ಇನ್ನೂ 41 ಲಕ್ಷ ಜನರ ಇ-ಕೆವೈಸಿ ಬಾಕಿ! ನ 10ರೊಳಗೆ ಕಡ್ಡಾಯವಾಗಿ ಮಾಡಿಸುವಂತೆ ಪಡಿತರ ಚೀಟಿದಾರರಿಗೆ ಸೂಚನೆ
ಪಡಿತರ ಚೀಟಿದಾರರಿಗೆ ಇ-ಕೆವೈಸಿ ಕಡ್ಡಾಯವಾಗಿದ್ದು, ನವೆಂಬರ್ 10 ಕೊನೆಯ ದಿನ. ರಾಜ್ಯದಲ್ಲಿ ಸುಮಾರು 41 ಲಕ್ಷ ಫಲಾನುಭವಿಗಳು ಇನ್ನೂ ಇ-ಕೆವೈಸಿ ಮಾಡಿಸಬೇಕಿದೆ. 'ಅನ್ನ ಸೇವೆ' ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ತಪ್ಪಿದರೆ ಪಡಿತರ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

ಬೆಂಗಳೂರು, ನವೆಂಬರ್ 04: ಪಡಿತರ ಚೀಟಿದಾರರು ಮರು ಇ-ಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಬಾಕಿ ಉಳಿದಿರುವ ಎಲ್ಲ ಪಡಿತರ ಚೀಟಿದಾರರು ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ತಪ್ಪದೇ ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚೆನ ನೀಡಿದೆ.
ರಾಜ್ಯದಲ್ಲಿ ಇನ್ನೂ 41.33 ಲಕ್ಷ ಫಲಾನುಭವಿಗಳ ಇ-ಕೆವೈಸಿ ಬಾಕಿ
ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿದ್ದ ಒಟ್ಟು 2,67,64,276 ಪಡಿತರ ಚೀಟಿ ಫಲಾನುಭವಿಗಳ ಪೈಕಿ, ನವೆಂಬರ್ 3 ರವರೆಗೆ 2,26,30,747 ಫಲಾನುಭವಿಗಳು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಇನ್ನುಳಿದ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ.
ನವೆಂಬರ್ 10ರ ಬಳಿಕ ದಿನಾಂಕ ವಿಸ್ತರಣೆ ಇಲ್ಲ
ಈಗಾಗಲೇ ಒಂದು ಬಾರಿ ಇ-ಕೆವೈಸಿ ಮಾಡಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಇನ್ನು ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ನವೆಂಬರ್ 10 ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಮಾಡುವ ವಿಧಾನ ಹೀಗಿದೆ
- ಮೊದಲಿಗೆ ಅನ್ನ ಸೇವೆ ಮೊಬೈಲ್ ಆ್ಯಪ್ಗೆ ಲಾಗಿನ್ ಆಗಬೇಕು. ಇಲ್ಲಿ ‘ಸ್ವಯಂ/ನಾಗರಿಕ’ ಅಥವಾ ‘ಅಧಿಕಾರಿ’ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ‘ಸ್ವಯಂ/ನಾಗರಿಕ’ ಆಯ್ಕೆ ಮಾಡಿಕೊಳ್ಳಬೇಕು.
- ನಂತರ ಕಾಣಿಸುವ ಜಿಲ್ಲೆಗಳ ಪಟ್ಟಿಯಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
- ಬಳಿಕ ನಿಮ್ಮ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ನಂಬರ್ ನಮೂದಿಸಿ.
- ರೇಷನ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆತನ್ನು ನಮೂದಿಸಿ, ಒಟಿಪಿ ಪಡೆಯಿರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸಚಿವ ರಿಜ್ವಾನ್ ಆರ್ಷದ್, ಬರಲಿದೆ ಮೊಬೈಲ್ ಆ್ಯಪ್
- ಮೊಬೈಲ್ಗೆ ಬಂದ OTP ಸಂಖ್ಯೆಯನ್ನು ನಮೂದಿಸಿದ ಕೂಡಲೇ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಪಡಿತರ ಚೀಟಿಗೆ ಸಂಬಂಧಿಸಿದ ಕುಟುಂಬದ ಸದಸ್ಯರ ವಿವರಗಳು ಕಾಣಿಸುತ್ತದೆ.
- ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಯಾರಿಗೆ ಇ-ಕೆವೈಸಿ ಮಾಡಿಸಬೇಕೋ ಅವರನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಸಹಾಯಕ ಆ್ಯಪ್‌ಗಳ ಮೂಲಕ ಮುಖ ಗುರುತಿಸುವಿಕೆ (Face Recognition) ಪ್ರಕ್ರಿಯೆ ಪೂರ್ಣಗೊಳಿಸಿ.
- ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ‘ಇ-ಕೆವೈಸಿ ಯಶಸ್ವಿ’ ಎಂದು ಕಾಣಿಸುತ್ತದೆ. ಈ ಸಂದೇಶ ಬಂದರೆ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




