ಮರಗಳು ಧರೆಗೆ, ನೀರು ರಸ್ತೆಗೆ: ಬೆಂಗಳೂರಿನಲ್ಲಿ ಮಳೆಯ ಅವಾಂತರಗಳು ಒಂದೆರಡಲ್ಲ
Bengaluru Rain: ಬೆಂಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಇನ್ನು ಬೃಹತ್ ಮರ ಮತ್ತು ಕಂಬಗಳು ಉರುಳಿಬಿದ್ದು ಅವಾಂತರಗಳು ಸಂಭವಿಸಿವೆ.

ಬೆಂಗಳೂರು, ಮೇ 21: ರಾಜಧಾನಿ ಬೆಂಗಳೂರಿನಲ್ಲಿ (Bangaluru) ಸಂಜೆಯಾಗುತ್ತಿದ್ದಂತೆ ದಿಢೀರನೆ ವಾತಾವರಣ ಬದಲಾಗಿದ್ದು, ಮಹಾನಗರದ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಧಾರಾಕಾರ ಮಳೆ (Rain) ಸುರಿದಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿರುವ ಬೆನ್ನಲ್ಲೇ ಇತ್ತ ಸಿಟಿ ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನು ದಿಢೀರ್ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಸಾರ್ವಜನಿಕರು ಮತ್ತು ಸವಾರರು ಪರದಾಡಿದರು.
ಏಲ್ಲೆಲ್ಲಿ ಮಳೆ?
ವಿಜಯನಗರ, ಶಾಂತಿನಗರ, ಲಾಲ್ಬಾಗ್, ಕಬ್ಬನ್ಪಾರ್ಕ್, ಕೆ.ಆರ್.ಮಾರ್ಕೆಟ್, ಜಯನಗರ, ರಾಜಾಜಿನಗರ, ವಸಂತನಗರ, ವಿಧಾನಸೌಧ, ಮೈಸೂರು ರಸ್ತೆ, ಮಾಗಡಿ ರಸ್ತೆ, ಬಸವೇಶ್ವರನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಲ್ಸನ್ಗಾರ್ಡನ್, ಮೆಜೆಸ್ಟಿಕ್ ಸುತ್ತಮುತ್ತ, ಮೈಸೂರು ಬ್ಯಾಂಕ್ ವೃತ್ತ, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಧರೆಗುರುಳಿದ ಬೃಹತ್ ಮರಗಳು, ವಿದ್ಯುತ್ ಕಂಬಗಳು: ವಾಹನ ಜಖಂ
ಭಾರೀ ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿ ಅವಾಂತರಗಳು ಸಂಭವಿಸಿವೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಬಳಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಇಂದಿರಾನಗರ 16ನೇ ಕ್ರಾಸ್‌ನಲ್ಲೂ ಮರ ನೇರವಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಎರಡೂ ಕಡೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: Karnataka Weather Forecast: ಕರ್ನಾಟಕದಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ?
ಕೆ.ಆರ್.ಪುರಂನ ದೂರವಾಣಿ ನಗರದ ಚರ್ಚ್ ಬಳಿ ಮಳೆಯ ರಭಸಕ್ಕೆ ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದು ದೂರವಾಣಿ ನಗರ-ರಾಮಮೂರ್ತಿನಗರ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಜಿನಗರದ ಕೇತಮಾರನಹಳ್ಳಿಯ ವರದರಾಜಸ್ವಾಮಿ ದೇಗುಲದಲ್ಲಿದ್ದ ಬೃಹತ್ ಮರವೂ ಧರೆಗುರುಳಿ ದೇಗುಲದ ಮೇಲ್ಚಾವಣಿಯ ಮೇಲೆ ಬಿದ್ದು, ಕೂಡಲೇ ಮರ ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಭಾರೀ ಮಳೆಗೆ ಅಂಡರ್ ಪಾಸ್ ಬಂದ್
ಇನ್ನು ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ಸಿಲುಕಿದ್ದಾರೆ. ಕೇವಲ ಅರ್ಧ ಗಂಟೆ ಸುರಿದ ಮಳೆಗೇ ನಗರದ ಹೃದಯಭಾಗ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಿ.ಮೀಟರ್‌ಗಟ್ಟಲೆ ವಾಹನ ದಟ್ಟಣೆ ಉಂಟಾಗಿದೆ.
ಬಸ್ ನಿಲ್ದಾಣ, ಸ್ಕೈವಾಕ್‌ಗಳೇ ಆಶ್ರಯ
ಧಾರಾಕಾರ ಮಳೆ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ. ಕನ್ನಿಂಗ್‌ಹ್ಯಾಮ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿದ ಸವಾರರು, ಮಳೆ ನಿಲ್ಲುವವರೆಗೂ ಬಸ್ ನಿಲ್ದಾಣಗಳ ಕೆಳಗೆ ಆಶ್ರಯ ಪಡೆದರು. ಇನ್ನು ಮಾರುಕಟ್ಟೆಗೆ ಬಂದಿದ್ದ ಸಾರ್ವಜನಿಕರು ಮತ್ತು ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದವರು ಅಂಗಡಿ ಮುಂಗಟ್ಟುಗಳ ಮುಂದೆ ಹಾಗೂ ಸ್ಕೈವಾಕ್‌ಗಳ ಕೆಳಗೆ ನಿಂತು ಮಳೆಯಿಂದ ಆಶ್ರಯ ಪಡೆದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Thu, 21 May 26

