ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಡಿಸಿಎ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನ ನಿಲ್ಲಿಸಿದ್ದಾರೂ ಅವುಗಳನ್ನು ತುಂಬಿಕೊಂಡು ಹೋಗಿ ಒಂದು ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 20: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚು ಕಾಲ ಹಳೇ ವಾಹನಗಳನ್ನು ನಿಲ್ಲಿಸಿದರೂ ಟೋಯಿಂಗ್ ಮಾಡಲಾಗುವುದು. ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನಗಳನ್ನು ನಿಲ್ಲಿಸಿದ್ದಾರೋ ಅದನ್ನು ತುಂಬಿಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ
ವಿಧಾನಸೌಧದಲ್ಲಿಂದು ಜಿಬಿಎ 5 ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯದ ಸಿದ್ಧತೆಯ ಕುರಿತು ಅಧಿಕಾರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂರ್ವಭಾವಿ ಸಭೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೇ ವಾಹನಗಳನ್ನು ಟೋಯಿಂಗ್ ಮಾಡಲು ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ, ಗಿಡ್ಡೇನಹಳ್ಳಿಗಳಲ್ಲಿ ಜಾಗ ನಿಗದಿ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ಹೈಕೋರ್ಟ್ ತರಾಟೆ
ಬೆಂಗಳೂರಲ್ಲಿ ಇನ್ಮುಂದೆ ಟೋಯಿಂಗ್ ಪ್ರಾರಂಭವಾಗಲಿದೆ. ಆ ಮೂಲಕ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ. ನಾನ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು. ಎಲ್ಲಾ ಕಾರ್ಪೊರೇಷನ್ಗೂ ಎರಡೆರಡು ಟೋಯಿಂಗ್ ವಾಹನ ನೀಡಿದ್ದು, ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಫ್ಲೆಕ್ಸ್ ಹಾಕಿದರೆ 1 ಲಕ್ಷ ರೂ ದಂಡ
ವ್ಯಾಪಾರ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲಿ ವ್ಯಾಪಾರ ಮಾಡಬೇಕು ಅಂತ ನಿಗದಿ ಮಾಡುತ್ತೇವೆ. ಯಾರು ನೋಂದಣಿ ಮಾಡಿದ್ದಾರೆ ಅವರಿಗೆ ಮಾತ್ರ ಅವಕಾಶ ನೀಡಬೇಕು. ಇದಕ್ಕೆ ಎಲ್ಲಾ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಾರ್ಟಿಯವರು ಫ್ಲೆಕ್ಸ್ ಹಾಕುತ್ತಾರೆ. ಯಾರು ಫ್ಲೆಕ್ಸ್ ಹಾಕ್ತಾರೆ ಅವರಿಗೆ 50 ಸಾವಿರದಿಂದ 1 ಲಕ್ಷ ರೂ ದಂಡ ಹಾಕಬೇಕು. ಈ ಬಗ್ಗೆ ಪೊಲೀಸರಿಗೂ, ಕಾರ್ಪೊರೇಷನ್ನವರಿಗೆ ತಿಳಿಸಿದ್ದೇನೆ, ಕೇಸ್ ಹಾಕುತ್ತೇವೆ ಎಂದಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಹಾಕಬಾರದು, ಯಾರೇ ಇದ್ದರೂ ಎತ್ಕೊಂಡು ಹೋಗಬೇಕು. 30 ಸಾವಿರ ಜನ ತಳ್ಳೋ ಗಾಡಿ ಬೇಕು ಎಂದು ಕೇಳಿದ್ದಾರೆ, ಟೆಂಡರ್ ಕರೆದಿದ್ದೇವೆ. ಎಲ್ಲಿ ಬೇಕು ಅಷ್ಟೇ ವ್ಯಾಪಾರ ಮಾಡಬೇಕು. ಐಡೆಂಟಿಟಿ ಕಾರ್ಡ್ ಇದರೆ ಅಷ್ಟೇ ಮಾರಾಟ ಮಾಡಬೇಕು. ಇನ್ನು ಪಾರ್ಕ್ನಲ್ಲಿ ಅನಧಿಕೃತ ಕೆಲಸ ನಡೆಯುತ್ತಿವೆ ಅಂತ ಆರೋಪವಿದೆ ಹೀಗಾಗಿ ಪಾರ್ಕ್ ಟೈಮ್ ನಿಗದಿ ಮಾಡುತ್ತೇವೆ. ಈ ಬಗ್ಗೆ ಐದು ಪಾಲಿಕೆಯ ಲೋಕಲ್ ಎಂಎಲ್ಎಗಳು ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ ನೋಡಿ
ಫುಟ್ ಪಾತ್ ಪಾಲಿಸಿ ತರಬೇಕು ಅಂತ ಇದೆ. ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಇದರಿಂದ ಸಮಸ್ಯೆ ಆಗಿದೆ. ಹೀಗಾಗಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಈ ಸಮಸ್ಯೆ ನಿಲ್ಲಿಸಬೇಕು ಅಂತ ಪಾಲಿಸಿ ಮಾಡಬೇಕು ಎಂದಿದ್ದಾರೆ.
ವಾರ್ಡ್ ವೈಸ್ ಬಜೆಟ್ಗೆ ಒತ್ತಾಯ
ಇನ್ನು ಜಿಬಿಎ ಬಜೆಟ್ ಸಭೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಇಂದು ಬೆಂಗಳೂರು ನಗರದ ಶಾಸಕರ ಜೊತೆ ಬಜೆಟ್ ಸಭೆ ಆಗಿದೆ. ಪ್ರಮುಖ ನಿರ್ಣಯ ಆಗಿದೆ. ಅಶೋಕ್ ಕೂಡ ಬಂದಿದ್ದರು. ಅಭಿಪ್ರಾಯ ತಿಳಿಸಿದ್ದಾರೆ. ವಾರ್ಡ್ ವೈಸ್ ಬಜೆಟ್ ನೀಡಬೇಕು ಎಂದು ಒತ್ತಿಯಿಸಿದ್ದಾರೆ ಎಂದರು. ಇನ್ನು ಶಾಸಕರಿಂದ ವಾರ್ಡಿಗೆ 5-10 ಕೋಟಿ ರೂ ಅನುದಾನ ಬೇಡಿಕೆ ವಿಚಾರವಾಗಿ ಮಾತನಾಡಿದ್ದು, ನೋಡೋಣ ಎಷ್ಟಾಗಲಿದೆ. ಅವರು ಆಕಾಶನೂ ಕೇಳ್ತಾರೆ, ಭೂಮಿನೂ ತಂದು ಕೊಡಿ ಅಂತ ಕೇಳುತ್ತಾರೆ. ನಮ್ಮಿಂದ ಎಷ್ಟಾಗಲಿದೆ ಅನ್ನೋದು ನೋಡಿ ಕೊಡುತ್ತೇವೆ ಎಂದರು.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:54 pm, Fri, 20 March 26
