Karnataka Rain: ಹಾನಿಯಾದ ಮನೆ, ಬೆಳೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ರಾಜ್ಯದಲ್ಲಿ ಮಳೆಯಿಂದ ಮನೆ, ಬೆಳೆ ಹಾನಿಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಸಗಿ ರೆಸಾರ್ಟ್ನಲ್ಲಿ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮನೆಗಳಿಗೆ ತುರ್ತು ಪರಿಹಾರ 10 ಸಾವಿರ ರೂ. ನೀಡಿ, ನಂತರ ಮನೆಗಳ ನಿರ್ಮಾಣ ಕೂಡಲೇ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಮನೆ, ಬೆಳೆ ಹಾನಿಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಖಾಸಗಿ ರೆಸಾರ್ಟ್ನಲ್ಲಿ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮನೆಗಳಿಗೆ ತುರ್ತು ಪರಿಹಾರ 10 ಸಾವಿರ ರೂ. ನೀಡಿ, ನಂತರ ಮನೆಗಳ ನಿರ್ಮಾಣ ಕೂಡಲೇ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ರಸ್ತೆ, ಸೇತುವೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯ ದುರಸ್ತಿಗೆ ಆದ್ಯತೆ ನೀಡಬೇಕು. ಮಹಾರಾಷ್ಟ್ರದ ಕೋಯ್ನಾ ಜಲಾಶಯದ ನೀರಿನ ಮಟ್ಟದ ಬಗ್ಗೆ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಜಲಾಶಯಗಳಿಂದ ನೀರು ಹೊರಬಿಡುವ ಮುನ್ನ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವ ಹಾನಿ ಅಥವಾ ಮನೆಗಳಿಗೆ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಿ. ಜನರ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಎನ್ ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು. ಬೆಳೆ ಹಾನಿ, ರಸ್ತೆ ದುರಸ್ತಿ, ಮನೆಗಳ ಹಾನಿ ಬಗ್ಗೆ ಸಮೀಕ್ಷೆ ಸರಿಯಾಗಿ ಆಗಬೇಕು. ಜಿಲ್ಲೆಗಳಲ್ಲಿ ಮುಂದಿನ 5-6 ದಿನಗಳಲ್ಲಿ ಆಗುವ ಮಳೆ ಮುನ್ಸೂಚನೆಯನ್ನು ಗಮನಿಸಬೇಕು. ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು ಎಂದರು. ‘
ಪರಿಹಾರ ಕಾರ್ಯಗಳು ತ್ವರಿತ ಹಾಗೂ ಪಾರದರ್ಶಕವಾಗಿರಬೇಕು. ರಸ್ತೆ ಸಂಪರ್ಕ, ವಿದ್ಯುತ್ ಕಂಬಗಳು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ ವ್ಯವಸ್ಥಿತವಾಗಿ ಪರಿಹಾರ ತಕ್ಷಣವೇ ಒದಗಿಸಲು ಕ್ರಮ ವಹಿಸಬೇಕು. ಭೂಕುಸಿತದ ಸಾಧ್ಯತೆಗಳುಳ್ಳ ಪ್ರದೇಶಗಳಲ್ಲಿ ರಸ್ತೆಗಳನ್ನು ತೆರವುಗೊಳಿಸಬೇಕು. ದುರ್ಬಲ ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ನಿಯೋಜಿಸಬೇಕು. ಕೂಡಲೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಟಾಸ್ಕ್ ಫೋರ್ಸ್ ಸಮೀಕ್ಷೆ ಕೈಗೊಂಡು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ನಿಯಂತ್ರಣಾ ಕೊಠಡಿಗಳು, ಮಳೆ ಹಾಗೂ ಪ್ರವಾಹ ಸ್ಥಿತಿಯ ಕುರಿತ ಅಹವಾಲುಗಳಿಗೆ ಸ್ಪಂದಿಸಬೇಕು. ಎನ್ಡಿಆರ್ಎಫ್ (NDRF) ಹಾಗೂ ಎಸ್ಡಿಆರ್ಎಫ್ (SDRF) ತಂಡಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್ ನೆರವನ್ನು ಒದಗಿಸಬೇಕು. ಎಸ್ಪಿಗಳು ನೆರವಿನ ಮೇಲ್ವಿಚಾರಣೆ ಕೈಗೊಳ್ಳಬೇಕು. ಸಂಬಂಧಿಕರ ಮನೆಗಳಿಗೆ ತೆರಳಿರುವ ಸಂತ್ರಸ್ತರಿಗೆ ಪಡಿತರ ಕಿಟ್ನ್ನು ಕಂದಾಯ ಇಲಾಖೆ ನೀಡುವ ಪಟ್ಟಿಯಂತೆ ಒದಗಿಸಬೇಕು ಎಂದು ಹೇಳಿದ್ದಾರೆ.
ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಶ್ರಮ ವಹಿಸಬೇಕು. ಜಿಲ್ಲಾಡಳಿತದ ವತಿಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ಕಲ್ವರ್ಟ್ ಹಾಗೂ ಟ್ಯಾಂಕ್ ಬಂಡ್ಗಳನ್ನು ತಾತ್ಕಾಲಿಕವಾಗಿ, ತಕ್ಷಣವೇ ಸರಿಪಡಿಸಿ ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಕೃತಿ ವಿಕೋಪ ಪರಿಹಾರದಡಿ ಕೈಗೊಂಡಿರುವ ಮನೆಗಳ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಕಳೆದ ಮೂರು ವರ್ಷಗಳ ಅವಧಿಯ ಮನೆಗಳ ನಿರ್ಮಾಣ ಕಾರ್ಯ ಹಾಗೂ ಅವುಗಳನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಮಾತನಾಡಿದರು.
ಬೆಳೆ ಹಾನಿ ಕುರಿತು ತನಿಖೆ ಕೈಗೊಂಡು ಒಂದು ತಿಂಗಳೊಳಗೆ ಇನ್ ಪುಟ್ ಸಬ್ಸಿಡಿ ವಿತರಿಸಬೇಕು. ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸರ್ಕಾರಿ ಆದೇಶದಲ್ಲಿ ನೀಡಿರುವ ಆಹಾರ ಪಟ್ಟಿಯನ್ನು ಅನುಸರಿಸಬೇಕು ಎಂದು ನುಡಿದರು.
2022-23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಹಿನ್ನೆಲೆ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ದರದಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡಲು ನಿರ್ಧರಿಸಿದೆ.
1. ಮಳೆಯಾಶ್ರಿತ ಬೆಳೆ ಪ್ರತಿ ಹೆಕ್ಟೇರ್ ಮಾರ್ಗಸೂಚಿ ದರ 6,800, ಹೆಚ್ಚುವರಿ ದರ 6,800 , ಪರಿಷ್ಕೃತ ದರ 13,600 ರೂ ನೀಡಲಾಗುವುದು.
2. ನೀರಾವರಿ ಬೆಳೆ ಪ್ರತಿ ಹೆಕ್ಟೇರ್ ಮಾರ್ಗಸೂಚಿ ದರ 13,500, ಹೆಚ್ಚುವರಿ ದರ 11,500, ಪರಿಷ್ಕೃತ ದರ 25,000 ರೂ ನೀಡಲಾಗುವುದು.
3. ಬಹುವಾರ್ಷಿಕ ಬೆಳೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 18,000, ಹೆಚ್ಚುವರಿ ದರ 10,000, ಪರಿಷ್ಕೃತ ದರ 28,000 ರೂ ನೀಡಲಾಗುವುದು.
4. ಪ್ರತಿ 2 ಹೆಕ್ಟೇರ್ಗೆ ಸೀಮಿತಗೊಳಿಸಿ ಇನ್ಪುಟ್ ಸಬ್ಸಿಡಿ ಪಾವತಿಗೆ ರಾಜ್ಯ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ.
Published On - 5:55 pm, Fri, 15 July 22