ಬೆಂಗಳೂರಿನಲ್ಲಿ ಹೊಸ ಟ್ರಾಫಿಕ್ ರೂಲ್ಸ್:5 ಫ್ಲೈಓವರ್ಗಳ ಮೇಲೆ ವಾಹನ ಸಂಚಾರಕ್ಕೆ ಬ್ರೇಕ್!
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರಿದೆ. ಇದರ ನಡುವೆ ಅಪಘಾತಗಳ ಸಂಖ್ಯೆ ಸಹ ಹೆಚ್ಚಳವಾಗಿದೆ. ಹೀಗಾಗಿ ಬೆಂಗಳೂರು ಟ್ರಾಫಿಕ್ ರೂಲ್ಸ್ ಬದಲಾವಣೆ ಮಾಡಲಾಗಿದೆ. ಸಂಚಾರ ಸುರಕ್ಷತೆ ಹಿತದೃಷ್ಟಿಯಿಂದ ಬೆಂಗಳೂರಿನ ಐದು ಪ್ರಮುಖ ಫ್ಲೈಓವರ್ಗಳ ಮೇಲೆ ಕೆಲ ಮಾದರಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದಾರೆ. ಯಾವೆಲ್ಲಾ ಫ್ಲೈಓವರ್ ಮೇಲೆ ಯಾವ್ಯಾವ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಆಗಸ್ಟ್ 30): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಪಘಾತಗಳ (Accidents) ತಡೆಗೆ ಸಂಚಾರ ಪೊಲೀಸರು (Traffic Police) ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಂಚಾರ, ಸುರಕ್ಷತೆ ಹಿತದೃಷ್ಟಿಯಿಂದ ಐದು ಫ್ಲೈಓವರ್ಗಳ ಮೇಲೆ ಕೆಲ ಮಾದರಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದಾರೆ. ಬಿಜಿಎಸ್ ಫ್ಲೈಓವರ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಫ್ಲೈಓವರ್(ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ), ಏರ್‌ಪೋರ್ಟ್ ಫ್ಲೈಓವರ್ ರಸ್ತೆಯಲ್ಲಿ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದಾರೆ. ಸೆ.4ರಿಂದ ಬಿಜಿಎಸ್ ಫ್ಲೈಓವರ್, ಏರ್‌ಪೋರ್ಟ್ ಫ್ಲೈಓವರ್ ರಸ್ತೆ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್(ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ) ಹಾಗೂ ಸೆಪ್ಟೆಂಬರ್ 11ರಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಜಾರಿಗೆ ಬರಲಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ, ಏರ್‌ಪೋರ್ಟ್ ಫ್ಲೈಓವರ್‌ನಲ್ಲಿ ಬೈಕ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಮೈಸೂರು ರಸ್ತೆಯ ಬಿಜಿಎಸ್ ಫ್ಲೈ ಓವರ್
ಮೈಸೂರು ರಸ್ತೆಯ ಬಿಜಿಎಸ್ ಫ್ಲೈ ಓವರ್ ನಲ್ಲಿ ದಿನದ 24 ಗಂಟೆಯೂ ಭಾರಿ ಸರಕು ಸಾಗಣಿಕೆ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಇನ್ನು ಬೆಳಗ್ಗೆ 7 ರಿಂದ 11ರವರೆಗೆ ಹಾಗೂ ಸಂಜೆ 4ರಿಂದ 10 ಗಂಟೆಯವರೆಗೆ ಸರಕು ಸಾಗಾಣಿಕೆ ವಾಹನಗಳಿಗೆ ನಿಷೇಧಿಸಲಾಗಿದೆ.
ಇದನ್ನೂ ಓದಿ: ಬೀದಿ ದೀಪ ಲೋಪ: ಸಚಿವರ ಸೂಚನೆಗೂ ಡೋಂಟ್ ಕೇರ್; ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೃಷ್ಣಬೈರೇಗೌಡ
ಪೀಣ್ಯ ಎಲಿವೇಟೆಡ್ ಕಾರಿಡಾರ್
- ದಿನದ 24 ಗಂಟೆ ಪ್ರಯಾಣಿಕರ ಆಟೋ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳು, ಬೆಳಗ್ಗೆ 7ರಿಂದ 11ರವರೆಗೆ
- ಸಂಜೆ 4ರಿಂದ 10ರವರೆಗೆ ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್
- ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧ.
- ಬೈಕ್ ಗಳು, ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ ದಿನದ 24 ಗಂಟೆ ನಿರ್ಬಂಧ
ಡಬಲ್ ಡೆಕ್ಕರ್ ಫ್ಲೈ ಓವರ್ (ಸಿಲ್ಕ್ ಬೋರ್ಡ್ ನಿಂದ ರಾಗಿಗುಡ್ಡ ವರೆಗೆ)
- ದಿನದ 24 ಗಂಟೆ ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧ
ವಿಮಾನ ನಿಲ್ದಾಣ ರಸ್ತೆ ಫ್ಲೈ ಓವರ್
- ದಿನದ 24 ಗಂಟೆ ಬೈಕ್ ಗಳು, ಆಟೋರಿಕ್ಷಾಗಳಿಗೆ ನಿರ್ಬಂಧ.
- ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲಾ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧ.




