ಪರಿಷತ್ ಚುನಾವಣೆ ಅಡ್ಡಮತದಾನದ ಎಫೆಕ್ಟ್: ಬಿಜೆಪಿ ವರದಿ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಮುನಿಸು!
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆದರೀಗ ಬಿಜೆಪಿಯ ಸತ್ಯಶೋಧನಾ ವರದಿಯಲ್ಲಿ ಜೆಡಿಎಸ್ ಹೆಸರು ಉಲ್ಲೇಖವಾದ ಬಳಿಕ ಪಕ್ಷದ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೈತ್ರಿಯಲ್ಲಿ ಮುನಿಸಿಗೆ ಕಾರಣವಾಗಿದೆ. ವರದಿಯಲ್ಲಿ ಬಿಜೆಪಿಯಿಂದ 4 ಮತ್ತು ಜೆಡಿಎಸ್‌ನಿಂದ 8 ಅಡ್ಡಮತದಾನಗಳಾಗಿವೆ ಎಂದು ಉಲ್ಲೇಖಿಸಲಾಗಿದ್ದು, ದಾಖಲೆಗಳಿಲ್ಲದೆ ಪಕ್ಷದ ಹೆಸರು ಪ್ರಸ್ತಾಪಿಸಿದ್ದಕ್ಕೆ ಜೆಡಿಎಸ್ ಪಾಳಯ ಬೇಸರ ವ್ಯಕ್ತಪಡಿಸಿದೆ.

ಮುಖ್ಯಾಂಶಗಳು
- ಬಿಜೆಪಿಯ ಸತ್ಯಶೋಧನಾ ವರದಿಯಿಂದಾಗಿ ರಾಜ್ಯ ರಾಜಕೀಯದ ಮೈತ್ರಿಕೂಟದಲ್ಲಿ ತೀವ್ರ ಮುನಿಸು ಉಂಟಾಗಿದೆ.
- ದಾಖಲೆಗಳಿಲ್ಲದೆ ಅಡ್ಡಮತದಾನದ ಆರೋಪ ಹೊರಿಸಿದ್ದಕ್ಕೆ ಜೆಡಿಎಸ್ ಶಾಸಕರು ತೀವ್ರ ಆಕ್ರೋಶಗೊಂಡಿದ್ದಾರೆ.
- ವಿವಾದಾತ್ಮಕ ಹೇಳಿಕೆಗಳಿಗೆ ತಕ್ಷಣ ಬ್ರೇಕ್ ಹಾಕುವಂತೆ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಲಾಗಿದೆ.
ಬೆಂಗಳೂರು, ಜುಲೈ 01: ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತಗಳು ಸಿಗದ ಹಿನ್ನೆಲೆಯಲ್ಲಿ ಅಡ್ಡ ಮತದಾನದ (Cross voting) ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಎಮ್ಎಲ್ಸಿ ಸಿಟಿ ರವಿ ನೇತೃತ್ವದ ಸಮಿತಿ ಜೂನ್ 27ರಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಆಂತರಿಕ ವರದಿ ನೀಡಿದ್ದು, ಎನ್‌ಡಿಎ ಮೈತ್ರಿಗೆ ಸೇರಿದ್ದ (ಬಿಜೆಪಿ, ಜೆಡಿಸ್) 12 ಮತಗಳಲ್ಲಿ ಒಂದು ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿಗೂ ಮುನ್ನ ಬಿಜೆಪಿಯಲ್ಲಿದ್ದ ಆಂತರಿಕ ಅಸಮಾಧಾನ ಈಗ ಜೆಡಿಎಸ್ ಹೆಸರಿನ ಉಲ್ಲೇಖದೊಂದಿಗೆ ಮೈತ್ರಿಕೂಟದಲ್ಲಿ ದೊಡ್ಡ ಮಟ್ಟದ ಮುನಿಸಿಗೆ ಕಿಡಿ ಹೊತ್ತಿಸಿದೆ.
ಬಿಜೆಪಿ ಸಲ್ಲಿಸಿರುವ ಸತ್ಯಶೋಧನಾ ವರದಿಯಲ್ಲೇನಿದೆ?
ವಿಧಾನ ಪರಿಷತ್ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲು ಬಿಜೆಪಿ ಹೈಕಮಾಂಡ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಈಗ ಮೈತ್ರಿ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ವರದಿಯಲ್ಲಿ ಬಿಜೆಪಿಯಿಂದ 3 ಅಡ್ಡಮತ ಹಾಗೂ 1 ಅಸಿಂಧು ಮತ ಚಲಾವಣೆಯಾಗಿದೆ. ಜೊತೆಗೆ ಮೈತ್ರಿ ಪಕ್ಷವಾದ ಜೆಡಿಎಸ್‌ನಿಂದ ಬರೋಬ್ಬರಿ 8 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ನಾಯಕರ ಈ ಹೇಳಿಕೆಗಳು ಜೆಡಿಎಸ್ ಪಾಳಯವನ್ನು ಕೆರಳಿಸಿದೆ. ಯಾವುದೇ ಬಲವಾದ ದಾಖಲೆಗಳಿಲ್ಲದೆ ಜೆಡಿಎಸ್ ಶಾಸಕರ ಹೆಸರನ್ನು ಈ ವಿವಾದಕ್ಕೆ ಎಳೆದು ತಂದಿರುವುದಕ್ಕೆ ಪಕ್ಷದ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹೇಳಿಕೆಗೆ ಬ್ರೇಕ್ ಹಾಕಲು ಮನವಿ
ಬಿಜೆಪಿ ನಾಯಕರ ನಿರಂತರ ಆರೋಪಗಳಿಂದಾಗಿ ಜೆಡಿಎಸ್ ಶಾಸಕರ ಮೇಲೆ ಅನಗತ್ಯವಾಗಿ ಅನುಮಾನದ ನೆರಳು ಬೀಳುವಂತಾಗಿದೆ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಪ್ರಮುಖ ಶಾಸಕರು ತಮ್ಮ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ದೂರು ನೀಡಿದ್ದಾರೆ. ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಾಗಿದೆ.
ಇದನ್ನೂ ಓದಿ 12 ಶಾಸಕರು ಅಡ್ಡಮತದಾನ, ಕೋಡ್ ವರ್ಡ್ ಪಾಲಿಸದೇ ಎಡವಟ್ಟು: ಸತ್ಯಶೋಧನಾ ಸಮಿತಿ ವರದಿಯ ಸ್ಫೋಟಕ ಅಂಶ ಬಹಿರಂಗ
ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಅಡ್ಡ ಮತದಾನದ ಕುರಿತು ಅನಗತ್ಯ ಚರ್ಚೆಗಳನ್ನು ನಿಲ್ಲಿಸಲು ಉಭಯ ಪಕ್ಷಗಳ ಹಿರಿಯ ನಾಯಕರು ಸೂಚನೆ ನೀಡಬೇಕು ಎಂದು ಜೆಡಿಎಸ್ ಮನವಿ ಮಾಡಿದೆ. ಮೇಲ್ನೋಟಕ್ಕೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಯೇ ಇದೆಯೆಂಬಂತೆ ಕಂಡರೂ, ಬಿಜೆಪಿ ವರದಿಯ ಬಳಿಕ ಕಿಚ್ಚು ಹೆಚ್ಚಾಗಿರುವುದಂತೂ ಸುಳ್ಳಲ್ಲ.



