ಕ್ಯಾಂಡಿ ಕ್ರಷ್‌ನಲ್ಲಿ ಕನ್ನಡಿಗನ ಕಮಾಲ್, ಬಿಹಾರದ ಶುಭಂ ದಾಖಲೆ ಮುರಿದ ಸೂರ್ಯ ರಾಜ್
ಕ್ಯಾಂಡಿ ಕ್ರಷ್ ಆಟದಲ್ಲಿ ಉನ್ನತ ಹಂತಗಳನ್ನು ತಲುಪುತ್ತಿರುವ ಆಟಗಾರರ ಸಾಧನೆಗಳ ಬಗ್ಗೆ ಇತ್ತೀಚೆಗೆ ಹೆಚ್ಚಿನ ಗಮನ ಸೆಳೆಯುತ್ತಿದೆ. ಅದರಂತೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗ ಕಮಾಲ್ ಮಾಡಿದ್ದು, ಬಿಹಾರ ಯುವಕನ ಸಾಧನೆಯನ್ನು ಹಿಂದಿಕ್ಕಿದ್ದಾನೆ. ಡಿಜಿಟಲ್ ಮನರಂಜನೆ ಮತ್ತು ಮೊಬೈಲ್ ಗೇಮಿಂಗ್ ಕ್ಷೇತ್ರದಲ್ಲಿ ಆಟಗಾರರು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರುವುದಕ್ಕೂ ಇದು ಉದಾಹರಣೆಯಾಗಿದೆ.

ಬೆಂಗಳೂರು, (ಅಕ್ಟೋಬರ್.28): ಜಾಗತಿಕವಾಗಿ ಜನಪ್ರಿಯವಾಗಿರುವ ಮೊಬೈಲ್ ಗೇಮ್ ಕ್ಯಾಂಡಿ ಕ್ರಷ್ ಸಾಗಾದಲ್ಲಿ 23,585ನೇ ಹಂತ ತಲುಪುವ ಮೂಲಕ ಕನ್ನಡಿಗ ಸೂರ್ಯ ರಾಜ್, ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿಹಾರದ ಶುಭಂ ಕುಮಾರ್ ಅವರು 22,222ನೇ ಹಂತ ತಲುಪಿದ ಸಾಧನೆಗಾಗಿ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯಿಂದ ಕಿಶೋರ ವಿಭಾಗದಲ್ಲಿ ಮಾನ್ಯತೆ ಪಡೆದಿದ್ದರು. ಬಳಿಕ ಅವರು ಇನ್ನಷ್ಟು ಹಂತಗಳನ್ನು ತಲುಪಿರುವುದಾಗಿ ವರದಿಯಾಗಿತ್ತು. ಇದೀಗ ಸೂರ್ಯ ರಾಜ ಅವರು 23,585ನೇ ಹಂತ ತಲುಪುವ ಮೂಲಕ ಬಿಹಾರದ ಶುಭಂ, 23,465ನೇ ಹಂತದ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿರುವ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಮೊನ್ನೇ ಅಂದರೆ ಅಕ್ಟೋಬರ್ 16 ಪ್ರಮಾಣಪತ್ರ, ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ.
ಬಿಹಾರದ ಶುಭಂ ದಾಖಲೆ ಉಡೀಸ್
ಮೊಬೈಲ್ ಗೇಮ್ ‘ಕ್ಯಾಂಡಿ ಕ್ರಷ್ ಸಾಗಾ’ದಲ್ಲಿ ಬಿಹಾರದ 19 ವರ್ಷದ ಶುಭಂ ಕುಮಾರ್ ಎಂಬ ಯುವಕ ಬರೋಬ್ಬರಿ 22,222ನೇ ಲೆವೆಲ್ (ಹಂತ) ತಲುಪುವ ಮೂಲಕ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ಗೆ (International Book of Records) ಸೇರ್ಪಡೆಯಾಗಿದ್ದರು. ಈ ಅಪರೂಪದ ಸಾಧನೆಯನ್ನು ಸಂಸ್ಥೆಯು “ಹೈಯೆಸ್ಟ್ ಲೆವೆಲ್ ಎಚೀವ್ ಇನ್ ಕ್ಯಾಂಡಿ ಕ್ರಷ್ ಸಾಗಾ (ಟೀನೇಜರ್)’ ವಿಭಾಗದ ಅಡಿಯಲ್ಲಿ ದಾಖಲಿಸಿಕೊಂಡಿತ್ತು. ಬೆಂಗಳೂರಿನ ಕತ್ರಿಗುಪ್ಪೆ ಮೂಲದ ಸೂರ್ಯ ರಾಜ್, 23,585ನೇ ಹಂತ ತಲುವ ಮೂಲಕ ಬಿಹಾರದ ಶುಭಂ ಅವರನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದಾರೆ. ಇದರೊಂದಿಗೆ ಕ್ಯಾಂಡಿ ಕ್ರಷ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಕ್ಕೆ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೌರವ ದೊರೆತಿದೆ.
