AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಬಲಿ’: ಎಕ್ಸ್​​ ಪೋಸ್ಟ್​​ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್​​ ಕಿಡಿ

ಕರ್ನಾಟಕದ ಆರ್ಥಿಕ ಸ್ಥಿತಿ ಕುರಿತು ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಗ್ಯಾರಂಟಿ ಯೋಜನೆಯ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿಯನ್ನು ಕಾಂಗ್ರೆಸ್ ಬಲಿ ಕೊಟ್ಟಿದೆ ಎಂದು ಜೆಡಿಎಸ್ ‘ಎಕ್ಸ್’ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. ಮುಂದಿನ ಸಾಲುಗಳಲ್ಲಿ ಹೊಸ ಯೋಜನೆಗಳ ಘೋಷಣೆಗೆ ₹11,000 ಕೋಟಿ ಬೇಡಿಕೆ ಇದ್ದರೂ ಬಜೆಟ್‌ನಲ್ಲಿ ನಯಾಪೈಸೆ ಇಟ್ಟಿಲ್ಲ ಎಂದು ಕಿಡಿ ಕಾರಿದೆ.

'ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಬಲಿ': ಎಕ್ಸ್​​ ಪೋಸ್ಟ್​​ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್​​ ಕಿಡಿ
ಎಕ್ಸ್​​ ಪೋಸ್ಟ್​​ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್​​ ಕಿಡಿImage Credit source: Janata Dal Secular X Page
ಸುನಿಲ್​ ಎಮ್​ ಹೆಚ್​
| Edited By: |

Updated on: Sep 24, 2026 | 12:00 PM

Share

ಬೆಂಗಳೂರು, ಸೆಪ್ಟೆಂಬರ್​​ 24: ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಆರ್ಥಿಕ ಇಲಾಖೆ ಪತ್ರ ವಿಚಾರ ಸಂಬಂಧ ಎಕ್ಸ್​ ಖಾತೆ ಮೂಲಕ ಸರ್ಕಾರದ ವಿರುದ್ಧ ಜೆಡಿಎಸ್​ ವಾಗ್ದಾಳಿ ನಡೆಸಿದೆ. ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಸ್ವತಃ ಹಣಕಾಸು ಇಲಾಖೆಯ ಪತ್ರವೇ ಜಗಜ್ಜಾಹೀರು ಮಾಡಿದೆ. ಸರ್ಕಾರ ಈಗಾಗಲೇ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ಮೀರಿದ್ದು, ಹೊಸ ಯೋಜನೆಗಳಿಗೆ ಸಾಲ ಪಡೆಯಲು ಅವಕಾಶವಿಲ್ಲ ಎಂದು ರಾಜ್ಯದ ಆರ್ಥಿಕ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಬಜೆಟ್ ನಿರ್ವಹಣೆ ಪ್ರಕಾರ ಆದಾಯ ಕೊರತೆ ಶೂನ್ಯವಾಗಿರಬೇಕಿತ್ತು. ಆದರೆ ಈಗ ರಾಜ್ಯದ ಆದಾಯ ಕೊರತೆ ಭರ್ತಿ ₹22,957 ಕೋಟಿಗೆ ತಲುಪಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಿಡಿಗಾಸಿಲ್ಲದೆ ಬೊಕ್ಕಸ ಬರಿದಾಗಿದೆ ಎಂದು ದೂರಿದೆ.

‘ಹೊಸ ಯೋಜನೆಗಳಿಗೆ ಬಜೆಟ್‌ನಲ್ಲಿ ನಯಾಪೈಸೆ ಇಟ್ಟಿಲ್ಲ’

ಗ್ರಾಮೀಣಾಭಿವೃದ್ಧಿ ಇಲಾಖೆಯ ₹10,000 ಕೋಟಿ ವೆಚ್ಚದ 15,000 ಕಿ.ಮೀ ರಸ್ತೆ ಯೋಜನೆಗೆ ಹಣಕಾಸು ಇಲಾಖೆ ಬ್ರೇಕ್ ಹಾಕಿದೆ. ಲೋಕೋಪಯೋಗಿ ಸೇರಿದಂತೆ 3 ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಮೊತ್ತ ಬರೋಬ್ಬರಿ ₹36,136 ಕೋಟಿ ಇದೆ. ಬರಗಾಲದಿಂದ ಸಂಕಷ್ಟದಲ್ಲಿರುವ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕಾದ ₹4,500-₹5,000 ಕೋಟಿ ಹೆಚ್ಚುವರಿ ಸಹಾಯಧನ ಬಾಕಿ ಉಳಿದಿದೆ. ರೈತರ ಹಿತ ಕಾಯಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ಕಣ್ಣಿಗೆ ಕಟ್ಟುವಂತಿದೆ. ಮುಂದಿನ ಸಾಲುಗಳಲ್ಲಿ ಹೊಸ ಯೋಜನೆಗಳ ಘೋಷಣೆಗೆ ₹11,000 ಕೋಟಿ ಬೇಡಿಕೆ ಇದ್ದರೂ ಬಜೆಟ್‌ನಲ್ಲಿ ನಯಾಪೈಸೆ ಇಟ್ಟಿಲ್ಲ ಎಂದು ಜೆಡಿಎಸ್​​ ಕಿಡಿ ಕಾರಿದೆ.

ಇದನ್ನೂ ಓದಿ: ಹೊಸ ಯೋಜನೆಗಳ ಘೋಷಣೆ: ಸಿಎಂ ಡಿ.ಕೆ.ಶಿವಕುಮಾರ್‌ಗೆ ಹಣಕಾಸು ಇಲಾಖೆಯಿಂದ ಮಹತ್ವದ ಎಚ್ಚರಿಕೆ

ಇಲಾಖೆಯ ಅಧಿಕಾರಿಗಳು ವಾಸ್ತವ ಸ್ಥಿತಿ ಮುಂದಿಟ್ಟರೆ ‘ನಾನೇ ಆರ್ಥಿಕ ಸಚಿವ, ಯಾವ ಕಾರ್ಯಕ್ರಮ ನಿಲ್ಲಿಸಬೇಕು ಅಂತ ಗೊತ್ತು’ ಎಂಬ ಡಿಕೆಶಿ ಅವರ ಉಡಾಫೆಯ ಸಮರ್ಥನೆ ದಿವಾಳಿತನದ ಪರಮಾವಧಿ. ಗ್ಯಾರಂಟಿ ಭ್ರಮೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟಿರುವ ಈ ದಿವಾಳಿ ಕಾಂಗ್ರೆಸ್ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಬೇಕಿದೆ ಎಂದು ಜೆಡಿಎಸ್​​ ಆಕ್ರೋಶ ವ್ಯಕ್ತಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​