ನಟ ನಿವಿನ್ ಪೌಲಿಗೆ ಬಿಗ್ ರಿಲೀಫ್: 1.9 ಕೋಟಿ ರೂ. ವಂಚನೆ ಪ್ರಕರಣ ವಜಾಗೊಳಿಸಿದ ಹೈಕೋರ್ಟ್
ಮಲಯಾಳಂ ನಟ ನಿವಿನ್ ಪೌಲಿ ವಿರುದ್ಧದ 1.9 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ‘ಮಹಾವೀರಯಾರ್’ ಚಿತ್ರದ ಸಹ-ನಿರ್ಮಾಪಕರೊಂದಿಗೆ ಇದ್ದ ಹಣಕಾಸು ವಿವಾದ ಸೌಹಾರ್ದಯುತವಾಗಿ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ಎಫ್‌ಐಆರ್ ವಜಾಗೊಳಿಸಿ ನಟನಿಗೆ ದೊಡ್ಡ ರಿಲೀಫ್ ನೀಡಿದೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ಅವರಿಗೆ ಕಾನೂನು ಹೋರಾಟದಲ್ಲಿ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ 1.9 ಕೋಟಿ ರೂಪಾಯಿ ವಂಚನೆ ಮತ್ತು ನಂಬಿಕೆ ದ್ರೋಹದ ಕ್ರಿಮಿನಲ್ ಪ್ರಕರಣವನ್ನು ಕೇರಳ ಹೈಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ. ದೂರುದಾರರು ಹಾಗೂ ನಿವಿನ್ ಪೌಲಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. 2022ರಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡ ‘ಮಹಾವೀರಯಾರ್’ ಮಲಯಾಳಂ ಸಿನಿಮಾದ ಸಹ-ನಿರ್ಮಾಪಕರಾಗಿದ್ದ ಪಿ.ಎಸ್. ಶಮ್ನಾಸ್ ಅವರು ನಿವಿನ್ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿ ದೂರು ನೀಡಿದ್ದರು.
ಶಮ್ನಾಸ್ ನೀಡಿರುವ ದೂರಿನ ಪ್ರಕಾರ, ಸಿನಿಮಾ ಶೂಟಿಂಗ್‌ಗಾಗಿ ಅವರು ಸುಮಾರು 1.9 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದರಿಂದ ಅವರಿಗೆ ನಿವಿನ್ ಪೌಲಿ 95 ಲಕ್ಷ ರೂಪಾಯಿ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ, ನಿರ್ದೇಶಕ ಅಬ್ರಿಡ್ ಶೈನ್ ಅವರ ಮುಂದಿನ ಚಿತ್ರ ‘ಆ್ಯಕ್ಷನ್ ಹೀರೋ ಬಿಜು 2’ನಲ್ಲಿ ಶಮ್ನಾಸ್ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದರು.
ಆದರೆ, ನಂತರದ ದಿನಗಳಲ್ಲಿ ಶಮ್ನಾಸ್ ಅವರ ಕಂಪನಿ ‘ಇಂಡಿಯನ್ ಮೂವೀ ಮೇಕರ್ಸ್’ ಬ್ಯಾನರ್ ಬದಲಿಗೆ, ನಿವಿನ್ ಪೌಲಿ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯ ಒಪ್ಪಂದದ ಆಧಾರದ ಮೇಲೆ ದುಬೈ ಮೂಲದ ಸಂಸ್ಥೆಯೊಂದಿಗೆ 5 ಕೋಟಿ ರೂಪಾಯಿಗೆ ಸಿನಿಮಾದ ವಿತರಣಾ ಹಕ್ಕನ್ನು ಹಸ್ತಾಂತರಿಸಿ ವಂಚಿಸಿದ್ದಾರೆ ಎಂದು ಶಮ್ನಾಸ್ ಆರೋಪಿಸಿದ್ದರು. ಈ ಸಂಬಂಧ ನಿವಿನ್ ಪೌಲಿ ವಿರುದ್ಧ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಿವಿನ್ ಪೌಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಬಾಲಕೃಷ್ಣನ್ ಅವರ ಪೀಠ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ತಮಗೆ ಯಾವುದೇ ದೂರು ಅಥವಾ ಆಕ್ಷೇಪಣೆ ಇಲ್ಲ ಎಂದು ದೂರುದಾರ ಶಮ್ನಾಸ್ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಹೈಕೋರ್ಟ್ ಈ ಅಂತಿಮ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: ರೊಮ್ಯಾಂಟಿಕ್ ಕಾಮಿಡಿ ‘ಬೆತ್ಲಹೆಮ್ ಕುಟುಂಬ ಯುನಿಟ್’ ಈಗ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ಎರಡೂ ಕಡೆಯವರು ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡಿರುವುದನ್ನು ಗಮನಿಸಿದ ನ್ಯಾಯಪೀಠ, ‘ಅರ್ಜಿದಾರರ (ನಿವಿನ್ ಪೌಲಿ) ಮೇಲಿನ ಆರೋಪಗಳು ಸಮಾಜದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವಂತಹ ಸ್ವರೂಪದ್ದಲ್ಲ. ಎರಡೂ ಕಡೆಯವರು ರಾಜಿ ಮಾಡಿಕೊಂಡಿರುವುದರಿಂದ ವಿಚಾರಣೆಯನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಹಾಗೂ ಇದರಿಂದ ಅರ್ಜಿದಾರರು ಶಿಕ್ಷೆಗೆ ಒಳಗಾಗುವ ಸಾಧ್ಯತೆಯೂ ಕ್ಷೀಣವಾಗಿದೆ’ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್ ರದ್ದುಗೊಳಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




