರೀದಾರರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ದಿ ಆಯುಕ್ತ ಶಾಲಿನಿ ರಜನೀಶ್ ಅವರು ಮಾತನಾಡಿ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆಯಾಗಿ ಹೂವುಗಳನ್ನು ಬೆಳೆಯಲಾಗುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳಿಗೆ ಇಲ್ಲಿನಿಂದಲೇ ಹೂವುಗಳನ್ನು ರಫ್ತು ಮಾಡಲಾಗುತ್ತಿದೆ. ಕೃತಕ ಹೂಗಳನ್ನ ಬಿಟ್ಟು ಜನರು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಹೂವುಗಳನ್ನ ಬಳಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ‘ಗೆಲೋರ್ ಆಫ್ ಮಿಸ್ಟ್ರಿಸ್’ ಕೃತಿ ಬಿಡುಗಡೆ ಮಾಡಿದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಗಡೆ
ಕೃತಕ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಅಷ್ಟೇ ಅಲ್ಲದೇ ರಾಜ್ಯದ ಹೂವು ಬೆಳೆಗಾರರಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮದ ಕೈಗೊಳ್ಳುವಂತೆ ಬೆಳೆಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿಎಂ ಅರವಿಂದ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪುಷ್ಪ ಬೆಳೆಗಳನ್ನು ಸುಮಾರು 38000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಾಣಿಜ್ಯ ಬೆಳೆಗಳನ್ನು ಸುಮಾರು 1500 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಗುಲಾಬಿ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಕನಕಾಂಬರ ಇತ್ಯಾದಿ ಬಿಡಿ ಹೂಗಳನ್ನು ಹಾಗೂ ಕಟ್ ಗುಲಾಬಿ, ಕಟ್ ಸೇವಂತಿಗೆ, ಜೆರ್ಬೆರ, ಆಂತುರಿಯಮ್ಸ, ಆರ್ಕಿಡ್ಸ್ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಹಸಿರು ಮನೆ/ ಪಾಲಿಮನೆಯಲ್ಲಿ ಬೆಳೆಲಾಗುತ್ತಿದೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಇದರ ಮೇಲೆ ಅವಲಂಬಿತವಾಗಿದೆ.
ಅಲ್ಲದೆ, ರಾಜ್ಯದಲ್ಲಿ 2.8 ಲಕ್ಷ ಏಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಮ್ಯಾರಿಗೋಲ್ಡ್, ಸಂಪಂಗಿ, ಕನಕಾಂಬರ ಸೇರಿದಂತೆ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಇದರ ಮೇಲೆ ಅವಲಂಬಿತರಾಗಿರುವ ಜನರ ಸಂಖ್ಯೆ 52 ಲಕ್ಷಕ್ಕೂ ಹೆಚ್ಚು. ಕೃತಕ ಹೂವುಗಳ ಬಳಕೆಯಿಂದ ರೈತರುಗಳು ಉತ್ತಮ ದರ ದೊರಕದೆ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಜನರು ಕೃತಕ ಹೂವುಗಳನ್ನ ಬಿಟ್ಟು ನೈಸರ್ಗಿಕ ಹೂವುಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಕೃತಕ ಹೂಗಳಿಂದಾಗುತ್ತಿರುವ ದುಷ್ಪರಿಣಾಮ
ರೈತರ ಆದಾಯದಲ್ಲಿ ಕುಸಿತ: ಪ್ರತಿ ಏಕರೆಗೆ 50 ಲಕ್ಷ ರೂಪಾಯಿಗಳ ಬಂಡವಾಳವನ್ನು ಹೂಡುವ ಮೂಲಕ ಪಾಲಿ ಹೌಸ್ ಸೇರಿದಂತೆ ಹಲವಾರು ಉಪಕರಣಗಳ ಖರೀದಿಗೆ ರೈತರು ಮುಂದಾಗಿದ್ದಾರೆ. ಸರಿಯಾದ ಪ್ರಮಾಣದ ಬೆಲೆ ದೊರೆಕದೆ ಇದ್ದಲ್ಲಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಅಲ್ಲದೆ ರೈತರ ಆದಾಯ ಕುಸಿತದಿಂದಾಗಿ ಮಾಡಿರುವ ಸಾಲ ತೀರಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ಆಯೋಜನೆ
ಪ್ರತಿವರ್ಷ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದ್ದು, ನೈಸರ್ಗಿಕ ಹೂಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು ಹೂ ಬೆಳೆಗಾರರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಲಿದೆ. ಹೊಸ ವರ್ಷದ ಈ ಶುಭ ಸಂಧರ್ಭದಲ್ಲಿ ಜನರು ನೈಸರ್ಗಿಕ ಹೂವುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗಬೇಕು ಎಂದರು.
ರಾಜ್ಯದ ರೈತರು ಬೆಳೆದಿರುವಂತ ವಿವಿಧ ತಳಿಯ ಕಟ್ ಗುಲಾಬಿ ಮಾರಾಟನ್ನು ಲಾಲ್ ಬಾಗ್ನ 4ಕ್ಕೂ ದ್ವಾರಗಳಲ್ಲಿ ಆಯೋಜಿಸಲಾಗಿತ್ತು. ನೈಸರ್ಗಿಕ ಹೂಗಳನ್ನು ಬಳಸುವ ಬಗ್ಗೆ ಅಳವಡಿಸಲಾಗಿದ್ದ “ Selfie Point ” ಜನರು ಚಿತ್ರಗಳನ್ನು ತಗೆದುಕೊಂಡರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.