ಇದನ್ನೂ ಓದಿ: ಕ್ಯಾಂಡಿ ಕ್ರಷ್‌ನಲ್ಲಿ 22,222ನೇ ಲೆವೆಲ್ ತಲುಪಿ ವಿಶ್ವ ದಾಖಲೆ ಬರೆದ 19 ವರ್ಷದ ಬಿಹಾರದ ಯುವಕ!
‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆ ನೀಡಿರುವ ಪ್ರಮಾಣಪತ್ರದಲ್ಲಿ ‘ಕ್ಯಾಂಡಿ ಕ್ರಷ್ ಸಾಗಾದಲ್ಲಿ ಅತ್ಯುನ್ನತ ಹಂತ ತಲುಪಿದ ಸಾಧನೆ – 23,585ನೇ ಹಂತ’ ಎಂದು ಉಲ್ಲೇಖಿಸಲಾಗಿದೆ. ಸಂಸ್ಥೆಯ ಪರಿಶೀಲನಾ ಸಮಿತಿಯು ಸಾಧನೆಯನ್ನು ಪರಿಶೀಲಿಸಿ ಅನುಮೋದಿಸಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಕ್ಯಾಂಡಿ ಕ್ರಷ್‌ನ ಸಾವಿರಾರು ಹಂತಗಳನ್ನು ದಾಟಲು ತಾಳ್ಮೆ, ನಿರಂತರ ಪ್ರಯತ್ನ ಹಾಗೂ ಏಕಾಗ್ರತೆ ಅಗತ್ಯ. ಆರಂಭದಲ್ಲಿ ಮನರಂಜನೆಗಾಗಿ ಆಡಲು ಪ್ರಾರಂಭಿಸಿದ ಆಟವು ಸೂರ್ಯ ರಾಜ್ ಅವರಿಗೆ ವೈಯಕ್ತಿಕ ಸಾಧನೆಯಾಗಿ ರೂಪುಗೊಂಡಿದೆ.ತಮ್ಮ ಆಸಕ್ತಿಯನ್ನು ನಿರಂತರ ಪ್ರಯತ್ನದ ಮೂಲಕ ಸಾಧನೆಯ ಮಟ್ಟಕ್ಕೆ ಕೊಂಡೊಯ್ದಿರುವ ಸೂರ್ಯ ರಾಜ್ ಅವರ ಈ ಸಾಧನೆ ಗಮನಾರ್ಹವಾಗಿದೆ. ಡಿಜಿಟಲ್ ಮನರಂಜನೆ ಮತ್ತು ಮೊಬೈಲ್ ಗೇಮಿಂಗ್ ಕ್ಷೇತ್ರದಲ್ಲಿ ಆಟಗಾರರು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರುವುದಕ್ಕೂ ಇದು ಉದಾಹರಣೆಯಾಗಿದೆ.
ಕ್ಯಾಂಡಿ ಕ್ರಷ್ ಸಾಗಾ ಒಂದು ಜನಪ್ರಿಯ ಪಝಲ್ ಗೇಮ್ ಆಗಿದ್ದು, ಇದರಲ್ಲಿ ಆಟಗಾರರು ಒಂದೇ ಬಣ್ಣದ ಕ್ಯಾಂಡಿಗಳನ್ನು ಜೋಡಿಸುವ ಮೂಲಕ ನಿರ್ದಿಷ್ಟ ಗುರಿಗಳನ್ನು ತಲುಪಬೇಕಾಗುತ್ತದೆ. ಆಟ ಮುಂದುವರಿದಂತೆ ನಿಯಮಗಳಿಗೆ ಅನುಗುಣವಾಗಿ ಪ್ರತಿಯೊಂದು ಹಂತದ ಸವಾಲುಗಳು ಮತ್ತು ಕಠಿಣ ಹಂತಗಳು ಹೆಚ್ಚಾಗುತ್ತಾ ಹೋಗುತ್ತದೆ. ಸಾಧನೆ ಎಂಬುದು ಕೇವಲ ಶೈಕ್ಷಣಿಕ ಅಂಕಗಳು ಅಥವಾ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ, ಸೃಜನಶೀಲತೆ ಮತ್ತು ವೈಯಕ್ತಿಕ ಆಸಕ್ತಿಗಳಲ್ಲೂ ಇರಬಹುದು ಎಂಬುದಕ್ಕೆ ಬೆಂಗಳೂರಿನ ಸೂರ್ಯ ರಾಜ್ ಅವರ ದಾಖಲೆ ಉದಾಹರಣೆಯಾಗಿದೆ. ಆದರೆ, ಮೊಬೈಲ್ ಗೇಮ್‌ನಲ್ಲಿ ಮಾಡಿದ ಸಾಧನೆಯನ್ನು ಶೈಕ್ಷಣಿಕ ಮೇಲುಗೈ ಅಥವಾ ಕಲಿಕಾ ಸಾಮರ್ಥ್ಯ ಹೆಚ್ಚಾಗಿದೆ ಎಂಬುದಕ್ಕೆ ನೇರ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ.




