SIR: ಬೆಂಗಳೂರಿನ ಅರ್ಧದಷ್ಟು ಮತದಾರರು ASDDO ಪಟ್ಟಿಗೆ; 24 ಲಕ್ಷದಷ್ಟು ಮತದಾರರಿಗೆ ನೋಟಿಸ್
Bengaluru voter list: ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಭಾರೀ ಬದಲಾವಣೆಗಳಾಗಿವೆ. 48% ಮತದಾರರು ASDDO ಪಟ್ಟಿಗೆ ಸೇರಿದ್ದು, 24 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಬೊಮ್ಮನಹಳ್ಳಿ ಸೇರಿ ಐದು ಕ್ಷೇತ್ರಗಳಲ್ಲಿ ಶೇ. 50ಕ್ಕೂ ಹೆಚ್ಚು ಮತದಾರರು ಡೇಂಜರ್ ಝೋನ್‌ನಲ್ಲಿದ್ದಾರೆ.

ಬೆಂಗಳೂರು, ಆಗಸ್ಟ್ 24: ಎಸ್ಐಆರ್ ಪ್ರಕ್ರಿಯೆ (SIR) ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ರಾಜಧಾನಿಯ 25 ವಿಧಾನಸಭಾ ಕ್ಷೇತ್ರಗಳಲ್ಲಿ 40ರಿಂದ 50ಕ್ಕೂ ಹೆಚ್ಚು ಪ್ರಮಾಣದ ಮತದಾರರು ಎಎಸ್ಡಿಡಿಓ (ASDDO) ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅದರಲ್ಲೂ ಐದು ಕ್ಷೇತ್ರಗಳಲ್ಲಿ ಶೇ.50ಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಮನೆ ಖಾಲಿ ಮಾಡಿ ಬೇರೆಡೆ ಶಾಶ್ವತವಾಗಿ ಸ್ಥಳಾಂತರವಾದವರು, ಗೈರುಹಾಜರಾದವರು, ಮೃತಪಟ್ಟವರು ಮತ್ತು ನಕಲಿ ಮತದಾರರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
48% ಪ್ರತಿಶತ ಮತದಾರರು ASDDO ಪಟ್ಟಿಗೆ ಸೇರ್ಪಡೆ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಭಾರೀ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ನೀಡಿರುವ ಮಾಹಿತಿ ಪ್ರಕಾರ, ‘ಬೆಂಗಳೂರಿನಲ್ಲಿ 48% ಪ್ರತಿಶತ ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ASDDO ಪಟ್ಟಿಗೆ ಸೇರಿದವರಲ್ಲಿ ಅತಿ ಹೆಚ್ಚು ಮಂದಿ ಮನೆ ಖಾಲಿ ಮಾಡಿ ಬೇರೆಡೆ ಶಾಶ್ವತವಾಗಿ ಸ್ಥಳಾಂತರವಾಗಿರುವುದು ಪತ್ತೆಯಾಗಿದೆ. ಸುಮಾರು 32.74 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರವಾಗಿರುವುದು ಗೊತ್ತಾಗಿದೆ. 7.27 ಲಕ್ಷ ಮತದಾರರು ಗೈರುಹಾಜರು ಎಂದು ಗುರುತಿಸಲಾಗಿದೆ. 3.19 ಲಕ್ಷ ಮಂದಿ ಮೃತಪಟ್ಟಿರುವುದು ಪತ್ತೆಯಾಗಿದ್ದು, 63 ಸಾವಿರಕ್ಕೂ ಹೆಚ್ಚು ನಕಲಿ ಮತದಾರರನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: SIR ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್; ಸೆ.23ರವರೆಗೆ ಆಕ್ಷೇಪಣೆಗೆ ಅವಕಾಶ
ಇನ್ನು ಕ್ಷೇತ್ರವಾರು ನೋಡುವುದಾದರೆ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರು ASDDO ಪಟ್ಟಿಯಲ್ಲಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 11.07 ಲಕ್ಷ ಅಂದರೆ ಶೇ.51.65ರಷ್ಟು ಮತದಾರರು ಈ ಪಟ್ಟಿಯಲ್ಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ 9.15 ಲಕ್ಷ, ಬೆಂಗಳೂರು ಉತ್ತರದಲ್ಲಿ 11.07 ಲಕ್ಷ ಹಾಗೂ ಒಟ್ಟಾರೆ ಬೆಂಗಳೂರು ನಗರದಲ್ಲಿ 18.13 ಲಕ್ಷ ಮತದಾರರು ASDDO ಪಟ್ಟಿಗೆ ಸೇರಿದ್ದಾರೆ.
