Unity Mall: ದೇಶೀಯ ಉತ್ಪನ್ನ, ಕಲೆ ಸಂಸ್ಕೃತಿ ಉತ್ತೇಜನಕ್ಕೆ ಪ್ರತಿ ರಾಜ್ಯದಲ್ಲಿ ಯುನಿಟಿ ಮಾಲ್ ಸ್ಥಾಪನೆಗೆ ಸಿದ್ಧತೆ

ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಹಾಗೂ ಒಂದೇ ಸೂರಿನಡಿ ಆಯಾ ರಾಜ್ಯಗಳ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ.

Unity Mall: ದೇಶೀಯ ಉತ್ಪನ್ನ, ಕಲೆ ಸಂಸ್ಕೃತಿ ಉತ್ತೇಜನಕ್ಕೆ ಪ್ರತಿ ರಾಜ್ಯದಲ್ಲಿ ಯುನಿಟಿ ಮಾಲ್ ಸ್ಥಾಪನೆಗೆ ಸಿದ್ಧತೆ
ನಿರ್ಮಲಾ ಸೀತಾರಾಮನ್
Follow us
TV9 Web
| Updated By: ಆಯೇಷಾ ಬಾನು

Updated on:Feb 02, 2023 | 3:20 PM

ಬೆಂಗಳೂರು: ಫೆಬ್ರವರಿ 1ರ ಬುಧವಾರದಂದು ನಡೆದ ಕೇಂದ್ರ ಬಜೆಟ್​ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಯುನಿಟಿ ಮಾಲ್​ಗಳ(Unity Mall) ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಯುನಿಟಿ​ ಮಾಲ್​ಗಳ ಮೂಲಕ ಪ್ರತಿ ರಾಜ್ಯದಲ್ಲೂ ಪ್ರವಾಸೋದ್ಯಮ ಮತ್ತು ದೇಶೀಯ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಹಾಗೂ ಒಂದೇ ಸೂರಿನಡಿ ಆಯಾ ರಾಜ್ಯಗಳ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಪ್ರತಿ ರಾಜ್ಯದಲ್ಲಿ ಮಾಲ್ ತರಹದ ಮಳಿಗೆಗಳನ್ನು ಕಟ್ಟಿ ಅದರಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಮತ್ತು ಇತರ ಜಿಐ ಟ್ಯಾಗ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತೆ ಎಂದು ಪ್ರವಾಸೋದ್ಯಮ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಕೆಲವು ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ‘ಒಂದು ಜಿಲ್ಲೆ, ಒಂದು ತಾಣ’ ಪ್ರಚಾರದ ಮಾದರಿಯಲ್ಲಿ ಯುನಿಟಿ ಮಾಲ್​ಗಳು ಕೂಡ ಕಾರ್ಯನಿರ್ವಹಿಸಲಿವೆ.

ಏನಿದು ‌ಯುನಿಟಿ ಮಾಲ್?

2023-24ನೇ ಸಾಲಿನ ಬಜೆಟ್‌ ಮಂಡಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಯುನಿಟಿ ಮಾಲ್‌ಗಳನ್ನು ತೆರೆದು ಆಯಾ ರಾಜ್ಯದ ಪ್ರಾದೇಶಿಕ (ODOP- ಒಂದು ಜಿಲ್ಲೆ, ಒಂದು ಉತ್ಪನ್ನ), ಭೌಗೋಳಿಕ ಸೂಚಿಕೆ ಮಾನ್ಯತೆ ಪಡೆದ ಉತ್ಪನ್ನಗಳು ಮತ್ತು ಇತರ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಯುನಿಟಿ ಮಾಲ್‌ಗಳಲ್ಲಿ ದೇಶೀಯ ಹಾಗೂ ಆಯಾ ರಾಜ್ಯದ ಪ್ರಾದೇಶಿಕ ಪ್ರಸಿದ್ಧವಾಗಿರುವ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗುತ್ತದೆ.