ಕ್ಷೇತ್ರವಾರು ASDDO ಪಟ್ಟಿಗೆ ಸೇರಿದ ಮಾಹಿತಿ
- ದಾಸರಹಳ್ಳಿ: ಒಟ್ಟು 4,71,922 ಮತದಾರರು. 2,46,790 ASDDOಗೆ ಸೇರಿದವರು. 52.88%
- ಸಿ.ವಿ.ರಾಮನ್ ನಗರ: ಒಟ್ಟು 2,74,142 ಮತದಾರರು. ASDDO– 1,40,801, 51.36%
- ಬೊಮ್ಮನಹಳ್ಳಿ: ಒಟ್ಟು 4,84,973 ಮತದಾರರು. ASDDO– 2,67,014, 55.06%
- ಬಿಟಿಎಂ ಲೇಔಟ್: ಒಟ್ಟು 2,82,035 ಮತದಾರರು. ASDDO– 1,46,273, 51.86%
- ವಿಜಯನಗರ: ಒಟ್ಟು 3,20,773 ಮತದಾರರು. ASDDO – 1,65,058, 51.45%
ಈ ಐದು ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರು ASDDO ಪಟ್ಟಿಯಲ್ಲಿದ್ದಾರೆ. ಇಲ್ಲಿ ಶೇ.55.06ರಷ್ಟು ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ದಾಸರಹಳ್ಳಿಯಲ್ಲಿ ಶೇ.52.88, ಬಿಟಿಎಂ ಲೇಔಟ್‌ನಲ್ಲಿ ಶೇ.51.86, ವಿಜಯನಗರದಲ್ಲಿ ಶೇ.51.45 ಹಾಗೂ ಸಿ.ವಿ.ರಾಮನ್ ನಗರದಲ್ಲಿ ಶೇ.51.36ರಷ್ಟು ಮತದಾರರು ASDDO ಪಟ್ಟಿಯಲ್ಲಿದ್ದಾರೆ.
ಬೆಂಗಳೂರಲ್ಲೇ ಅತಿ ಹೆಚ್ಚು ಮತದಾರರಿಗೆ ನೋಟಿಸ್
ಇನ್ನು ರಾಜ್ಯದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಬೆಂಗಳೂರಿನ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗ ಬೆಂಗಳೂರಿನಲ್ಲಿ ಒಂದು ಕೋಟಿ ಮೂರು ಲಕ್ಷ ಮತದಾರರನ್ನು ಗುರುತು ಮಾಡಲಾಗಿದ್ದು, ಆಗಸ್ಟ್ 17ರಂದು ಅರ್ಧದಷ್ಟು ಬೆಂಗಳೂರಿನ ಮತದಾರರನ್ನು ಹೊರಗಿಡುವವರ ಪಟ್ಟಿಯನ್ನ ನೀಡಲಾಗಿತ್ತು. ಇದರ ಪೈಕಿ 46.88 ಲಕ್ಷದಷ್ಟು ಮತದಾರರನ್ನು ಎಎಸ್ಡಿಡಿಓ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಮತದಾರರ ಪಟ್ಟಿಯಲ್ಲಿ 11 ವಿದೇಶಿಗರು: ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ
ಇದೀಗ ರಾಜ್ಯ ಚುನಾವಣಾ ಆಯೋಗ ಇಂದು ಮೊದಲ ಕರಡು ಮತದಾರರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಒಟ್ಟು 56.99 ಲಕ್ಷ ಮತದಾರರ ಡಿಜಿಟಲೀಕರಣ ಮಾಡಿರುವ ಮತದಾರರಲ್ಲಿ 24,05,930 ಮತದಾರರಿಗೆ ನೋಟಿಸ್ ನೀಡುವುದಾಗಿ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ 46 ಲಕ್ಷದಷ್ಟು ಮತದಾರರನ್ನು ಎಎಸ್ಡಿಡಿಓ ಹೆಸರಲ್ಲಿ ಕೈಬಿಟ್ಟಿದ್ದು, ಈಗ 23 ಲಕ್ಷದಷ್ಟು ನೋಟಿಸ್ ನೀಡುವ ಮುಖಾಂತರ 69 ಲಕ್ಷ ಮತದಾರರನ್ನು ಕೈ ಬಿಡುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಫಾರ್ಮ 6, ಫಾರ್ಮ್ 8 ಭರ್ತಿ ಮಾಡುವುದರ ಮುಖಾಂತರ ಮತದಾರ ಪಟ್ಟಿಗಳು ಸೇರ್ಪಡೆ ಆಗಲು ಅವಕಾಶ ಕಲ್ಪಿಸಿದೆ.
ಬೆಂಗಳೂರಿನಲ್ಲಿ ನಾಲ್ಕು ಭಾಗಗಳಲ್ಲಿ ನೀಡುವ ನೋಟಿಸ್ ಅಂಕಿ-ಅಂಶಗಳು
- ಬೆಂಗಳೂರು ಉತ್ತರ – 6,13,003
- ಬೆಂಗಳೂರು ಕೇಂದ್ರ – 4,29,364
- ಬೆಂಗಳೂರು ನಗರ – 9,45,998
- ಬೆಂಗಳೂರು ದಕ್ಷಿಣ – 4,17,625
- ಒಟ್ಟು – 24,05,990
ಒಟ್ಟಿನಲ್ಲಿ SIR ಪರಿಷ್ಕರಣೆಯಿಂದ ಬೆಂಗಳೂರಿನ ಅನೇಕ ಕ್ಷೇತ್ರಗಳು ಡೇಂಜರ್ ಝೋನ್‌ನಲ್ಲಿವೆ ಎಂಬ ಚರ್ಚೆ ಶುರುವಾಗಿದೆ. ಆದರೆ ASDDO ಮತ್ತು ನೋಟಿಸ್ ನೀಡುವುದು ಮತದಾರರ ಹೆಸರು ಡಿಲೀಟ್ ಆಗಿದೆ ಎಂದರ್ಥವಲ್ಲ. ಆಕ್ಷೇಪಣೆಗಳ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ ಎಷ್ಟು ಹೆಸರುಗಳು ಉಳಿಯಲಿವೆ ಅನ್ನೋದು ಕೊನೆಯ ಮತದಾರ ಪಟ್ಟಿಯವರಗೂ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 pm, Mon, 24 August 26