ಇದನ್ನೂ ಓದಿ: Budget 2023: ಬಜೆಟ್​ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳಲ್ಲೂ ಕರ್ನಾಟಕಕ್ಕೆ ಪಾಲು; ಸಿಎಂ ಬಸವರಾಜ ಬೊಮ್ಮಾಯಿ

ODOP ಹಾಗಂದ್ರೇನು?

ಒಂದು ಜಿಲ್ಲೆ, ಒಂದು ಉತ್ಪನ್ನವು (One District, One Product) ಸರ್ಕಾರದ ಒಂದು ಉಪಕ್ರಮವಾಗಿದೆ. ಇದು ಪ್ರಾದೇಶಿಕ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಗುರಿಯನ್ನು ಹೊಂದಿದೆ. ಅವುಗಳನ್ನು ಉತ್ಪಾದಿಸುವವರಿಗೆ ಬಂಡವಾಳ ನೀಡುತ್ತದೆ. ಯೋಜನೆಯಡಿಯಲ್ಲಿ, ರಾಜ್ಯವು ಜಿಲ್ಲೆಯ ಮುಖ್ಯ ಉತ್ಪನ್ನವನ್ನು ಗುರುತಿಸುತ್ತದೆ. ಅದರ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಬೆಂಬಲ ನೀಡುತ್ತದೆ. ನಿರ್ದಿಷ್ಟ ಊರು/ಸ್ಥಳದಲ್ಲಿಯೇ ಉತ್ಪಾದಿಸುವ ಪದಾರ್ಥಕ್ಕೆ, ಅದರ ನೈಸರ್ಗಿಕ ಗುಣಮಟ್ಟ, ವೈಶಿಷ್ಟ್ಯತೆಯನ್ನು ಆಧರಿಸಿ ಭೌಗೋಳಿಕ ಸೂಚಿಕೆ (GI) ಟ್ಯಾಗ್ ನೀಡಲಾಗುತ್ತದೆ. ಅಂತಹ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಜಿಐ (ಜಿಯೋಗ್ರಫಿಕಲ್‌ ಇಂಡಿಕೇಶನ್‌ ಟ್ಯಾಗ್-‌ ಜಿಐ ಟ್ಯಾಗ್) ಮಾನ್ಯತೆ ನೀಡುತ್ತದೆ.‌ ಜಿಐ ಟ್ಯಾಗ್‌ ಲಭಿಸಿರುವ ಪದಾರ್ಥಗಳನ್ನು ಉತ್ಪಾದಿಸುವ ಅಥವಾ ಬೆಳೆಯುವವರಿಗೆ ಅವುಗಳ ಮಾರಾಟ ಸಂದರ್ಭದಲ್ಲಿ ಹೆಚ್ಚು ಅನುಕೂಲವಾಗಲಿದೆ. ಇಂತಹ ಉತ್ಪನ್ನಗಳಿಗೆ ಹೆಚ್ಚು ದರ ನಿಗದಿಗೆ ಅವಕಾಶ ಇರುತ್ತದೆ. ಇವುಗಳ ಹೆಸರುಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಇನ್ನು ಮತ್ತೊಂದೆಡೆ ಹಂಪಿ ಮತ್ತು ಮೈಸೂರಿನಂತೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಹೆಚ್ಚಿನ ಸ್ಥಳಗಳನ್ನು ಸೇರಿಸುವ ಕುರಿತು ಸರ್ಕಾರ ಚಿಂತನೆ ನಡೆದಿದೆ. ಹಾಗೂ ಪಶ್ಚಿಮ ಕರಾವಳಿಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರವಾರದಲ್ಲಿ ಜಲ ಕ್ರೀಡೆ, ಮನರಂಜನೆಯೊಂದಿಗೆ ಪ್ರವಾಸೋದ್ಯಮವನ್ನು ಸ್ಥಾಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:20 pm, Thu, 2 February 23